ಮಂಗಳವಾರ, ಅಕ್ಟೋಬರ್ 26, 2021
21 °C

ದೆಹಲಿಯಲ್ಲಿ ಸೇವಾ ನಿಯಂತ್ರಣ: ಸುಪ್ರೀಂನಿಂದ ಶೀಘ್ರ ಪ್ರತ್ಯೇಕ ಪೀಠ ರಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿಯಲ್ಲಿ ಆಡಳಿತಾತ್ಮಕ ಸೇವೆಗಳನ್ನು ಯಾರು ನಿಯಂತ್ರಿಸಬೇಕು ಎಂಬ ವಿವಾದಾತ್ಮಕ ವಿಷಯವನ್ನು ಬಗೆಹರಿಸುವ ಸಲುವಾಗಿ ದೀಪಾವಳಿ ರಜೆಯ ಬಳಿಕ ಮೂವರು ನ್ಯಾಯಮೂರ್ತಿಗಳ ಪ್ರತ್ಯೇಕ ಪೀಠ ರಚಿಸುವುದಾಗಿ ಸುಪ್ರೀಂ ಕೋರ್ಟ್‌ ಮಂಗಳವಾರ ತಿಳಿಸಿದೆ.

2019ರ ಫೆಬ್ರುವರಿ 14ರಂದು ನ್ಯಾಯಮೂರ್ತಿಗಳಾದ ಎ.ಕೆ.ಸಿಕ್ರಿ ಮತ್ತು ಅಶೋಕ್‌ ಭೂಷಣ್‌ (ಇಬ್ಬರೂ ಈಗ ನಿವೃತ್ತರು) ವಿಭಿನ್ನ ತೀರ್ಪು ನೀಡಿದ್ದರು. ಹೀಗಾಗಿ ದೆಹಲಿಯಲ್ಲಿನ ಸೇವೆಗಳು ಯಾರ ನಿಯಂತ್ರಣದಲ್ಲಿರಬೇಕು ಎಂಬುದನ್ನು ಅಂತಿಮವಾಗಿ ನಿರ್ಧರಿಸಲು ಮೂವರು ನ್ಯಾಯಮೂರ್ತಿಗಳ ಪೀಠ ಸ್ಥಾಪಿಸುವಂತೆ ಮುಖ್ಯ ನ್ಯಾಯಮೂರ್ತಿ ಅವರಿಗೆ ಶಿಫಾರಸು ಮಾಡಿದ್ದರು.

ಆಡಳಿತಾತ್ಮಕ ಸೇವೆಗಳಲ್ಲಿ ದೆಹಲಿ ಸರ್ಕಾರಕ್ಕೆ ಯಾವುದೇ ಅಧಿಕಾರ ಇಲ್ಲ ನ್ಯಾಯಮೂರ್ತಿ ಅಶೋಕ್ ಭೂಷಣ್‌ ತೀರ್ಪು ನೀಡಿದ್ದರು. ಆದರೆ ಸಿಕ್ರಿ ಅವರು ಇದಕ್ಕೆ ಭಿನ್ನವಾದ ತೀರ್ಪು ನೀಡಿದ್ದರು.

‘ದಸರಾ ರಜೆಯ ಬಳಿಕ ನಾವು ಪೀಠವೊಂದನ್ನು ಸ್ಥಾಪಿಸಲೇಬೇಕು. ದೀಪಾವಳಿ ರಜೆಯ ಬಳಿಕ ಈ ವಿಷಯವನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು’ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್‌ ಮತ್ತು ಹಿಮಾ ಕೊಯ್ಲಿ ಅವರಿದ್ದ ಪೀಠ ಹಿರಿಯ ವಕೀಲ ರಾಹುಲ್ ಮೆಹ್ರಾ ಅವರಿಗೆ ತಿಳಿಸಿತು. ಈ ವಿಷಯವನ್ನು ತ್ವರಿತವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂದು ಕೋರಿ ರಾಹುಲ್ ಮಹ್ರಾ ಅವರು ಮನವಿ ಸಲ್ಲಿಸಿದ್ದರು.

ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ನೀಡಿದ ತೀರ್ಪಿನಂತೆ, ಪೊಲೀಸ್‌, ಭೂಮಿ ಮತ್ತು ಕಾನೂನು ಸುವ್ಯವಸ್ಥೆ ವಿಷಯಗಳು ಕೇಂದ್ರದ ನಿಯಂತ್ರಣಕ್ಕೆ ಬರುತ್ತವೆ, ಸೇವೆ ಸಹಿತ ಉಳಿದೆಲ್ಲವೂ ದೆಹಲಿ ಸರ್ಕಾರದ ನಿಯಂತ್ರಣದಲ್ಲಿ  ಇರಬೇಕಾಗುತ್ತದೆ ಎಂದು ಮೆಹ್ರಾ ವಾದಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು