ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟುಗಳ ಮೇಲೆ ಲಕ್ಷ್ಮೀ, ಗಣೇಶ ಚಿತ್ರ: ರಾಜಕೀಯ ಕಿಡಿಹಚ್ಚಿದ ಕೇಜ್ರಿವಾಲ್

ಎಎಪಿ ವಿರುದ್ಧ ಮುಗಿಬಿದ್ದ ಬಿಜೆಪಿ, ಕಾಂಗ್ರೆಸ್‌
Last Updated 27 ಅಕ್ಟೋಬರ್ 2022, 14:20 IST
ಅಕ್ಷರ ಗಾತ್ರ

ನವದೆಹಲಿ: ಕರೆನ್ಸಿ ನೋಟುಗಳ ಮೇಲೆ ಲಕ್ಷ್ಮೀ ಮತ್ತು ಗಣೇಶನ ಚಿತ್ರ ಮುದ್ರಿಸುವಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ನೀಡಿರುವ ಹೇಳಿಕೆ ರಾಜಕಾರಣದಲ್ಲಿ ಕಿಡಿ ಹೊತ್ತಿಸಿದೆ. ಆಮ್‌ ಆದ್ಮಿ ಪಕ್ಷದ ವಿರುದ್ಧ ಬಿಜೆಪಿ, ಕಾಂಗ್ರೆಸ್‌ ಮುಗಿಬಿದ್ದಿದ್ದು, ವಾಕ್ಸಮರ ತೀವ್ರಗೊಂಡಿದೆ.

‘ಹಿಂದೂ ದೇವತೆಗಳ ವಿರುದ್ಧ ಎಎಪಿ ನಾಯಕರು ನೀಡಿದ ಹೇಳಿಕೆಗಳಿಂದ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವುದನ್ನು ಮುಚ್ಚಿಕೊಳ್ಳುವ ಪ್ರಯತ್ನವಿದು’ ಎಂದುಕೆಜ್ರಿವಾಲ್ ಮೇಲೆ ಬಿಜೆಪಿ ನಾಯಕರು ವಾಗ್ದಾಳಿ ಮಾಡಿದ್ದಾರೆ.

ಕಾಂಗ್ರೆಸ್‌ ದೆಹಲಿ ಘಟಕದ ಅಧ್ಯಕ್ಷ ಅನಿಲ್‌ ಕುಮಾರ್‌, ‘ಕೇಜ್ರಿವಾಲ್‌ ತಮ್ಮ ರಾಜಕೀಯ ಚದುರಂಗದಾಟಕ್ಕೆ ಹಿಂದೂ ದೇವತೆಗಳನ್ನು ದಾಳವಾಗಿಸಿಕೊಳ್ಳುತ್ತಿದ್ದಾರೆ. ಸಂವಿಧಾನದ ಜಾತ್ಯತೀತ ತತ್ವಗಳನ್ನು ಉಲ್ಲಂಘಿಸಿರುವ ಕೇಜ್ರಿವಾಲ್‌ ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು’ ಎಂದುಒತ್ತಾಯಿಸಿದ್ದಾರೆ.

ಹಿಂದೂ ದೇವತೆಗಳನ್ನು ಬಹಿರಂಗವಾಗಿ ನಿಂದಿಸುವ ಮೂಲಕಎಎಪಿಯ ನಾಯಕರ ಹಿಂದೂ ವಿರೋಧಿ ಮುಖ ಹೊರಬಂದಿತ್ತು. ಗುಜರಾತ್‌ ಮತ್ತು ದೆಹಲಿ ಎಂಸಿಡಿ ಚುನಾವಣೆಗಳ ದೃಷ್ಟಿಯಿಂದ, ಅದನ್ನು ಮುಚ್ಚಿಕೊಳ್ಳಲು ಕೇಜ್ರಿವಾಲ್‌ ನಡೆಸುತ್ತಿರುವ ವಿಫಲ ಯತ್ನವಲ್ಲದೇ ಇದು ಬೇರೇನೂ ಅಲ್ಲ ಎಂದುಬಿಜೆಪಿಯ ದೆಹಲಿ ಸಂಸದ ಮನೋಜ್‌ ತಿವಾರಿ ಹರಿಹಾಯ್ದಿದ್ದಾರೆ.

ಕೆಜ್ರಿವಾಲ್ ಹೇಳಿಕೆಯಲ್ಲಿ ನಿಜವಾಗಿಯೂ ಅರ್ಥವಿದ್ದರೆ, ಹಿಂದೂ ದೇವತೆಗಳ ವಿರುದ್ಧ ಮಾತನಾಡಿರುವದೆಹಲಿಯ ಮಾಜಿ ಸಚಿವರಾಜೇಂದ್ರ ಪಾಲ್ ಗೌತಮ್ ಮತ್ತು ಎಎಪಿಯ ಗುಜರಾತ್ ಘಟಕದ ಅಧ್ಯಕ್ಷ ಗೋಪಾಲ್ ಇಟಾಲಿಯಾ ಅವರನ್ನು ಮೊದಲು ಪಕ್ಷದಿಂದ ಹೊರಗಟ್ಟಲಿ ಎಂದು ಅವರು ಸವಾಲು ಹಾಕಿದರು.

ಮಸೀದಿ ಕೆಡವಿ ಕಟ್ಟಿದ ದೇವಸ್ಥಾನದಲ್ಲಿ ಭಗವಾನ್‌ ರಾಮ ನೆಲೆಸುವುದಿಲ್ಲವೆಂದು ತನ್ನ ಅಜ್ಜಿ ಹೇಳಿರುವುದಾಗಿ ಕೇಜ್ರಿವಾಲ್‌ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ, ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ವಿರೋಧಿಸಿದವರು ಈಗ ಚುನಾವಣೆಗಾಗಿ ಹೊಸ ಮುಖವಾಡ ಧರಿಸಿ ಬಂದಿದ್ದಾರೆ’ ಎಂದು ತಿವಾರಿ ಟೀಕಿಸಿದರು.

ದೆಹಲಿಯಲ್ಲಿ ದೀಪಾವಳಿಯನ್ನು ಪಟಾಕಿಯೊಂದಿಗೆ ಆಚರಿಸಿದರೆ ಕಾನೂನು ಕ್ರಮ ಜರುಗಿಸುವುದಾಗಿ ಎಎಪಿ ಸರ್ಕಾರ ಎಚ್ಚರಿಕೆ ಕೊಟ್ಟಿತ್ತು. ಕೇಜ್ರಿವಾಲ್‌ ಅವರ ಈ ಹೊಸ ಹೇಳಿಕೆ ಬೂಟಾಟಿಕೆಯ ಪ್ರದರ್ಶನ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರ ಕಿಡಿಕಾರಿದರು.

ಬಿಜೆಪಿ ನಾಯಕರ ತೀವ್ರ ವಾಗ್ದಾಳಿಗೆ ತಿರುಗೇಟು ನೀಡಿರುವ ಎಎಪಿಯ ದೆಹಲಿ ಘಟಕದ ಮುಖ್ಯಸ್ಥ, ಸಂಸದ ಸಂಜಯ್‌ ಸಿಂಗ್‌ ‘ಕೇಜ್ರಿವಾಲ್‌ ಅವರು ಮಾಡಿರುವುದು ಬರೀ ಮನವಿ ಅಷ್ಟೇ. ಆದರೆ, ಈ ಪ್ರಸ್ತಾವನೆ ಬಿಜೆಪಿಗೆ ಇರುಸುಮುರುಸು ತಂದಿದೆ’ ಎಂದು ವ್ಯಂಗ್ಯವಾಡಿದ್ದಾರೆ. ಇವರ ಹೇಳಿಕೆಗೆಎಎಪಿ ಶಾಸಕರಾದ ಅತಿಶಿ, ದಿಲೀಪ್‌ ಪಾಂಡೆ ದನಿಗೂಡಿಸಿದ್ದಾರೆ.

ಕೇಜ್ರಿವಾಲ್‌ ಹೇಳಿದ್ದೇನು?
ದೆಹಲಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅರವಿಂದಕೇಜ್ರಿವಾಲ್‌, ‘ದೇಶದ ಆರ್ಥಿಕತೆಯು ಉತ್ತಮ ಸ್ಥಿತಿಯಲ್ಲಿಲ್ಲ. ಕರೆನ್ಸಿ ನೋಟುಗಳ ಮೇಲೆ ಮಹಾತ್ಮ ಗಾಂಧೀಜಿ ಭಾವಚಿತ್ರದ ಜತೆಗೆ ಲಕ್ಷ್ಮೀದೇವಿ, ಗಣೇಶನ ಚಿತ್ರಗಳನ್ನು ಹಾಕಬೇಕೆಂಬುದು ನನ್ನ ಬಯಕೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತೇನೆ’ ಎಂದು ತಿಳಿಸಿದ್ದರು.

‘ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಲು ಸಾಕಷ್ಟು ಪ್ರಯತ್ನಿಸಬೇಕಿದೆ. ಕೆಲವೊಮ್ಮೆ ನಾವು ಎಷ್ಟೇ ಪ್ರಯತ್ನಿಸಿದರೂ ಉತ್ತಮ ಫಲಿತಾಂಶ ದೊರೆಯಲ್ಲ. ಇದಕ್ಕೆ ದೇವರ ಆಶೀರ್ವಾದ ಬೇಕಿರುತ್ತದೆ. ಅದಕ್ಕಾಗಿ ನೋಟುಗಳಲ್ಲಿ ಲಕ್ಷ್ಮಿ ಮತ್ತು ಗಣೇಶ ದೇವರ ಭಾವಚಿತ್ರಗಳಿದ್ದರೆ ಇಡೀ ದೇಶಕ್ಕೆ ಆಶೀರ್ವಾದ ಸಿಗುತ್ತದೆ. ದೇಶವೂ ಅಭಿವೃದ್ಧಿ ಹೊಂದುತ್ತದೆ’ ಎಂದುಕೇಜ್ರಿವಾಲ್ಸಲಹೆ ನೀಡಿದ್ದರು.ಇಂಡೋನೇಷ್ಯಾದಲ್ಲಿ ಕರೆನ್ಸಿ ನೋಟಿನ ಮೇಲೆ ಗಣೇಶ ಚಿತ್ರ ಮುದ್ರಿಸಲಾಗಿದೆ ಎಂದೂ ಹೇಳಿದ್ದರು.

ಸಾಮಾಜಿಕ ಜಾಲತಾಣದಲ್ಲೂ ತೀವ್ರ ಟೀಕೆ
ಕೇಜ್ರಿವಾಲ್‌ ಸಲಹೆ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಕೆಲವು ಜಾಲತಾಣಿಗರು ತೀವ್ರ ಅಪಹಾಸ್ಯ ಮಾಡಿದ್ದಾರೆ. ಕೇಜ್ರಿವಾಲ್‌ ಸಲಹೆಯನ್ನು ಕೆಲವು ನೆಟ್ಟಿಗರು ಗುಜರಾತ್‌ ಚುನಾವಣೆಗೆ ತಳುಕು ಹಾಕಿ, ಪ್ರಶ್ನೆ ಮಾಡಿದ್ದಾರೆ.

ಎಎಪಿ ಮಾಜಿ ನಾಯಕ ಅಶುತೋಷ್‌, ‘ಎಎಪಿ ಮುಖ್ಯಸ್ಥರ ಸಲಹೆಯನ್ನು ಮೋದಿಯವರು ಪಾಲಿಸಬೇಕು. ತಕ್ಷಣವೇ ಎಲ್ಲ ಆರ್ಥಿಕ ಸಲಹೆಗಾರರನ್ನು ಕಿತ್ತೊಗೆಯಬೇಕು. ವಾಹ್‌... ಕೇಜ್ರಿವಾಲ್‌ ಅವರಿಂದ ಎಂತಹ ಅದ್ಭುತ ಆರ್ಥಿಕ ಮಂತ್ರ. ಕೇಜ್ರಿವಾಲ್‌ ಸಲಹೆ ಪಾಲಿಸಿದರೆ ಭಾರತ ಏಳ್ಗೆಯಾಗಲಿದೆ’ ಎಂದು ಮೂದಲಿಸಿ, ಟ್ವೀಟ್‌ ಮಾಡಿದ್ದಾರೆ.

‘ಕೇಜ್ರಿವಾಲ್‌ ವಿವಿಧ ಧರ್ಮಗಳ ನಡುವೆ ವಿಭಜನೆ ಸೃಷ್ಟಿಸಿದ್ದಾರೆ’ ಎಂದು ಚಿತ್ರ ನಿರ್ಮಾಪಕ ಅಶೋಕ್‌ ಪಂಡಿತ್‌ ಟ್ವಿಟರ್‌ನಲ್ಲಿ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವು ನೆಟ್ಟಿಗರು ಕೇಜ್ರಿವಾಲ್‌ ಚಿತ್ರವಿರುವ ನೋಟುಗಳನ್ನು ರೂಪಿಸಿ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು, ಕೇಜ್ರಿವಾಲ್‌ ಅವರದು ಬೂಟಾಟಿಕೆ ಎಂದು ಜರಿದಿದ್ದಾರೆ.

ಕೇಜ್ರಿವಾಲ್‌ ಹೇಳಿಕೆ ಸಮರ್ಥಿಸಿಕೊಂಡಿರುವ ದೆಹಲಿ ಉಪಮುಖ್ಯಮಂತ್ರಿಮನೀಶ್ ಸಿಸೊಡಿಯಾ ಸೇರಿ ಹಲವು ಮಂದಿ ಎಎಪಿ ನಾಯಕರು, ಇದಕ್ಕೆ ಬೆಂಬಲಿಸುವಂತೆ ಟ್ವಿಟರ್‌ನಲ್ಲಿ ಕರೆ ಕೊಟ್ಟಿದ್ದಾರೆ.

ಅಂಬೇಡ್ಕರ್‌ ಚಿತ್ರವೇಕೆ ಬೇಡ: ಮನೀಶ್‌ ತಿವಾರಿ ಪ್ರಶ್ನೆ
ಚಂಡೀಗಢ:
ಕರೆನ್ಸಿ ನೋಟುಗಳಲ್ಲಿ ಬಾಬಾ ಸಾಹೇಬ್‌ ಡಾ.ಬಿ.ಆರ್‌. ಅಂಬೇಡ್ಕರ್‌ ಭಾವಚಿತ್ರ ಮುದ್ರಿಸಬಾರದೇಕೆ? ಎಂದು ಕಾಂಗ್ರೆಸ್‌ ಸಂಸದ ಮನೀಷ್‌ ತಿವಾರಿ ಪ್ರಶ್ನಿಸಿದ್ದಾರೆ.

ಕೇಜ್ರಿವಾಲ್‌ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಅವರು, ‘ಒಂದು ಬದಿ ಮಹಾತ್ಮ ಗಾಂಧಿ ಚಿತ್ರ ಹಾಗೂ ಮತ್ತೊಂದು ಬದಿಯಲ್ಲಿ ಅಂಬೇಡ್ಕರ್‌ ಚಿತ್ರವಿದ್ದರೆ ಹೇಗೆ? ಅಹಿಂಸೆ, ಸಂವಿಧಾನ ಮತ್ತು ಸಮತಾವಾದಗಳು ಒಟ್ಟಾಗಿ ಆಧುನಿಕ ಭಾರತವನ್ನು ಬಹಳ ಉತ್ತಮವಾಗಿ ಪ್ರತಿನಿಧಿಸುತ್ತವೆ’ ಎಂದು ತಿವಾರಿ ಟ್ವೀಟ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.

ಗುಜರಾತ್‌ ವಿಧಾನಸಭೆ ಚುನಾವಣೆಗಾಗಿ ಕೇಜ್ರಿವಾಲ್‌ ಅವರು ಬಿಜೆಪಿಗೆ ಹಿಂದುತ್ವದ ಪೈಪೋಟಿ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್‌ ಪಂಜಾಬ್‌ ಘಟಕದ ಮುಖ್ಯಸ್ಥ ಅಮರಿಂದರ್‌ ಸಿಂಗ್‌ ರಾಜಾ ಟೀಕಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT