ಶುಕ್ರವಾರ, ಫೆಬ್ರವರಿ 3, 2023
23 °C
ಕೃಷಿ ಉಪಕರಣಗಳ ಮೇಲಿನ ಜಿಎಸ್‌ಟಿ ಕಡಿತಕ್ಕೆ ಮನವಿ

ಕಬ್ಬನ್ನು ಬೆಳೆವಿಮೆ ಯೋಜನೆ ಅಡಿ ಪರಿಗಣಿಸಲು ರಾಜ್ಯ ರೈತ ಸಂಘಗಳ ಒಕ್ಕೂಟ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ರೈತರು ಖರೀದಿಸುವ ರಸಗೊಬ್ಬರ, ಕೀಟನಾಶಕ, ಕಳೆನಾಶಕ, ಬಿತ್ತನೆ ಬೀಜ ಮತ್ತು ಕೃಷಿ ಉಪಕರಣಗಳ ಖರೀದಿ ಮೇಲೆ ವಿಧಿಸುವ ಜಿಎಸ್‌ಟಿ ಮೊತ್ತವನ್ನು ಕಡಿತಗೊಳಿಸುವಂತೆ ರಾಜ್ಯ ರೈತ ಸಂಘಗಳ ಒಕ್ಕೂಟ ಕೇಂದ್ರ ಸರ್ಕಾರವನ್ನು ಕೋರಿದೆ.

ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಒಕ್ಕೂಟದ‌ ಅಧಕ್ಷ ಕುರುಬೂರು ಶಾಂತಕುಮಾರ್, ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹಾಗೂ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ರಾಜ್ಯ ಸಚಿವ ಭಗವಂತ‌ ಖೂಬಾ ಅವರಿಗೆ ಈ ಕುರಿತ ಮನವಿ ಸಲ್ಲಿಸಲಾಗಿದೆ ಎಂದರು.

ಪ್ರಸ್ತುತ ಈ ಉತ್ಪನ್ನಗಳ ಮೇಲೆ ಸರ್ಕಾರ‌ ಶೇ 5ರಿಂದ 18ರವರೆಗೆ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಆಕರಿಸುತ್ತಿದೆ. ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಈ ತೆರಿಗೆಯನ್ನು ಶೇ 1ಕ್ಕೆ ಕಡಿತಗೊಳಿಸುವಂತೆ ಕೋರಲಾಗಿದೆ ಎಂದು ಅವರು ತಿಳಿಸಿದರು.

ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ಕಬ್ಬು ಬೆಳೆ ಹಾನಿಗೀಡಾದರೆ ರೈತರಿಗೆ ಯಾವುದೇ ರೀತಿಯ ಪರಿಹಾರ ದೊರೆಯುತ್ತಿಲ್ಲ. ಕಾರಣ, ಸರ್ಕಾರವು ಕಬ್ಬು ಬೆಳೆಯನ್ನು ಪ್ರಧಾನ ಮಂತ್ರಿ ಫಸಲ್‌ ವಿಮಾ ಯೋಜನೆ ಅಡಿ ಸೇರ್ಪಡೆ ಮಾಡುವಂತೆಯೂ ಇದೇ ವೇಳೆ ಒತ್ತಾಯಿಸಲಾಗಿದೆ ಎಂದು ಅವರು ವಿವರಿಸಿದರು.

ಕರ್ನಾಟಕ ಮತ್ತು ಕೇರಳಗಳಲ್ಲಿ ವ್ಯಾಪಕವಾಗಿ ಬೆಳೆಯುವ ವಿವಿಧ ತಳಿಯ ಬಾಳೆಹಣ್ಣಿಗೆ ದೆಹಲಿ ಸೇರಿದಂತೆ ಉತ್ತರ ಭಾರತದ ವಿವಿಧೆಡೆ ಮಾರುಕಟ್ಟೆ ಕಲ್ಪಿಸಬೇಕು. ದಕ್ಷಿಣ ರಾಜ್ಯಗಳಲ್ಲಿ ಬೆಳೆಯಲಾಗುವ‌ ಬಾಳೆ ಹಣ್ಣುಗಳ ಮೇಳವನ್ನು ಈ ಭಾಗದಲ್ಲಿ ಆಯೋಜಿಸುವ ಮೂಲಕ ರೈತರಿಗೆ ಉತ್ತೇಜನ ನೀಡಬೇಕು ಎಂದೂ‌ ಅವರು ಇದೇ ವೇಳೆ ಮನವಿ ಮಾಡಿದರು.

ಕೃಷಿ ಕಾಯ್ದೆ ಕೈಬಿಡಿ: ಕೇಂದ್ರವು ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಯನ್ನು ಕೂಡಲೇ ಕೈಬಿಡಬೇಕು. ರೈತರ ಜೀವನವನ್ನೇ ಬಲಿಕೊಡುವ ಈ ಕಾಯ್ದೆ ಹಿಂದಕ್ಕೆ ಪಡೆಯುವಂತೆ ರೈತರು ಸಲ್ಲಿಸಿರುವ ಬೇಡಿಕೆ ಈಡೇರಿಸಬೇಕು ಎಂದು ಅವರು ಆಗ್ರಹಿಸಿದರು.

ರೈತರ ಪ್ರತಿಭಟನನೆಗೆ ಕೇಂದ್ರ ಸರ್ಕಾರ ಮಣಿಯದಿದ್ದರೆ, ಮುಂಬರುವ ದಿನಗಳಲ್ಲಿ ನಡೆಯುವ ಎಲ್ಲ ರೀತಿಯ  ಚುನಾವಣೆಗಳಲ್ಲಿ ರೈತರು ಬಿಜೆಪಿ ನೇತೃತ್ವದ ಎನ್‌ಡಿಎಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅವರು ಎಚ್ಚರಿಸಿದರು.

'ಕಳೆದ‌ ಎಂಟು ತಿಂಗಳಿಂದ ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ಒಕ್ಕೂಟದ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದೆವು' ಎಂದು ಅವರು ಹೇಳಿದರು.

ರೈತ ಮುಖಂಡರಾದ ವೀರನಗೌಡ ಪಾಟೀಲ, ಎಂ.ಜಿ. ಸಿಂದಗಿ, ಎನ್.ಎಚ್. ದೇವಕುಮಾರ್, ಬಸವರಾಜ ಪಾಟೀಲ, ಅತ್ತಹಳ್ಳಿ ದೇವರಾಜ್, ಬಸವರಾಜ ಯು. ಎಸ್, ರಮೇಶ್ ಹೂಗಾರ, ರೇವಣ್ಣ ಸಿದ್ದಯ್ಯ ಸ್ವಾಮಿ, ಬರಡನಪುರ ನಾಗರಾಜ, ಮಹಾದೇವಪ್ಪ ಶೇರಿಕರ ಹಾಗೂ ವಿ.ಟಿ. ಜಾನ್ ಅವರು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು