ಬುಧವಾರ, ಅಕ್ಟೋಬರ್ 21, 2020
21 °C

ಬಿಹಾರ ಚುನಾವಣೆ| ಡಿಜಿಪಿ ಸ್ಥಾನ ತೊರೆದು ಜೆಡಿಯು ಸೇರಿದ್ದ ಅಧಿಕಾರಿಗಿಲ್ಲ ಟಿಕೆಟ್

ಎಎನ್‌ಐ Updated:

ಅಕ್ಷರ ಗಾತ್ರ : | |

ಪಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಮೊದಲ ಹಂತದ 115 ಅಭ್ಯರ್ಥಿಗಳ ಪಟ್ಟಿಯನ್ನು ಜೆಡಿಯು ಬುಧವಾರ ಬಿಡುಗಡೆ ಮಾಡಿದೆ. ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಆಸೆಯೊಂದಿಗೆ ಡಿಜಿಪಿ ಹುದ್ದೆ ತೊರೆದು ಜೆಡಿಯು ಸೇರಿದ್ದ ಗುಪ್ತೇಶ್ವರ ಪಾಂಡೆ ಅವರಿಗೆ ಪಕ್ಷವು ಟಿಕೆಟ್‌ ನಿರಾಕರಿಸಿದೆ.

ಇದರಿಂದ ಸಹಜವಾಗಿಯೇ ನಿರಾಶೆಗೊಂಡಿರುವ ಪಾಂಡೆ, ‘ಜೀವನದಲ್ಲಿ ನಾನು ಬಹಳ ಹೋರಾಟ ಮಾಡಿದ್ದೇನೆ. ಅಲ್ಲದೆ, ಬಿಹಾರದ ಜನರಿಗಾಗಿ ನಾನು ನನ್ನನ್ನು ಸಮರ್ಪಿಸಿಕೊಂಡಿದ್ದೇನೆ,’ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಉದ್ದೇಶದಿಂದಲೇ ಬಿಹಾರ ಡಿಜಿಪಿ ಹುದ್ದೆಯಿಂದ ಇತ್ತೀಚೆಗಷ್ಟೇ ಅವರು ಸ್ವಯಂ ನಿವೃತ್ತಿ (ವಿಆರ್‌ಎಸ್) ಪಡೆದಿದ್ದರು. ಬಕ್ಸಾರ್‌ ವಿಧಾನಸಭೆ ಕ್ಷೇತ್ರದಿಂದ ಅವರು ಸ್ಪರ್ಧೆ ಮಾಡುವ ನಿರೀಕ್ಷೆಗಳಿದ್ದವು. ಆದರೆ, ಸೀಟು ಹಂಚಿಕೆ ವೇಳೆ ಬಕ್ಸಾರ್‌ ಕ್ಷೇತ್ರ ಬಿಜೆಪಿ ಕೈಸೇರಿದೆ. ಪುರುಷೋತ್ತಮ ಚತುರ್ವೇದಿ ಅವರನ್ನು ಅಭ್ಯರ್ಥಿಯಾಗಿ ಬಿಜೆಪಿಯು ನಿಯೋಜನೆ ಮಾಡಿದೆ.

‘ನನ್ನ ಹಿತೈಷಿಗಳ ಫೋನ್‌ ಕರೆಗಳಿಂದ ನಾನು ಖಿನ್ನನಾಗಿದ್ದೇನೆ. ಅವರ ಆತಂಕವನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಪೊಲೀಸ್‌ ಇಲಾಖೆಯ ನನ್ನ ಕರ್ತವ್ಯದಿಂದ ಮುಕ್ತನಾದ ನಂತರ, ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೆ ನಾನು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ನನಗೆ ಅದರಿಂದ ನಿರಾಶೆಯೂ ಆಗಿಲ್ಲ. ಎಲ್ಲರೂ ತಾಳ್ಮೆಯಿಂದಿರಿ. ನನ್ನ ಜೀವನವನ್ನು ಹೋರಾಟದಲ್ಲಿ ಕಳೆದಿದ್ದೇನೆ. ನನ್ನ ಜೀವನದುದ್ದಕ್ಕೂ ನಾನು ಸಾರ್ವಜನಿಕರ ಸೇವೆ ಮಾಡಿದ್ದೇನೆ. ನನಗೆ ಯಾರೂ ಕರೆ ಮಾಡಬೇಡಿ. ನನ್ನ ಜೀವನವು ಬಿಹಾರದ ಜನರಿಗೆ ಸಮರ್ಪಿತವಾಗಿದೆ. ನನ್ನ ಹುಟ್ಟೂರು ಬಕ್ಸಾರ್‌ನ ಎಲ್ಲಾ ಜಾತಿ ಮತ್ತು ಧರ್ಮದ ಹಿರಿಯ ಸಹೋದರರು, ಸಹೋದರಿಯರು, ತಾಯಂದಿರು ಮತ್ತು ಯುವಕರಿಗೆ ನಾನು ವಂದಿಸುತ್ತೇನೆ. ನಿಮ್ಮ ಪ್ರೀತಿ ಮತ್ತು ಆಶೀರ್ವಾದವನ್ನು ನನ್ನ ಮೇಲೆ ಎಂದಿಗೂ ಹೀಗೆಯೇ ಉಳಿಸಿಕೊಳ್ಳಿ’ ಎಂದು ಪಾಂಡೆ ಹಿಂದಿಯಲ್ಲಿ ಫೇಸ್‌ಬುಕ್ ಪೋಸ್ಟ್‌ ಹಾಕಿದ್ದಾರೆ.

ಸೆ. 22ರಂದು ಗುಪ್ತೇಶ್ವರ ಪಾಂಡೆ ಸೇವಾ ನಿವೃತ್ತಿ ಪಡೆದಿದ್ದರು. ನಿಯಮಾನುಸಾರ ಅವರು ಚುನಾವಣೆಯಲ್ಲಿ ಸ್ಪರ್ಧಿಸಬೇಕಾದರೆ ಸರ್ಕಾರಿ ಸೇವೆಯಿಂದ ನಿವೃತ್ತಿಯಾಗಿ 3 ತಿಂಗಳ ಅವಧಿ ಪೂರ್ಣಗೊಳ್ಳಬೇಕು. ಆದರೆ, ಬಿಹಾರದಲ್ಲಿ ಅಕ್ಟೋಬರ್ 28ರಿಂದ ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ನವೆಂಬರ್ 10ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ.

ಜೆಡಿಯು ಮತ್ತು ಬಿಜೆಪಿಯನ್ನೊಳಗೊಂಡ ಎನ್‌ಡಿಎ ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ವೇಳೆ ಜೆಡಿಯು 122 ಸ್ಥಾನಗಳನ್ನು ಪಡೆದಿದ್ದರೆ ಬಿಜೆಪಿ 121 ಸ್ಥಾನಗಳನ್ನು ತನ್ನ ಪಾಲಿಗೆ ಪಡೆದಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು