ಮಂಗಳವಾರ, ಆಗಸ್ಟ್ 16, 2022
29 °C

ದೆಹಲಿ ಉಪಮುಖ್ಯಮಂತ್ರಿ ಸಿಸೋಡಿಯಾ ನಿವಾಸದ ಮೇಲೆ ಬಿಜೆಪಿ ಕಾರ್ಯಕರ್ತರ ದಾಳಿ: ಎಎಪಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ದೆಹಲಿ: ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ಬಿಜೆಪಿ ಕಾರ್ಯಕರ್ತರು ದಾಳಿ ನಡೆಸಿದ್ದು, ಇದಕ್ಕೆ ದೆಹಲಿ ಪೊಲೀಸರು ಸಹಾಯ ಮಾಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷ ಗುರುವಾರ ಆರೋಪಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌, 'ಮನೀಶ್ ಸಿಸೋಡಿಯಾ ಅವರ ನಿವಾಸದ ಮೇಲೆ ವ್ಯವಸ್ಥಿತ, ಸಂಘಟಿತ ಮತ್ತು ಹಿಂಸಾತ್ಮಕ ದಾಳಿ ನಡೆದಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ' ಎಂದು ಹೇಳಿದ್ದಾರೆ.

'ಸಿಸೋಡಿಯಾ ಅವರು ತಮ್ಮ ಮನೆಯಲ್ಲಿ ಇಲ್ಲದಿರುವಾಗ ಈ ಘಟನೆ ನಡೆದಿದೆ. ಪೊಲೀಸರ ಉಪಸ್ಥಿತಿಯಲ್ಲಿಯೇ ಗೂಂಡಾಗಳು ಅವರ ನಿವಾಸ ಪ್ರವೇಶಿಸಿದ್ದಾರೆ. ದೆಹಲಿಯಲ್ಲಿ ಬಿಜೆಪಿ ದಿನದಿಂದ ದಿನಕ್ಕೆ ಏಕೆ ಹತಾಶವಾಗುತ್ತಿದೆ' ಎಂದು ಕೇಜ್ರಿವಾಲ್‌ ಪ್ರಶ್ನಿಸಿದ್ದಾರೆ.

ಸಿಸೋಡಿಯಾ ನಿವಾಸದ ಮೇಲೆ ದಾಳಿ ನಡೆಸಲು ಬಿಜೆಪಿ ಕಾರ್ಯಕರ್ತರಿಗೆ ಪೊಲೀಸರು ಸಹಾಯ ಮಾಡಿದ್ದಾರೆ ಎಂದು ಎಎಪಿ ವಕ್ತಾರ ಸೌರಭ್‌ ಭಾರದ್ವಾಜ್‌ ಆರೋಪಿಸಿದ್ದಾರೆ.

ಈ ಬಗ್ಗೆ ಗುರುವಾರ ಮಾಧ್ಯಮ ಗೋಷ್ಠಿ ನಡೆಸಿದ ಅವರು, 'ಸಿಸೋಡಿಯಾ ನಿವಾಸದೊಳಗೆ ನುಗ್ಗುತ್ತಿದ್ದ ಗೂಂಡಾಗಳನ್ನು ಪೊಲೀಸರು ತಡೆದಿಲ್ಲ. ಮನೆಯ ಸುತ್ತಲಿನ ಬ್ಯಾರಿಕೇಡ್‌ಗಳನ್ನು ಸಹ ಪೊಲೀಸರು ತೆಗೆದುಹಾಕಿದ್ದಾರೆ' ಎಂದು ಭಾರದ್ವಾಜ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆರೋಪಗಳನ್ನು ದೆಹಲಿ ಪೊಲೀಸರು ತಳ್ಳಿಹಾಕಿದ್ದಾರೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಎಎಪಿ ನಾಯಕಿ ಆತಿಶಿ ಅವರು ದೆಹಲಿಯ ರಾಜಕೀಯ ಇತಿಹಾಸದಲ್ಲಿಯೇ ಇದೊಂದು 'ಕಪ್ಪು ದಿನ' ಎಂದು ಹೇಳಿದ್ದಾರೆ.

'ದೆಹಲಿಯ ರಾಜಕೀಯ ಇತಿಹಾಸದಲ್ಲಿ ಇದು ಕಪ್ಪು ದಿನವಾಗಿದೆ. ಮನೀಶ್ ಸಿಸೋಡಿಯಾ ನಿವಾಸದ ಮೇಳೆ ದಾಳಿ ನಡೆಸಲು ಕೇಂದ್ರ ಗೃಹ ಸಚಿವರು ತಮ್ಮ ಪಕ್ಷದ ಗೂಂಡಾಗಳನ್ನು ಮತ್ತು ದೆಹಲಿ ಪೊಲೀಸರನ್ನು ಬಳಸಿಕೊಂಡಿದ್ದಾರೆ' ಎಂದು ಆತಿಶಿ ಗಂಭೀರ ಆರೋಪ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು