ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದ್ದಕ್ಕೆ ಏರ್ ಇಂಡಿಯಾಗೆ ₹10 ಲಕ್ಷ ದಂಡ

Last Updated 14 ಜೂನ್ 2022, 14:08 IST
ಅಕ್ಷರ ಗಾತ್ರ

ನವದೆಹಲಿ: ಟಿಕೆಟ್ ಇದ್ದರೂ ಪ್ರಯಾಣಿಕರಿಗೆ ಬೋರ್ಡಿಂಗ್ ನಿರಾಕರಿಸಿದ್ದಕ್ಕಾಗಿ ಮತ್ತು ಅದಕ್ಕೆ ಪರಿಹಾರ ನೀಡದೇ ಇದ್ದುದಕ್ಕಾಗಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ₹10 ಲಕ್ಷ ದಂಡ ವಿಧಿಸಿದೆ.

‘ಬೆಂಗಳೂರು, ಹೈದರಾಬಾದ್ ಹಾಗೂ ದೆಹಲಿಯಲ್ಲಿ ನಮ್ಮ ಕಣ್ಗಾವಲು ಘಟಕವು ಪರಿಶೀಲನೆ ನಡೆಸಿದಾಗ, ಏರ್ ಇಂಡಿಯಾ ಸಂಸ್ಥೆ ಮಾರ್ಗಸೂಚಿ (ಪ್ರಯಾಣಿಕರಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿದ್ದು) ಉಲ್ಲಂಘಿಸಿರುವ ಕೆಲವು ನಿರ್ದಿಷ್ಟ ನಿದರ್ಶನಗಳು ಕಂಡುಬಂದಿವೆ. ಈ ಕುರಿತು ಶೋಕಾಸ್ ನೋಟಿಸ್ ನೀಡಲಾಗಿತ್ತು. ವಿಚಾರಣೆಯನ್ನೂ ನಡೆಸಲಾಗಿತ್ತು’ ಎಂದು ಡಿಜಿಸಿಎ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಚಾರಕ್ಕೆ ಸಂಬಂಧಿಸಿ ಏರ್‌ ಇಂಡಿಯಾವು ನೀತಿ ಹೊಂದಿಲ್ಲದಿರಬಹುದು. ಹೀಗಾಗಿ ಪರಿಹಾರ ನೀಡದೇ ಇದ್ದಿರಬಹುದು. ಆದರೆ ಇದು ಗಂಭೀರ ಮತ್ತು ಸ್ವೀಕಾರಾರ್ಹವಲ್ಲದ ಪ್ರಕರಣ. ನಿರ್ದಿಷ್ಟ ಪ್ರಕರಣಗಳಲ್ಲಿ ಶೋಕಾಸ್ ನೋಟಿಸ್ ನೀಡಿ ವಿವರಣೆ ಕೋರಲಾಗಿದೆ. ಏರ್ ಇಂಡಿಯಾ ನೀಡಿರುವ ವಿವರಣೆಯನ್ನು ಪರಿಶೀಲಿಸಿ ₹10 ಲಕ್ಷ ದಂಡ ವಿಧಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.

ಮುಂದಿನ ಕ್ರಮ ಕೈಗೊಳ್ಳುವುದಕ್ಕೂ ಮೊದಲೇ ಪ್ರಯಾಣಿಕರಿಗೆ ಪರಿಹಾರ ನೀಡುವುದಕ್ಕೆ ಸಂಬಂಧಿಸಿ ನೀತಿ ರೂಪಿಸುವಂತೆಯೂ ಏರ್‌ ಇಂಡಿಯಾಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದು ಡಿಜಿಸಿಎ ಹೇಳಿದೆ.

ಟಿಕೆಟ್ ಹೊಂದಿದ್ದು, ಸಮಯಕ್ಕೆ ಸರಿಯಾಗಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕ ಉಪಸ್ಥಿತರಿದ್ದರೂ ಅವರಿಗೆ ವಿಮಾನ ಏರಲು ಅವಕಾಶ ಕೊಡದಿದ್ದರೆ, ವಿಮಾನಯಾನ ಕಂಪನಿಗಳು ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಪ್ರಯಾಣಿಕರಿಗೆ ಒಂದು ತಾಸಿನ ಮೊದಲು ಪರ್ಯಾಯ ವಿಮಾನದ ವ್ಯವಸ್ಥೆ ಮಾಡಿಕೊಟ್ಟರೆ ಯಾವುದೇ ಪರಿಹಾರ ಮೊತ್ತ ಕೊಡಬೇಕಾಗಿಲ್ಲ ಎಂದು ಡಿಜಿಸಿಎ ನಿಯಮಗಳು ಹೇಳುತ್ತವೆ.

ಪ್ರಯಾಣಿಕರು ಸಮಯಕ್ಕೆ ಸರಿಯಾಗಿ ಹಾಜರಿದ್ದರೂ ಕೆಲವು ವಿಮಾನಯಾನ ಕಂಪನಿಗಳು ಅವರಿಗೆ ವಿಮಾನ ಏರಲು ಅವಕಾಶ ಕೊಡದಿರುವುದು ಸರಿಯಾದ ನಡೆಯಲ್ಲ ಎಂದು ಡಿಜಿಸಿಎ ಕಳೆದ ತಿಂಗಳು ಹೇಳಿತ್ತು. ಹೀಗೆ ಅವಕಾಶ ನಿರಾಕರಿಸಿದರೆ, ಅಂತಹ ಪ್ರಯಾಣಿಕರಿಗೆ ಪರಿಹಾರ ನೀಡಬೇಕು ಎಂದು ಅದು ವಿಮಾನಯಾನ ಕಂಪನಿಗಳಿಗೆ ಮೇ 2ರಂದು ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT