ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರನ್ನು ಬಿಟ್ಟು ಹೋಗಿದ್ದಕ್ಕಾಗಿ ‘ಗೋ ಫಸ್ಟ್‌’ಗೆ ಡಿಜಿಸಿಎ ನೋಟಿಸ್‌

Last Updated 10 ಜನವರಿ 2023, 16:42 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬೆಂಗಳೂರಿನ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 55 ಪ್ರಯಾಣಿಕರನ್ನು ಬಿಟ್ಟು ಹೋಗಿದ್ದಕ್ಕಾಗಿ ‘ಗೋ ಫಸ್ಟ್‌’ ವಿಮಾನಯಾನ ಸಂಸ್ಥೆಗೆ ನಾಗರಿಕ ವಿಮಾನಯಾನ ನಿರ್ದೇಶನಾಲಯವು (ಡಿಜಿಸಿಎ) ಮಂಗಳವಾರ ಕಾರಣ ಕೇಳಿ ನೋಟಿಸ್‌ ನೀಡಿದೆ. ಹಲವು ಲೋಪಗಳು ಕಂಡು ಬಂದಿರುವ ಕಾರಣ ನೋಟಿಸ್‌ ನೀಡಿರುವುದಾಗಿ ಅದು ಹೇಳಿದೆ.

ಬೆಂಗಳೂರಿನಿಂದ ದೆಹಲಿಗೆ ಸೋಮವಾರ ಬೆಳಿಗ್ಗೆ ಚಲಿಸಿದ ‘ಗೋ ಫಸ್ಟ್‌’ ಸಂಸ್ಥೆಯ ವಿಮಾನವು (ಜಿ8–116), ವಿಮಾನ ನಿಲ್ದಾಣದಲ್ಲಿ ಪ್ಯಾಸೆಂಜರ್‌ ಕೋಚ್‌ನಲ್ಲಿ (ಬಸ್‌) 55 ಪ್ರಯಾಣಿಕರನ್ನು ಬಿಟ್ಟು ಹೋಗಿತ್ತು.

‘ಸಂವಹನ, ಸಮನ್ವಯದ ಕೊರತೆ ಮತ್ತು ದೃಢಪಡಿಸಿಕೊಳ್ಳುವಲ್ಲಿ ಆಗಿರುವ ತಪ್ಪುಗಳಿಂದ ಈ ಲೋಪ ಸಂಭವಿಸಿದೆ. ಈ ನಿರ್ಲಕ್ಷ್ಯಕ್ಕೆ ತಮ್ಮ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು ಎಂದು ‘ಗೋ ಫಸ್ಟ್‌’ನ ಅಕೌಂಟೆಬಲ್‌ ಮ್ಯಾನೇಜರ್‌/ ಚೀಫ್‌ ಆಪರೇಷನ್‌ ಆಫೀಸರ್‌ಗೆ ಡಿಜಿಸಿಎ ನೋಟಿಸ್‌ ನೀಡಿದೆ. ನೋಟಿಸ್‌ಗೆ ಉತ್ತರಿಸಲು ಎರಡು ವಾರಗಳ ಕಾಲಾವಕಾಶವನ್ನು ನೀಡಲಾಗಿದ್ದು, ವಿವರಣೆ ಬಂದ ಬಳಿಕ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪ್ರಕಟಣೆ ಹೇಳಿದೆ.

‘ಗೋ ಫಸ್ಟ್‌’ನಿಂದ ಕ್ಷಮೆಯಾಚನೆ (ಮುಂಬೈ ವರದಿ):

ಸಿಬ್ಬಂದಿಯಿಂದ ಆದ ಆಚಾತುರ್ಯಕ್ಕಾಗಿ ‘ಗೋ ಫಸ್ಟ್‌’ ವಿಮಾನಯಾನ ಸಂಸ್ಥೆಯು ಪ್ರಯಾಣಿಕರಲ್ಲಿ ಕ್ಷಮೆ ಕೋರಿದೆ. ಲೋಪದಲ್ಲಿ ಭಾಗಿಯಾಗಿರುವ ಎಲ್ಲ ಸಿಬ್ಬಂದಿಯನ್ನು ಕರ್ತವ್ಯದಿಂದ ದೂರವಿಡಲಾಗಿದ್ದು, ಎಲ್ಲರ ವಿರುದ್ಧವೂ ತನಿಖೆಗೆ ಆದೇಶಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಯಾಣಿಕರಿಗೆ ದೆಹಲಿ ಮತ್ತು ಇತರ ಸ್ಥಳಗಳಿಗೆ ಪರ್ಯಾಯ ವಿಮಾನಗಳಲ್ಲಿ ವ್ಯವಸ್ಥೆ ಕಲ್ಪಿಸಲಾಯಿತು ಎಂದೂ ಅದು ಹೇಳಿದೆ.

‘ಬಾಧಿತ ಪ್ರಯಾಣಿಕರಿಗೆ ಮುಂದಿನ 12 ತಿಂಗಳಲ್ಲಿ ದೇಶದ ಯಾವುದೇ ಸ್ಥಳಕ್ಕೆ ಪ್ರಯಾಣಿಸಲು ಒಂದು ಉಚಿತ ಟಿಕೆಟ್ ನೀಡಲು ನಿರ್ಧರಿಸಿರುವುದಾಗಿ’ ಎಂದು ಗೋ ಫಸ್ಟ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT