ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರ್ಫಿ ಜಾವೇದ್‌ ಹೆಸರು ಪ್ರಸ್ತಾಪ: ನಾನೇನೂ ತಪ್ಪು ಹೇಳಿಲ್ಲ: ಚೇತನ್‌ ಭಗತ್‌

ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ನಟಿ, ಮಾಡೆಲ್‌ ಉರ್ಫಿ ಜಾವೇದ್‌ ಹೆಸರು ಪ್ರಸ್ತಾಪ * ಉರ್ಫಿ ಆಕ್ರೋಶ
Last Updated 28 ನವೆಂಬರ್ 2022, 14:29 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲೇಖಕ ಚೇತನ್ ಭಗತ್‌ ಅವರುಇಲ್ಲಿ ನಡೆದ ಸಾಹಿತ್ಯ ಕಾರ್ಯಕ್ರಮವೊಂದರಲ್ಲಿ ಮಾಡಿದ ಭಾಷಣದಲ್ಲಿ ನಟಿ, ರೂಪದರ್ಶಿ ಉರ್ಫಿ ಜಾವೇದ್‌ ಅವರ ಹೆಸರು ಪ್ರಸ್ತಾಪಿಸಿರುವುದು ಉರ್ಫಿ ಅವರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಇನ್‌ಸ್ಟಾಗಾಂ ಪೋಸ್ಟ್‌ನಲ್ಲಿ ಚೇತನ್‌ ಅವರ ವಿರುದ್ಧ ಉರ್ಫಿ ಅವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ತಮ್ಮ ಹೇಳಿಕೆಗೆ ಚೇತನ್‌ ಅವರು ಭಾನುವಾರ ಸ್ಪಷ್ಟನೆಯನ್ನೂ ನೀಡಿದ್ದಾರೆ.

‘ನನಗೆ ಒಂದೂ ಅರ್ಥವಾಗುವುದಿಲ್ಲ. ನಾನು ಲೇಖಕಿಯಲ್ಲ. ನನಗೂ ಸಾಹಿತ್ಯಕ್ಕೂ ಸಂಬಂಧವಿಲ್ಲ. ಆದರೂ ಸಾಹಿತ್ಯದ ಕಾರ್ಯಕ್ರಮವೊಂದರಲ್ಲಿ ನನ್ನ ಹೆಸರನ್ನು ಹೇಳುವ ಔಚಿತ್ಯ ಏನಿತ್ತು ಎಂದು ನನಗೆ ಅರ್ಥವಾಗುತ್ತಿಲ್ಲ’ ಎಂದು ಉರ್ಫಿ ಜಾವೇದ್ ಅವರು ಪೋಸ್ಟ್‌ ಮಾಡಿದ್ದಾರೆ.

ಉರ್ಫಿ ಅವರ ಪೋಸ್ಟ್‌ಗಳಿಗೆ ಪ್ರತಿಕ್ರಿಯಿಸಿ ಟ್ವೀಟ್‌ ಚೇತನ್‌ ಭಗತ್‌ ಅವರು, ‘ನಾನು ಯಾರನ್ನೂ ವಿಮರ್ಶಿಸಿಲ್ಲ. ಇನ್‌ಸ್ಟಾಗ್ರಾಂ ಪೋಸ್ಟ್‌ಗಳನ್ನು ನೋಡಿಕೊಂಡು ನಿಮ್ಮ ಸಮಯ ಹಾಳು ಮಾಡಿಕೊಳ್ಳಬೇಡಿ. ಆರೋಗ್ಯ ಹಾಗೂ ವೃತ್ತಿಯ ಬಗ್ಗೆ ಗಮನಹರಿಸಿ ಎಂದು ಹೇಳಿರುವುದರಲ್ಲಿ ಯಾವ ತಪ್ಪೂ ಇಲ್ಲ’ ಎಂದಿದ್ದಾರೆ.

2018ರಲ್ಲಿ ಮೀಟೂ ಚಳವಳಿ ಸಂದರ್ಭದಲ್ಲಿ ಚೇತನ್‌ ಅವರು ಹುಡುಗಿಯೊಬ್ಬರಿಗೆ ಕಳುಹಿಸಿದ್ದಾರೆ ಎನ್ನಲಾದ ವ್ಯಾಟ್ಸ್‌ಆ್ಯಪ್‌ನ ಸ್ಕ್ರೀನ್‌ಶಾಟ್‌ ಒಂದು ಹರಿದಾಡಿತ್ತು. ಈ ಸ್ಕ್ರೀನ್‌ಶಾಟ್‌ ಅನ್ನು ಪೋಸ್ಟ್‌ ಮಾಡಿರುವ ಉರ್ಫಿ, ‘ನನ್ನ ಪೋಸ್ಟ್‌ಗಳನ್ನು ನೋಡಿ ಯುವಕರು ಹಾಳಾಗುತ್ತಿದ್ದಾರೆ ಎಂದು ಹೇಳಿದ್ದೀರಿ. ನಿಮಗೆ ವಯಸ್ಸಾಗಿದೆ. ನಿಮಗೆ ನನ್ನ ಅಂಕಲ್‌ ಅಥವಾ ಅಪ್ಪನ ವಯಸ್ಸಿರಬಹುದು. ಜೊತೆಗೆ ನಿಮಗೆ ಮದುವೆಯಾಗಿದೆ. ಆದರೂ, ನಿಮ್ಮ ವಯಸ್ಸಿನ ಅರ್ಥದಷ್ಟು ವಯಸ್ಸಾಗಿರುವ ಯುವತಿಯರಿಗೆ ಈ ರೀತಿಯ ಮೆಸೇಜ್‌ ಮಾಡುತ್ತೀರಲ್ಲಾ ಯಾಕೆ? ಎಂದು ಹೇಳಿದ್ದಾರೆ.

ತಮ್ಮ ವ್ಯಾಟ್ಸ್‌ಆ್ಯಪ್‌ ಸ್ಕ್ರೀನ್‌ಶಾಟ್‌ಗಳ ಬಗ್ಗೆ ಪ್ರತಿಕ್ರಿಯಿಸಿರುವ ಚೇತನ್‌, ‘ಸ್ಕ್ರೀನ್‌ಶಾಟ್‌ನಲ್ಲಿರುವ ಹುಡುಗಿಯೊಂದಿಗೆ ನಾನು ಎಂದಿಗೂ ಚಾಟ್‌ ಮಾಡಿಲ್ಲ, ಅವರನ್ನು ಭೇಟಿಯಾಗಿಲ್ಲ. ಇದೊಂದು ಶುದ್ಧ ಸುಳ್ಳು ಆರೋಪ’ ಎಂದಿದ್ದಾರೆ.

ಚೇತನ್‌ ಏನು ಹೇಳಿದ್ದರು?

‘ಸಾಮಾಜಿಕ ಜಾಲತಾಣವು ಯುವಕರ ಚಿತ್ತಭ್ರಮಣೆಗೆ ಕಾರಣವಾಗುತ್ತಿದೆ. ಯುವಕರು ಸದಾ ರೀಲ್ಸ್‌ಗಳನ್ನು ನೋಡುತ್ತಿರುತ್ತಾರೆ. ಹುಡುಗಿಯರ ಫೋಟೊಗಳಿಗೆ ಲೈಕ್‌ ಒತ್ತುತ್ತಾರೆ; ಕಮೆಂಟ್‌ ಹಾಕುತ್ತಾರೆ. ಹೀಗೆ ಕೋಟಿ ಕೋಟಿ ಲೈಕುಗಳು ಬರುತ್ತವೆ. ಅಲ್ಲಿ ಉರ್ಫಿ ಜಾವೆದ್‌ ಅವರ ಫೋಟೊಗಳು ಇರುತ್ತವೆ’ ಎಂದು ಚೇತನ್‌ ಹೇಳಿದ್ದರು. ಉರ್ಫಿ ಜಾವೇದ್‌ ಅವರ ಹೆಸರು ಹೇಳುತ್ತಿದ್ದಂತೆಯೇ ಸಭಿಕರು ಜೋರಾಗಿ ನಕ್ಕಿದ್ದರು.

‘ಇಂಥ ಪೋಸ್ಟ್‌ಗಳು ನಿಮ್ಮ ಪಠ್ಯಕ್ರಮವಾಗಿತ್ತೇ? ಇಂಥದನ್ನು ತಿಳಿದುಕೊಳ್ಳುವುದರಿಂದ ನಿಮಗೆ ಬಡ್ತಿ ಸಿಗುತ್ತದೆಯೇ? ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹೋದಾಗ, ‘ಸರ್‌, ನನಗೆ ಉರ್ಫಿ ಜಾವೇದ್‌ ಅವರ ಎಲ್ಲಾ ಬಟ್ಟೆಗಳ ಪರಿಚಯವಿದೆ’ ಎಂದು ಹೇಳುತ್ತೀರೇ?. ವಿಷಯ ಏನು ಎಂದರೆ, ಇಂಥ ಸಂಗತಿಗಳು ನಿಮ್ಮನ್ನು ಆಕರ್ಷಿಸುತ್ತಿವೆ.’

‘ಇದು ಆಕೆಯ ತಪ್ಪಲ್ಲ. ತನ್ನ ವೃತ್ತಿಯ ಸಲುವಾಗಿ ಆಕೆ ಈ ಎಲ್ಲವನ್ನೂ ಮಾಡುತ್ತಿದ್ದಾರೆ... ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡುವುದಕ್ಕಾಗಿ ನಾನು ಇದನ್ನೆಲ್ಲಾ ಹೇಳುತ್ತಿದ್ದೇನೆ’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT