ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಮಾಧ್ಯಮ ನಿಯಂತ್ರಣ ಮೊದಲಾಗಲಿ: ‘ಸುಪ್ರೀಂ‘ಗೆ ಕೇಂದ್ರದ ಮಾಹಿತಿ

Last Updated 22 ಸೆಪ್ಟೆಂಬರ್ 2020, 13:15 IST
ಅಕ್ಷರ ಗಾತ್ರ

ನವದೆಹಲಿ:ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ರಚಿಸಲು ಸುಪ್ರೀಂಕೋರ್ಟ್‌ ನಿರ್ಧರಿಸಿದ್ದೇ ಆದಲ್ಲಿ, ಮೊದಲು ವೆಬ್‌ ಆಧಾರಿತ ಡಿಜಿಟಲ್‌ ಮಾಧ್ಯಮಕ್ಕೆ ಸಂಬಂಧಿಸಿ ನಿಯಂತ್ರಣ ವ್ಯವಸ್ಥೆಯನ್ನು ರೂಪಿಸಬೇಕು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಮತ್ತೊಮ್ಮೆ ತಿಳಿಸಿದೆ.

ಡಿಜಿಟಲ್ ಮಾಧ್ಯಮ ಪ್ರಸ್ತುತ ಹೆಚ್ಚು ಜನರನ್ನು ತಲುಪುತ್ತಿದೆ. ಆದರೆ, ಈ ಮಾಧ್ಯಮದ ಮೇಲೆ ಯಾವುದೇ ನಿಯಂತ್ರಣ ಇಲ್ಲ ಎಂದೂ ಕೇಂದ್ರ ಸರ್ಕಾರ ತಿಳಿಸಿದೆ.

ಸುದರ್ಶನ್ ಟಿ.ವಿ ಚಾನೆಲ್‌ನಲ್ಲಿ ಪ್ರಸಾರವಾಗುತ್ತಿದ್ದ ‘ಯುಪಿಎಸ್‌ಸಿ ಜಿಹಾದ್‌’ ಕಾರ್ಯಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌, ಇಂಥ ವಿಷಯಗಳ ಕುರಿತು ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. ಈ ಸಂಬಂಧ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಕೇಂದ್ರ ಸರ್ಕಾರ ಈ ಮಾಹಿತಿ ನೀಡಿದೆ.

‘ಡಿಜಿಟಲ್‌ ಮಾಧ್ಯಮದ ಮೂಲಕ ಪ್ರಸಾರವಾಗುತ್ತಿರುವ ಮಾಹಿತಿಯನ್ನು ಪರಿಶೀಲಿಸುವ ವ್ಯವಸ್ಥೆಯೇ ಇಲ್ಲ. ದ್ವೇಷಪೂರಿತ ಮಾಹಿತಿಯ ಜೊತೆಗೆ, ಹಿಂಸೆ, ಭಯೋತ್ಪಾದನೆಯನ್ನು ಪ್ರಚೋದಿಸುವ ಉದ್ದೇಶದ ವಿಷಯಗಳನ್ನು ಈ ಮಾಧ್ಯಮದ ಮೂಲಕ ಪ್ರಸಾರ ಮಾಡಲಾಗುತ್ತಿದೆ‘ ಎಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

‘ವ್ಯಕ್ತಿ ಮತ್ತು ಪ್ರತಿಷ್ಠಿತ ಸಂಸ್ಥೆಗಳ ವರ್ಚಸ್ಸಿಗೆ ಮಸಿ ಬಳಿಯುವಂಥ ಕಾರ್ಯದಲ್ಲೂ ತೊಡಗುವಂಥ ಸಾಮರ್ಥ್ಯವನ್ನೂ ಡಿಜಿಟಲ್‌ ಮಾಧ್ಯಮ ಹೊಂದಿದೆ. ಇಂಥ ಮಾಹಿತಿಯನ್ನೇ ಈ ಮಾಧ್ಯಮದ ಮೂಲಕ ಅತಿರೇಕ ಎನಿಸುವಷ್ಟು ಹಂಚಿಕೆಯಾಗುತ್ತಿದೆ’ ಎಂದೂ ಸಚಿವಾಲಯ ತಿಳಿಸಿದೆ.

‘ಟಿ.ವಿ ವಾಹಿನಿಗಳು ಹಾಗೂ ಅವುಗಳಲ್ಲಿ ಪ್ರಸಾರವಾಗುತ್ತಿರುವ ಕಾರ್ಯಕ್ರಮಗಳಲ್ಲದೇ, ಇತರ ಮಾಧ್ಯಮಗಳ ಮೇಲೂ ನಿಯಂತ್ರಣ ವ್ಯವಸ್ಥೆ ಜಾರಿಗೊಳಿಸಬೇಕು ಎಂಬುದು ಸುಪ್ರೀಂಕೋರ್ಟ್‌ನ ಇರಾದೆಯಾಗಿದ್ದಲ್ಲಿ, ಇಂತಹ ನಿಯಂತ್ರಣ ಕ್ರಮವನ್ನು ಡಿಜಿಟಲ್‌ ಮಾಧ್ಯಮದಿಂದಲೇ ಆರಂಭಿಸುವುದು ಸೂಕ್ತ’ ಎಂದು ಸುಪ್ರೀಂಕೋರ್ಟ್‌ಗೆ ಸಚಿವಾಲಯ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT