ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ನಗದು ಪಾವತಿಗಿಂತ ಅಧಿಕಗೊಳ್ಳಲಿದೆ ಡಿಜಿಟಲ್ ಪಾವತಿ: ನರೇಂದ್ರ ಮೋದಿ

Last Updated 21 ಫೆಬ್ರುವರಿ 2023, 13:02 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮತ್ತು ಸಿಂಗಪುರದ ಪೇನೌ ಹಣ ಪಾವತಿ ಸಂಪರ್ಕ ವ್ಯವಸ್ಥೆಗಳು ಸಂಯೋಜನೆಗೊಂಡಿದೆ. ಶೀಘ್ರದಲ್ಲೇ ಡಿಜಿಟಲ್ ಪಾವತಿಯು ನಗದು ವಹಿವಾಟನ್ನು ಮೀರಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಯುಪಿಐ ಮತ್ತು ಪೇನೌ (PayNow) ನಡುವಿನ ಗಡಿಯಾಚೆಗಿನ ಸಂಪರ್ಕ ವ್ಯವಸ್ಥೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, 2022ರಲ್ಲಿ ಯುಪಿಐ ಮೂಲಕ ಸುಮಾರು 2 ಟ್ರಿಲಿಯನ್ ಸಿಂಗಪುರ ಡಾಲರ್ ಅಂದರೆ ಸುಮಾರು 126 ಟ್ರಿಲಿಯನ್ ರೂಪಾಯಿಗಿಂತ ಹೆಚ್ಚು ಮೊತ್ತದ 74 ಬಿಲಿಯನ್ ವಹಿವಾಟುಗಳು ನಡೆದಿವೆ ಎಂದು ಹೇಳಿದರು.

‘ಡಿಜಿಟಲ್ ಪಾವತಿಯು ಶೀಘ್ರದಲ್ಲೇ ನಗದು ವಹಿವಾಟನ್ನು ಹಿಂದಿಕ್ಕಲಿದೆ ಎಂದು ಹಲವು ಪರಿಣಿತರು ಅಂದಾಜಿಸಿದ್ದಾರೆ’ಎಂದು ಮೋದಿ ಹೇಳಿದರು.

'ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಪಾವತಿ ವ್ಯವಸ್ಥೆ ಯುಪಿಐ ಮೂಲಕ ಮಾಡುವ ದೊಡ್ಡ ಮೊತ್ತದ ಪಾವತಿಯೂ ಅತ್ಯಂತ ಸುರಕ್ಷಿತ’ ಎಂದೂ ಅವರು ಹೇಳಿದ್ದಾರೆ.

ಪ್ರಧಾನಿ ಮೋದಿ ಮತ್ತು ಸಿಂಗಪುರದ ಪ್ರಧಾನಿ ಲೀ ಸಿಯಾನ್ ಲೂಂಗ್ ವಿಡಿಯೊ ಕಾನ್ಫರೆನ್ಸ್ ಮೂಲಕ ಯುಪಿಐ–ಪೇನೌ ಸಂಪರ್ಕ ವ್ಯವಸ್ಥೆ ಚಾಲನೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಯುಪಿಐ ಮತ್ತು ಪೇನೌ ಸಂಪರ್ಕ ವ್ಯವಸ್ಥೆ ಬಳಸಿಕೊಂಡು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ್ ದಾಸ್ ಮತ್ತು ಸಿಂಗಪುರದ ಹಣಕಾಸು ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕ ರವಿ ಮೆನನ್ ಪ್ರಯೋಗಾರ್ಥ ವಹಿವಾಟು ನಡೆಸುವ ಮೂಲಕ ಚಾಲನೆ ನೀಡಿದರು.

ಯುಪಿಐ–ಪೇನೌ ಲಿಂಕ್ ಮಾಡಲಾಗಿರುವ ಪಾವತಿ ವ್ಯವಸ್ಥೆಯು ಮೊಬೈಲ್ ಆ್ಯಪ್ ಬಳಸಿಕೊಂಡು ಸುರಕ್ಷಿತ, ವೇಗ, ಕಡಿಮೆ ಖರ್ಚಿನಲ್ಲಿ ಗಡಿಯಾಚೆಗಿನ ವಹಿವಾಟು ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಆರ್‌ಬಿಐ ಹೇಳಿದೆ.

ಬ್ಯಾಂಕ್ ಖಾತೆಗಳು ಅಥವಾ ಇ-ವ್ಯಾಲೆಟ್‌ಗಳಲ್ಲಿ ಇರುವ ಹಣವನ್ನು ಕೇವಲ ಯುಪಿಐ-ಐಡಿ, ಮೊಬೈಲ್ ಸಂಖ್ಯೆ ಅಥವಾ ವರ್ಚುವಲ್ ಪೇಮೆಂಟ್ ಅಡ್ರೆಸ್ (ವಿಪಿಎ) ಬಳಸಿಕೊಂಡು ಭಾರತಕ್ಕೆ ಅಥವಾ ಭಾರತದಿಂದ ಸಿಂಗಪುರಕ್ಕೆ ವರ್ಗಾಯಿಸಬಹುದಾಗಿದೆ.

ಈ ವ್ಯವಸ್ಥೆ ಮೂಲಕ ಭಾರತೀಯ ಬಳಕೆದಾರರು ಒಂದು ದಿನದಲ್ಲಿ ₹60,000ವರೆಗೆ (ಸುಮಾರು 1,000 ಸಿಂಗಪುರ ಡಾಲರ್) ಹಣ ಕಳಿಸಬಹುದು. ವಹಿವಾಟು ಮಾಡುವ ಸಮಯದಲ್ಲಿ ಬಳಕೆದಾರರ ಅನುಕೂಲಕ್ಕಾಗಿ ಮೊತ್ತವನ್ನು ಎರಡೂ ಕರೆನ್ಸಿಗಳಲ್ಲಿ ಕ್ರಿಯಾತ್ಮಕವಾಗಿ ಲೆಕ್ಕಾಚಾರ ಮಾಡಿ ಪ್ರದರ್ಶಿಸಲಾಗುತ್ತದೆ.

ಭಾರತೀಯ ಬಳಕೆದಾರರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಓವರ್‌ಸೀಸ್, ಇಂಡಿಯನ್ ಬ್ಯಾಂಕ್, ಮತ್ತು ಐಸಿಸಿಐ ಬ್ಯಾಂಕ್‌ಗಳಲ್ಲಿ ಹಣವನ್ನು ಪಾವತಿಸುವ ಮತ್ತು ಪಡೆದುಕೊಳ್ಳುವ ಎರಡೂ ಸೌಲಭ್ಯ ಲಭ್ಯವಿರುತ್ತದೆ. ಆದರೆ, ಆಕ್ಸಿಸ್ ಮತ್ತು ಡಿಬಿಎಸ್ ಇಂಡಿಯಾಗಳಲ್ಲಿ ಹಣ ಪಡೆಯುವ ವ್ಯವಸ್ಥೆ ಮಾತ್ರವಿರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಿಂಗಪುರದ ಬಳಕೆದಾರರಿಗೆ, ಡಿಬಿಎಸ್ ಸಿಂಗಪುರ ಮತ್ತು ಲಿಕ್ವಿಡ್ ಗ್ರೂಪ್‌ಗಳಲ್ಲಿ ಈ ಸೌಲಭ್ಯ ಲಭ್ಯವಿದೆ. ಮತ್ತಷ್ಟು ಬ್ಯಾಂಕ್‌ಗಳಿಗೆ ಸೇವೆ ವಿಸ್ತರಿಸುವ ಯೋಜನೆ ಸಹ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT