ಗುರುವಾರ , ಅಕ್ಟೋಬರ್ 21, 2021
21 °C
ದಿಲೀಪ್‌ ಘೋಷ್‌ ಮೇಲೆ ಹಲ್ಲೆ, ಅರ್ಜುನ್‌ ಸಿಂಗ್‌ ವಿರುದ್ಧ ಘೋಷಣೆ ಕೂಗಿದ ಆರೋಪ

ಭವಾನಿಪುರ ಉಪ ಚುನಾವಣೆ ಬಿಜೆಪಿ–ಟಿಎಂಸಿ ಸಂಘರ್ಷ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಭವಾನಿಪುರ ಕ್ಷೇತ್ರದ ಉಪಚುನಾವಣೆಗಾಗಿ ಪ್ರಚಾರ ನಡೆಸುತ್ತಿದ್ದ ರಾಜ್ಯದ ಬಿಜೆಪಿ ಉಪಾಧ್ಯಕ್ಷ ದಿಲೀಪ್‌ ಘೋಷ್‌ ಅವರನ್ನು ಎಳೆದಾಡಲಾಗಿದೆ ಮತ್ತು ಪಕ್ಷದ ಸಂಸದ ಅರ್ಜುನ್‌ ಸಿಂಗ್‌ ವಿರುದ್ಧ ‘ಗೋ ಬ್ಯಾಕ್‌’ ಎಂಬ ಘೋಷಣೆ ಕೂಗಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಭವಾನಿಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಪ್ರಿಯಾಂಕ ತಿಬ್ರೆವಾಲ್‌ ಪರ ಇವರು ಸೋಮವಾರ ಪ್ರಚಾರ ಮಾಡುತ್ತಿದ್ದಾಗ ಈ ಘಟನೆಗಳು ನಡೆದಿವೆ. ಬಹಿರಂಗ ಪ್ರಚಾರ ಸೋಮವಾರ ಅಂತ್ಯಗೊಂಡಿದೆ.

ಕ್ಷೇತ್ರದ ಜೋದುಬಾಬುರ್‌ ಬಜಾರ್‌ ಪ್ರದೇಶದ ಲಸಿಕಾ ಕೇಂದ್ರದ ಒಳಗೆ ಘೋಷ್‌ ಅವರು ಹೋದ ವೇಳೆ ಟಿಎಂಸಿ
ಕಾರ್ಯಕರ್ತರು ಅವರನ್ನು ಎಳೆದಾಡಿದರು ಎಂದು ಬಿಜೆಪಿ ಹೇಳಿದೆ. ಈ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ
ಘೋಷ್‌, ಚುನಾವಣಾ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಟಿಎಂಸಿ, ಘೋಷ್‌ ಜೊತೆ ಲಸಿಕಾ ಕೇಂದ್ರಕ್ಕೆ ಬಂದಿದ್ದ ಅವರ ಸಹಚರರು ಬಂದೂಕುಗಳನ್ನು ತೋರಿಸಿ ಜನರನ್ನು ಚದುರಿಸಲು ಪ್ರಯತ್ನಿಸಿದರು. ಆಗ ಅಲ್ಲಿ ಉಪಸ್ಥಿತರಿದ್ದ ಟಿಎಂಸಿ ಬೆಂಬಲಿಗರು ಘೋಷ್‌ ಮತ್ತು ಅವರ ಸಹಚರರನ್ನು ಅಲ್ಲಿಂದ ಹೊರಕಳಿಸಿದರು. ರಾಜ್ಯ ಸರ್ಕಾರ ನಡೆಸುತ್ತಿರುವ ಲಸಿಕಾ ಕೇಂದ್ರದಿಂದ ಹೊರಡುವಂತೆ ಘೋಷಣೆ ಕೂಗಿದರು ಎಂದಿದೆ.

ಈ ಕ್ಷೇತ್ರದಲ್ಲಿ ಬಿಜೆಪಿ ಪರ ಪ್ರಚಾರದ ಹೊಣೆ ಹೊತ್ತುಕೊಂಡಿರುವ ಅರ್ಜುನ್‌ ಸಿಂಗ್‌ ಅವರು ತಮ್ಮ ವಿರುದ್ಧ ಘೋಷಣೆ ಕೂಗಿದ ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದರು ಮತ್ತು ರಾಷ್ಟ್ರ ಮಟ್ಟದ ವಿಪಕ್ಷ ನಾಯಕರ ಮೇಲೆ ದಾಳಿ ನಡೆಯುತ್ತಿದ್ದರೂ ರಾಜ್ಯದ ಆಡಳಿತ ಮತ್ತು ಪೊಲೀಸರು ಯಾವುದೇ ಕ್ರಮ ಕೈಗೊಳ್ಳದೇ ಇರುವುದು ಖಂಡನೀಯ ಎಂದಿದ್ದಾರೆ.

ಇದೇ 30ರಂದು ಉಪಚುನಾವಣೆ ನಡೆಯಲಿದೆ.

ಟಿಎಂಸಿಯಿಂದ ಪ್ರಜಾಪ್ರಭುತ್ವಕ್ಕೆ ಅಪಮಾನ: ಬಿಜೆಪಿ

ಬಿಜೆಪಿ ಮುಖಂಡರಾದ ದಿಲೀಪ್‌ ಘೋಷ್‌ ಮತ್ತು ಅರ್ಜುನ್‌ ಸಿಂಗ್‌ ವಿರುದ್ಧ ನಡೆದಿರುವ ದಾಳಿಯನ್ನು ಖಂಡಿಸಿರುವ ಬಿಜೆಪಿಯು ಟಿಎಂಸಿ ವಿರುದ್ಧ ಹರಿಹಾಯ್ದಿದೆ. ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ  ಹಿಂಸಾಚಾರ ನಡೆಯುತ್ತಿದೆ. ಮೂರನೇ ಬಾರಿಗೆ ಜಯಗಳಿಸಿದ ಬಳಿಕ ಟಿಎಂಸಿ ನಡೆಸುತ್ತಿರುವ ದುಷ್ಕೃತ್ಯಗಳು ಪ್ರಜಾಪ್ರಭುತ್ವಕ್ಕೆ ಅಪಮಾನವಾಗುವಂತಿವೆ ಎಂದು ಬಿಜೆಪಿ ದೂರಿದೆ.

‘ಎದುರಾಳಿಗಳು ನ್ಯಾಯವಾಗಿ ಸ್ಪರ್ಧಿಸಲು ಟಿಎಂಸಿ ಬಿಡುವುದಿಲ್ಲ. ನಮ್ಮ ನಾಯಕರಿಗೆ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಲು ರಾಜ್ಯ ಸರ್ಕಾರ ನೇಮಿಸಿರುವ ಟಿಎಂಸಿ ಗೂಂಡಾಗಳು ಬಿಟ್ಟಿಲ್ಲ. ಉತ್ತಮ ಭದ್ರತೆ ಹೊಂದಿರುವ ಘೋಷ್‌ ಅವರ ಮೇಲೇ ದಾಳಿ ನಡೆದಿರುವಾಗ, ಪಶ್ಚಿಮ ಬಂಗಾಳದ ಜನ ಸಾಮಾನ್ಯರ ಪರಿಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ’ ಎಂದು ಬಿಜೆಪಿ ಪ್ರಮುಖ ವಕ್ತಾರ ಅನಿಲ್‌ ಬಲೂನಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು