ಗುರುವಾರ , ಮೇ 26, 2022
28 °C
‘ಸಾಧನೆ’ಯ ವಿಡಿಯೊ ಹಂಚಿಕೊಳ್ಳಲು ಕರೆ

ಎಎಪಿ ಪ್ರಚಾರ ಅಭಿಯಾನಕ್ಕೆ ಚಾಲನೆ: ‘ಕೇಜ್ರಿವಾಲ್‌ಗೆ ಒಂದು ಅವಕಾಶ ಕೊಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಎಎಪಿಯ ಪ್ರಚಾರದ ಕೇಂದ್ರ ಬಿಂದುವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ತಮ್ಮನ್ನು ಬಿಂಬಿಸಿಕೊಂಡಿದ್ದಾರೆ. ಏಕ್‌ ಮೌಕಾ ಕೇಜ್ರಿವಾಲ್‌ ಕೊ (ಕೇಜ್ರಿವಾಲ್‌ಗೆ ಒಂದು ಅವಕಾಶ) ಎಂಬ ಪ್ರಚಾರ ಅಭಿಯಾನಕ್ಕೆ ಅವರು ಚಾಲನೆ ನೀಡಿದ್ದಾರೆ. ತಮ್ಮ ಆಳ್ವಿಕೆಯಲ್ಲಿ ದೆಹಲಿಯ ಜನರ ಜೀವನ ಹೇಗೆ ಪರಿವರ್ತನೆಯಾಗಿದೆ ಎಂಬುದನ್ನು ತೋರಿಸುವ ವಿಡಿಯೊಗಳನ್ನು ಪ್ರಕಟಿಸುವಂತೆಯೂ ಅವರು ದೆಹಲಿ ಜನರನ್ನು ಕೋರಿದ್ದಾರೆ. 

ತಮ್ಮ ಸರ್ಕಾರದ ಕ್ರಮಗಳಿಂದ ಜನರಿಗೆ ಹೇಗೆ ಲಾಭ ಆಗಿದೆ ಎಂಬುದನ್ನು ತೋರಿಸುವ ವಿಡಿಯೊಗಳನ್ನು ಟ್ವಿಟರ್‌, ಇನ್‌ಸ್ಟಾಗ್ರಾಂ, ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವಂತೆ ಅವರು ವಿನಂತಿ ಮಾಡಿಕೊಂಡಿದ್ದಾರೆ. ಎಎಪಿಗೆ ಒಂದು ಅವಕಾಶ ಕೊಡುವಂತೆ ತಮ್ಮ ಪರಿಚಿತರಿಗೆ ವಾಟ್ಸ್‌ಆ್ಯಪ್‌ ಮೂಲಕ ಸಂದೇಶ ಕಳುಹಿಸುವಂತೆಯೂ ಅವರು ಹೇಳಿದ್ದಾರೆ. ಅತಿಹೆಚ್ಚು ಜನರು ನೋಡಿದ ವಿಡಿಯೊವನ್ನು ಪ್ರಕಟಿಸಿದ 50 ಮಂದಿಯನ್ನು ಭೋಜನಕ್ಕೆ ಆಹ್ವಾನಿಸುವುದಾಗಿಯೂ ಕೇಜ್ರಿವಾಲ್‌ ಭರವಸೆ ನೀಡಿದ್ದಾರೆ. 

ಉಚಿತ ವಿದ್ಯುತ್‌ ಮತ್ತು ಉಚಿತ ನೀರು ಪೂರೈಕೆಯಂತಹ ಹಲವು ಸೌಲಭ್ಯಗಳನ್ನು ದೆಹಲಿ ಸರ್ಕಾರವು ನೀಡಿದೆ. ಪಂಜಾಬ್‌, ಉತ್ತರ ಪ್ರದೇಶ, ಗೋವಾ ಮತ್ತು ಉತ್ತರಾಖಂಡದ ಜನರಿಗೆ ಇದನ್ನು ತಿಳಿಸಿ, ಎಎಪಿಗೆ ಬೆಂಬಲ ನೀಡುವಂತೆ ವಿನಂತಿಸಿ ಎಂದು ಕೇಜ್ರಿವಾಲ್‌ ಹೇಳಿದ್ದಾರೆ. 

‘ಜನರು ನಮ್ಮ ಮೇಲೆ ವಿಶ್ವಾಸ ಇರಿಸಿದ್ದರಿಂದ ಮತ್ತು ಸರ್ಕಾರ ರಚಿಸಲು ಅವಕಾಶ ಕೊಟ್ಟದ್ದರಿಂದ ದೆಹಲಿಯನ್ನು ಪರಿವರ್ತಿಸಲು ನಮಗೆ ಸಾಧ್ಯವಾಯಿತು. ದೆಹಲಿ ಜನರಿಗೆ ಕೊಟ್ಟ ಪ್ರತೀ ಭರವಸೆಯನ್ನೂ ಸರ್ಕಾರವು ಈಡೇರಿಸಿದೆ. ದೆಹಲಿಯ ಶಾಲೆಗಳು, ಆಸ್ಪತ್ರೆಗಳು, ರಸ್ತೆಗಳು ನೀರು ಮತ್ತು ವಿದ್ಯುತ್‌ ಪೂರೈಕೆ ಎಲ್ಲದಕ್ಕೂ ಜಾಗತಿಕ ಖ್ಯಾತಿ ಸಿಕ್ಕಿದೆ. ದೆಹಲಿಯ ಜನರ ರೀತಿಯಲ್ಲಿಯೇ ಬೇರೆ ರಾಜ್ಯಗಳ ಜನರು ನಮ್ಮ ಮೇಲೆ ವಿಶ್ವಾಸವಿಟ್ಟು ಅವಕಾಶ ಕೊಟ್ಟರೆ ದೇಶದ ಇತರ ರಾಜ್ಯಗಳಲ್ಲಿಯೂ ದೆಹಲಿ ಮಾದರಿಯನ್ನು ಜಾರಿಗೆ ತರುತ್ತೇವೆ’ ಎಂದ ಕೇಜ್ರಿವಾಲ್‌ ಹೇಳಿದ್ದಾರೆ. 

ಪಂಜಾಬ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್‌ಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಎಎಪಿ ಹೊರ ಹೊಮ್ಮಿದೆ. ಗೋವಾ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದಲ್ಲಿಯೂ ಪಕ್ಷವು ಸ್ಪರ್ಧಿಸುತ್ತಿದೆ. ಗೋವಾದಲ್ಲಿ ಬಿಜೆಪಿ ವಿರೋಧಿ ಪಕ್ಷಗಳಲ್ಲಿ ಒಮ್ಮತ ಇಲ್ಲ. ಹಾಗಾಗಿ ಅಲ್ಲಿ ಉತ್ತಮ ಪ್ರದರ್ಶನದ ನಿರೀಕ್ಷೆಯಲ್ಲಿ ಎಎಪಿ ಇದೆ. ಉತ್ತರಾಖಂಡದಲ್ಲಿ ಎಎಪಿ ಸ್ಪರ್ಧಿಸಿದೆ. ಆದರೆ, ಅಲ್ಲಿ ಅಂತಹ ನಿರೀಕ್ಷೆ ಏನೂ ಇಲ್ಲ ಎಂದು ಸಮೀಕ್ಷೆಗಳು ಹೇಳಿವೆ. 

ಕೇಜ್ರಿವಾಲ್‌ ಅವರು ಕಳೆದ ಕೆಲವು ತಿಂಗಳಿಂದ ಗೋವಾ, ಪಂಜಾಬ್‌ ಮತ್ತು ಉತ್ತರಾಖಂಡದಲ್ಲಿ ಪ್ರಚಾರ ನಡೆಸಿದ್ದಾರೆ. 

ಪಕ್ಷದ ಸ್ವಯಂಸೇವಕರು ಮನೆ ಮನೆ ಪ್ರಚಾರ ನಡೆಸಬೇಕು. ಎಲ್ಲ ಪಕ್ಷಗಳ ಬೆಂಬಲಿಗರ ಮನೆಗೂ ಭೇಟಿ ಕೊಡಬೇಕು. ದೆಹಲಿ ಸರ್ಕಾರ ಏನು ಮಾಡಿದೆ ಎಂಬುದನ್ನು ವಿವರಿಸಬೇಕು ಎಂದು ಕೇಜ್ರಿವಾಲ್‌ ಈ ಹಿಂದೆ ಕರೆ ಕೊಟ್ಟಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು