ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ಬ್ಯಾನರ್ಜಿ ಮೇಲೆ ಪೂರ್ವಯೋಜಿತ ಹಲ್ಲೆ ನಡೆದಿಲ್ಲ: ಚುನಾವಣಾ ಆಯೋಗ

Last Updated 14 ಮಾರ್ಚ್ 2021, 19:35 IST
ಅಕ್ಷರ ಗಾತ್ರ

ನವದೆಹಲಿ: ಮಮತಾ ಬ್ಯಾನರ್ಜಿ ಅವರ ಮೇಲೆ ನಂದಿಗ್ರಾಮದಲ್ಲಿ ಪೂರ್ವಯೋಜಿತ ಹಲ್ಲೆ ನಡೆದಿಲ್ಲ. ಮಮತಾ ಅವರು ಗಾಯಗೊಳ್ಳಲು ಕಾರಣ ಭದ್ರತೆಯಲ್ಲಿನ ಲೋಪ ಎಂಬ ನಿರ್ಧಾರಕ್ಕೆ ಚುನಾವಣಾ ಆಯೋಗವು ಬಂದಿದೆ. ಆಯೋಗವು ಪಶ್ಚಿಮ ಬಂಗಾಳಕ್ಕೆ ಕಳುಹಿಸಿದ್ದ ಇಬ್ಬರು ವಿಶೇಷ ವೀಕ್ಷಕರ ವರದಿಯನ್ನು ಪರಿಶೀಲಿಸಿ ಈ ತೀರ್ಮಾನಕ್ಕೆ ಬರಲಾಗಿದೆ.

ಭದ್ರತಾ ವಿಭಾಗದ ನಿರ್ದೇಶಕ, ಐಪಿಎಸ್‌ ಅಧಿಕಾರಿ ವಿವೇಕ್‌ ಸಹಾಯ್‌ ಅವರನ್ನು ತಕ್ಷಣವೇ ಆ ಹುದ್ದೆಯಿಂದ ತೆರವು ಮಾಡಬೇಕು ಮತ್ತು ಅಮಾನತಿನಲ್ಲಿ ಇರಿಸಬೇಕು ಎಂದು ಆಯೋಗವು ಸೂಚಿಸಿದೆ.

‘ಝಡ್‌+ ಭದ್ರತೆಯುಳ್ಳ ವ್ಯಕ್ತಿಯ ಭದ್ರತೆಯನ್ನು ನೋಡಿಕೊಳ್ಳುವ ಪ್ರಾಥಮಿಕ ಕರ್ತವ್ಯ ನಿರ್ವಹಣೆಯಲ್ಲಿ ಭದ್ರತಾ ವಿಭಾಗದ ನಿರ್ದೇಶಕರು ವಿಫಲರಾಗಿದ್ದಾರೆ. ಅವರ ವಿರುದ್ಧ ಒಂದು ವಾರದಲ್ಲಿ ಆರೋಪ ನಿಗದಿ ಮಾಡಬೇಕು’ ಎಂದು ಆಯೋಗದ ಹೇಳಿಕೆಯು ತಿಳಿಸಿದೆ.

ಭದ್ರತಾ ವಿಭಾಗದ ಮುಖ್ಯಸ್ಥರಾಗಿ ಸೂಕ್ತ ಅಧಿಕಾರಿಯನ್ನು ನೇಮಿಸುವ ಹೊಣೆಯನ್ನು ಮುಖ್ಯ ಕಾರ್ಯದರ್ಶಿಗೆ ನೀಡಲಾಗಿದೆ. ರಾಜ್ಯದ ಪೊಲೀಸ್‌ ಮುಖ್ಯಸ್ಥರ ಜತೆಗೆ ಸಮಾಲೋಚನೆ ನಡೆಸಿ ನೇಮಕ ಮಾಡುವಂತೆ ಹೇಳಲಾಗಿದೆ.

ಲೋಪ‍ಕ್ಕೆ ಕಾರಣರಾದ ಇತರ ಅಧಿಕಾರಿಗಳನ್ನು ಮುಂದಿನ ಮೂರು ದಿನಗಳಲ್ಲಿ ಗುರುತಿಸುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಯ ಸಮಿತಿಗೆ ಸೂಚಿಸಲಾಗಿದೆ. ಪುರ್ಬಾ ಮೇದಿನಿಪುರದ ಜಿಲ್ಲಾಧಿಕಾರಿ ವಿಭು ಗೋಯಲ್‌ ಅವರನ್ನು ತಕ್ಷಣವೇ ವರ್ಗಾಯಿಸಬೇಕು. ಈ ಸ್ಥಾನಕ್ಕೆ ಐಎಎಸ್‌ ಅಧಿಕಾರಿ ಸ್ಮಿತಾ ಪಾಂಡೆ ಅವರನ್ನು ನೇಮಿಸಬೇಕು. ಗೋಯಲ್‌ ಅವರಿಗೆ ಚುನಾವಣೆ ಹೊಣೆ ಇಲ್ಲದ ಹುದ್ದೆ ನೀಡಬೇಕು ಎಂದು ಆಯೋಗವು ಸೂಚಿಸಿದೆ.

ಬಂದೋಬಸ್ತ್‌ ವೈಫಲ್ಯದ ಕಾರಣಕ್ಕೆ ಪುರ್ಬಾ ಮೇದಿನಿಪುರದ ಎಸ್‌ಪಿ ಪ್ರವೀಣ್‌ ಪ್ರಕಾಶ್‌ ಅವರನ್ನು ಅಮಾನತು ಮಾಡಬೇಕು. ಅವರ ಸ್ಥಾನಕ್ಕೆ ಸುನಿಲ್‌ ಕುಮಾರ್‌ ಯಾದವ್‌ ಅವರನ್ನು ನೇಮಿಸಬೇಕು ಎಂದು ಆಯೋಗ ನಿರ್ದೇಶನ ನೀಡಿದೆ. ವಿಶೇಷ ವೀಕ್ಷಕರಾದ ಅಜಯ್‌ ನಾಯಕ್‌ ಮತ್ತು ವಿವೇಕ್‌ ದುಬೆ ಅವರು ನೀಡಿದ ವರದಿಯನ್ನು ಪರಿಶೀಲಿಸಿದ ಬಳಿಕ ಆಯೋಗವು ಈ ನಿರ್ಧಾರಕ್ಕೆ ಬಂದಿದೆ.

ಮಮತಾ ಅವರು ಕೆಳಗೆ ಬಿದ್ದು ಎಡಗಾಲು ಹಾಗೂ ಸೊಂಟಕ್ಕೆ ಏಟಾಗಿತ್ತು. ಇದೇ ಹತ್ತರಂದು ನಂದಿಗ್ರಾಮದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಅಪರಿಚಿತ ವ್ಯಕ್ತಿಗಳು ಅವರನ್ನು ತಳ್ಳಿದ್ದಾರೆ ಎಂದು ಆರೋಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT