ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಹುಲ್‌ ಗಾಂಧಿ ಅನರ್ಹತೆ: ದೇಶದಾದ್ಯಂತ ಕಾಂಗ್ರೆಸ್ ಸತ್ಯಾಗ್ರಹ

Last Updated 26 ಮಾರ್ಚ್ 2023, 19:46 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ವಿರುದ್ಧದ ಕೋರ್ಟ್ ತೀರ್ಪು ಮತ್ತು ಸಂಸತ್‌ ಸದಸ್ಯತ್ವದಿಂದ ಅನರ್ಹತೆಯನ್ನು ಖಂಡಿಸಿ ಪಕ್ಷವು ನಡೆಸುತ್ತಿರುವ ಪ್ರತಿಭಟನೆಯು ಭಾನುವಾರ ಇನ್ನಷ್ಟು ಬಿರುಸು ಪಡೆದುಕೊಂಡಿದೆ.

ದೆಹಲಿಯ ರಾಜ್‌ಘಾಟ್‌ನ ಹೊರ ಭಾಗದಲ್ಲಿ ಕಾಂಗ್ರೆಸ್‌ ಮುಖಂಡರು ‘ಸಂಕಲ್ಪ ಸತ್ಯಾಗ್ರಹ’ ನಡೆಸಿದ್ದಾರೆ. ಇದರಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ತಮ್ಮನ್ನೂ ಸೆರೆಮನೆಗೆ ತಳ್ಳುವಂತೆ ಪ್ರಧಾನಿ ನರೇಂದ್ರ
ಮೋದಿ ಅವರಿಗೆ ಸವಾಲೆಸೆದಿದ್ದಾರೆ. ಕಾಂಗ್ರೆಸ್‌ ಮುಖಂಡರು ಮತ್ತು ಕಾರ್ಯಕರ್ತರು ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಮೋದಿ ಅವರ ವಿರುದ್ಧವಾಗ್ದಾಳಿ ನಡೆಸಿದ್ದಾರೆ.

ಗುಜರಾತ್ ಗಲಭೆಯ ಸಂತ್ರಸ್ತರನ್ನು ‘ಪಪ್ಪಿ’ ಎಂದು ಮೋದಿ ಕರೆದಿದ್ದರು ಎಂಬ ಆರೋಪವನ್ನು ಖರ್ಗೆ ಉಲ್ಲೇಖಿಸಿ ದ್ದಾರೆ. ‘ಜನರನ್ನು ನಾಯಿ ಎಂದು ಕರೆದಿರುವ ವ್ಯಕ್ತಿಯು ಈಗ ಒಬಿಸಿಗಳ ಕುರಿತು ಮಾತನಾಡುತ್ತಿದ್ದಾರೆ. ದೇಶದ ಹಣವನ್ನು ತೆಗೆದುಕೊಂಡು ಪರಾರಿ ಯಾದವರ ಕುರಿತು ರಾಹುಲ್‌ ಮತ್ತು ಕಾಂಗ್ರೆಸ್ ಮಾತನಾಡಿದರೆ ಮೋದಿ ಅವರಿಗೆ ಚಿಂತೆ ಏತಕೆ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಸಂವಿಧಾನ ಬಚಾವೊ, ಲೋಕತಂತ್ರ ಬಚಾವೊ ಸಂಕಲ್ಪಸತ್ಯಾಗ್ರಹ’ವು ರಾಜ್‌ಘಾಟ್‌ನಲ್ಲಿ ಬೆಳಿಗ್ಗೆ 10 ಗಂಟೆಗೆ ಆರಂಭವಾಯಿತು.

ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಸಮಸ್ಯೆಯ ಕಾರಣ ನೀಡಿ ಪೊಲೀಸರು ಆರಂಭದಲ್ಲಿ ಸತ್ಯಾಗ್ರಹ ನಡೆಸಲು ಅನುಮತಿ ನಿರಾಕರಿಸಿದ್ದರು. ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 144ರ ಅಡಿಯಲ್ಲಿ ಈ ಪ್ರದೇಶದಲ್ಲಿ ನಿರ್ಬಂಧಗಳನ್ನೂ ಹೇರಲಾಗಿತ್ತು.

ಕಾಂಗ್ರೆಸ್‌ ಮತ್ತು ತಮ್ಮ ಕುಟುಂಬದ ಮೇಲೆ ಆಗುತ್ತಿರುವ ದಾಳಿಯ ಕುರಿತು ಪ್ರಿಯಾಂಕಾ ಅವರು ಮಾತನಾಡಿದರು. ಅದಾನಿ ಪ್ರಕರಣ ಸೇರಿ ಇತರ ವಿಚಾರ ಗಳ ಕುರಿತೂ ಅವರು ಮಾತನಾಡಿದರು.

‘ಪ್ರಧಾನಿಯು ಹೇಡಿ, (ಹೀಗೆ ಹೇಳಿದ್ದಕ್ಕೆ) ನನ್ನ ಮೇಲೆಯೂ ಪ್ರಕರಣ ದಾಖಲಿಸಿ ನನ್ನನ್ನು ಸೆರೆಮನೆಗೆ ಹಾಕಿ. ಆದರೆ, ಸತ್ಯ ಏನೆಂದರೆ ಪ್ರಧಾನಿ ಹೇಡಿಯಾಗಿದ್ದಾರೆ. ಅವರು ಅಧಿಕಾರದ ಹಿಂದೆ ಅವಿತಿದ್ದಾರೆ. ದುರಹಂಕಾರಿಯಾಗಿದ್ದಾರೆ’ ಎಂದರು.

ಸಂಸತ್ತಿನಲ್ಲಿ ಅದಾನಿ ಪ್ರಕರಣ ಕುರಿತಂತೆ ತಮ್ಮ ಮುಂದಿನ ಭಾಷಣದ ಕುರಿತು ಪ್ರಧಾನಿ ಭೀತರಾಗಿದ್ದಾರೆ ಎಂದು ರಾಹುಲ್ ಅವರು ಶನಿವಾರ ಹೇಳಿದ್ದರು. ತಮ್ಮ ಅಣ್ಣ ರಾಹುಲ್ ಅವರನ್ನು ‍ಪ್ರಿಯಾಂಕಾ ಅವರು ಬಲವಾಗಿ ಸಮರ್ಥಿಸಿಕೊಂಡರು.

ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಪಾದಯಾತ್ರೆ ನಡೆಸಿ ದೇಶವನ್ನು ಒಗ್ಗಟ್ಟಾಗಿಸುವ ಕುರಿತು ಮಾತನಾಡಿದ ವ್ಯಕ್ತಿಯು ದೇಶವನ್ನು ಅವಮಾನಿಸಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ತೀನ್‌ಮೂರ್ತಿ ಭವನದಿಂದ ರಾಜ್‌ ಘಾಟ್‌ ಸಮೀಪ ಇರುವ ವೀರಭೂಮಿ ವರೆಗೆ ನಡೆದುಕೊಂಡು ಹೋಗಿ ತಮ್ಮ ತಂದೆ ರಾಜೀವ್ ಗಾಂಧಿ ಅವರ ಅಂತ್ಯಕ್ರಿಯೆಯನ್ನು ರಾಹುಲ್‌ ಹೇಗೆ ನಡೆಸಿದ್ದರು ಎಂಬುದನ್ನು ಪ್ರಿಯಾಂಕಾ ನೆನಪಿಸಿಕೊಂಡರು.

‘ನನ್ನ ತಂದೆಯ ತ್ರಿವರ್ಣದಲ್ಲಿ ಸುತ್ತಿದ ದೇಹ ಮತ್ತು ರಾಹುಲ್ ನಡೆಸಿದ ಅಂತ್ಯಕ್ರಿಯೆ ಚಿತ್ರವು ಈಗಲೂ ನನ್ನ ಮನದಲ್ಲಿದೆ. 400 ಮೀಟರ್ ದೂರದಲ್ಲಿ ನಾನು ನಿಂತಿದ್ದೆ. ನನ್ನ ಹುತಾತ್ಮ ತಂದೆಯನ್ನು ಸಂಸತ್ತಿನಲ್ಲಿ ಅವಮಾನಿಸಲಾಗಿದೆ. ಹುತಾತ್ಮ ವ್ಯಕ್ತಿಯ ಮಗನನ್ನು ದೇಶವಿರೋಧಿ ಮೀರ್ ಜಾಫರ್ ಎಂದು ಕರೆಯಲಾಗಿದೆ. ನನ್ನ ತಾಯಿಯನ್ನು ಸಚಿವರು ಸಂಸತ್ತಿನಲ್ಲಿ ಅವಮಾನಿಸಿದ್ದಾರೆ. ರಾಹುಲ್‌ಗೆ ತಮ್ಮ ತಂದೆ ಯಾರೆಂಬುದೇ ಗೊತ್ತಿಲ್ಲ ಎಂದು ಮುಖ್ಯಮಂತ್ರಿಯೊಬ್ಬರು ಹೇಳಿದ್ದಾರೆ’ ಎಂದು ಪ್ರಿಯಾಂಕಾ ಹೇಳಿದರು.

‘ನಮ್ಮ ಕುಟುಂಬವು ನೆಹರೂ ಉಪನಾಮವನ್ನು ಬಳಸುತ್ತಿಲ್ಲ ಎಂದು ಪ್ರಧಾನಿ ಸಂಸತ್ತಿನಲ್ಲಿ ಹೇಳಿದ್ದಾರೆ.
ನಮ್ಮ ಕುಟುಂಬವನ್ನು ಅವಮಾನಿಸಲಾಗಿದೆ. ಕಾಶ್ಮೀರಿ ಪಂಡಿತ ಸಮುದಾಯದ ವಂಶಾವಳಿಯನ್ನು ಅವಮಾನಿಸಲಾಗಿದೆ. ಆದರೆ, ನಿಮ್ಮ ಮೇಲೆ ಪ್ರಕರಣಗಳು ದಾಖಲಾಗಿಲ್ಲ. ಯಾರಿಗೂ ಜೈಲು ಶಿಕ್ಷೆಯಾಗಿಲ್ಲ, ಯಾರೂ ಅನರ್ಹಗೊಂಡಿಲ್ಲ. ನನ್ನ ಅಣ್ಣ ಮಾಡಿದ್ದಾದರೂ ಏನು? ಆತ ಪ್ರಧಾನಿಯನ್ನು ಅಪ್ಪಿಕೊಂಡಿದ್ದ. ನಮ್ಮ ಸಿದ್ಧಾಂತಗಳು ಬೇರೆ ಬೇರೆ ಆಗಿರ ಬಹುದು. ಆದರೆ, ನಮ್ಮದು ದ್ವೇಷದ ಸಿದ್ಧಾಂತ ಅಲ್ಲ’ ಎಂದು ಅವರು ವಿವರಿಸಿದರು.

ನೆಹರೂ– ಗಾಂಧಿ ಕುಟುಂಬದ ಮೇಲೆ ಆಗುತ್ತಿರುವ ದಾಳಿಯನ್ನೂ ಅವರು ಉಲ್ಲೇಖಿಸಿದರು.

‘ನಮ್ಮ ಕುಟುಂಬವು ರಕ್ತ ಹರಿಸಿಪ್ರಜಾಪ್ರಭುತ್ವವನ್ನು ಪೋಷಿಸಿದೆ. ಶ್ರೀರಾಮ ಯಾರು? ಅವರದ್ದೂ ವಂಶ ರಾಜಕಾರಣವೇ? ಕುಟುಂಬ ಮತ್ತು ದೇಶದ ಪರಂಪರೆಯನ್ನು ರಕ್ಷಿಸುವುದಕ್ಕಾಗಿ ಅವರು ವನವಾಸಕ್ಕೆ ಹೋದರು. ಕುಟುಂಬದ ಗೌರವ
ಉಳಿಸಿಕೊಳ್ಳುವುದಕ್ಕಾಗಿ ಹೋರಾಡಿದ ಪಾಂಡವರದ್ದು ಕೂಡ ವಂಶ ರಾಜ ಕಾರಣವೇ? ನಮ್ಮ ಕುಟುಂಬದ ಸದಸ್ಯರು ಹುತಾತ್ಮರಾಗಿದ್ದಾರೆ ಮತ್ತು ನಮ್ಮ ತ್ರಿವರ್ಣ ಧ್ವಜದಲ್ಲಿ ನಮ್ಮ ಕುಟುಂಬದ ರಕ್ತವಿದೆ ಎಂಬುದಕ್ಕೆ ನಾವು ಅವಮಾನಪಡಬೇಕೇ’ ಎಂದು ಅವರು ಪ್ರಶ್ನಿಸಿದರು.

‘ರಾಹುಲ್‌ ಹಾರ್ವರ್ಡ್ ಮತ್ತು ಕೇಂಬ್ರಿಜ್‌ನ ಪದವೀಧರ. ಆತನನ್ನು ನೀವು ಪಪ್ಪು ಎಂದು ಕರೆದಿರಿ. ಆದರೆ, ‘ಭಾರತ್ ಜೋಡೊ ಯಾತ್ರೆ’ಯಲ್ಲಿ ಜನರು ಆತನೊಂದಿಗೆ ಹೆಜ್ಜೆ ಹಾಕಿದ್ದನ್ನು ನೀವು ನೋಡಿದ್ದೀರಿ’ ಎಂದರು.

‘ದೇಶಕ್ಕಾಗಿ ಬಹಳಷ್ಟನ್ನು ಮಾಡಿದ್ದೇವೆ ಮತ್ತು ಇನ್ನಷ್ಟು ಮಾಡುವ ಶಕ್ತಿ ಹೊಂದಿದ್ದೇವೆ ಎಂದು ಮೋದಿ ನೇತೃತ್ವದ ಸರ್ಕಾರ ಹೇಳುತ್ತಿದೆ. ಹಾಗಿದ್ದರೆ ಅಡುಗೆ ಅನಿಲ ದರವನ್ನು ಕಡಿಮೆ ಮಾಡಿ, ಜನರಿಗೆ ಉದ್ಯೋಗ ಕೊಡಿ... ಆದರೆ ಅವರು ಸಾಮಾನ್ಯ ಜನರನ್ನು ಮೇಲೆತ್ತುವುದಿಲ್ಲ. ಅದಾನಿಯಂಥವರನ್ನು ಮಾತ್ರ ಮೇಲೆತ್ತುತ್ತಾರೆ’ ಎಂದರು.

ಗಾಂಧೀಜಿಗೆ ಅವಮಾನ: ಬಿಜೆಪಿ

ಕಾಂಗ್ರೆಸ್ ನಡೆಸುತ್ತಿರುವ ‘ಸಂಕಲ್ಪ ಸತ್ಯಾಗ್ರಹ’ವನ್ನು ಬಿಜೆಪಿ ಖಂಡಿಸಿದೆ. ಇದು ಸಂವಿಧಾನ ಮತ್ತು ನ್ಯಾಯಾಲಯವು ರಾಹುಲ್ ವಿರುದ್ಧ ನೀಡಿರುವ ತೀರ್ಪನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ. ದೇಶದ ಒಬಿಸಿಗಳ ವಿರುದ್ಧ ರಾಹುಲ್ ನೀಡಿದ್ದ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವ ಪ್ರತಿಭಟನೆ ಎಂದು ಬಿಜೆಪಿ ಹೇಳಿದೆ.

ಇದು ಮಹಾತ್ಮ ಗಾಂಧಿ ಅವರಿಗೆ ಮಾಡಿರುವ ಅ‌ವಮಾನ. ಗಾಂಧೀಜಿ ಅವರು ಸಾಮಾಜಿಕ ಕಾರಣಗಳಿಗಾಗಿ ಸತ್ಯಾಗ್ರಹ ನಡೆಸಿದ್ದರು. ಕಾಂಗ್ರೆಸ್‌ ಪಕ್ಷವು ಮಾಡಿರುವ ಸತ್ಯಾಗ್ರಹವು ವೈಯಕ್ತಿಕ ಕಾರಣಗಳಿಗಾಗಿ ಎಂದು ಬಿಜೆಪಿ ವಕ್ತಾರ ಸುಧಾಂಶು ತ್ರಿವೇದಿ ಹೇಳಿದ್ದಾರೆ.

‘ನಿತೀಶ್‌ಗೆ ವಿಪಕ್ಷ ನಾಯಕನಾಗುವ ಕನಸು’

ಪಟ್ನಾ (ಪಿಟಿಐ): ‘ಜೆಡಿಯು ಮುಖ್ಯಸ್ಥ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್, ಎಲ್ಲಾ ವಿರೋಧ ಪಕ್ಷಗಳ ನಾಯಕನಾಗುವ ಕನಸು ಕಾಣುತ್ತಿದ್ದಾರೆ. ಹೀಗಾಗಿಯೇ ಅವರು ರಾಹುಲ್‌ ಗಾಂಧಿಯ ಸದಸ್ಯತ್ವ ಅನರ್ಹತೆ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಹೇಳಿದ್ದಾರೆ.

‘ಜೆಡಿಯು ಪಕ್ಷದ ಹಲವು ನಾಯಕರು ರಾಹುಲ್‌ ಗಾಂಧಿಯನ್ನು ಬೆಂಬಲಿಸಿ ಮಾತನಾಡಿದ್ದಾರೆ. ಆದರೆ, ನಿತೀಶ್‌ ಮಾತ್ರ ತುಟಿ ಬಿಚ್ಚುತ್ತಿಲ್ಲ. ಅವರ ಎದುರು, ಅವರ ಭವಿಷ್ಯ ಉಜ್ವಲವಾಗಿ ಕಾಣುತ್ತಿರಬೇಕು. ಬಿಜೆಪಿ ವಿರೋಧಿ ಪಕ್ಷಗಳ ನೇತೃತ್ವ ವಹಿಸಿಕೊಳ್ಳುವ ಮಹತ್ವಾಕಾಂಕ್ಷೆ ಈಗ ಆ ಎಲ್ಲಾ ಪಕ್ಷಗಳ ನಾಯಕರಲ್ಲಿ ಹುಟ್ಟುತ್ತಿರುವಂತಿದೆ’ ಎಂದು ಅವರು ಹೇಳಿದ್ದಾರೆ.

ಕ್ಷಮೆ ಕೇಳಲು ತಾನು ಸಾವರ್ಕರ್ ಅಲ್ಲ ಎಂಬ ರಾಹುಲ್ ಗಾಂಧಿಯ ಮಾತನ್ನೂ ಗಿರಿರಾಜ್‌ ಟೀಕಿಸಿದ್ದಾರೆ. ‘ಇನ್ನೂ ಹಲವು ಜನ್ಮ ಎತ್ತಿಬಂದರೂ, ಸಾವರ್ಕರ್ ಅವರಂತಾಗಲು ರಾಹುಲ್‌ಗೆ ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT