ಗುರುವಾರ , ಸೆಪ್ಟೆಂಬರ್ 29, 2022
26 °C
ಹಣ ಅಕ್ರಮ ವರ್ಗಾವಣೆಯ 2ನೇ ಪ್ರಕರಣ

ಡಿ.ಕೆ. ಶಿವಕುಮಾರ್‌ ವಿಚಾರಣೆ: 39 ವರ್ಷದ ಆಸ್ತಿ ದಾಖಲೆ ಕೇಳಿದ ಇ.ಡಿ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಹಣ ಅಕ್ರಮ ವರ್ಗಾ ವಣೆಯ 2ನೇ ಪ್ರಕರಣಕ್ಕೆ ಸಂಬಂ ಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಸುಮಾರು 6 ಗಂಟೆಗಳ ಕಾಲ ಸೋಮ ವಾರ ವಿಚಾರಣೆ ನಡೆಸಿದರು. ಕಳೆದ 39 ವರ್ಷಗಳ ಆಸ್ತಿ ದಾಖಲೆಗಳು ಮತ್ತು ಬ್ಯಾಂಕ್‌ ವ್ಯವಹಾರಗಳ ವಿವರವನ್ನು ಇ.ಡಿ. ಅಧಿಕಾರಿಗಳು ಕೇಳಿದ್ದಾರೆ. 

ಆದಾಯ ತೆರಿಗೆ (ಐ.ಟಿ) ಅಧಿಕಾರಿ ಗಳು ಶಿವಕುಮಾರ್‌ ಮತ್ತು ಅವರ ನಿಕಟವರ್ತಿಗಳಿಗೆ ಸೇರಿದ 87 ಸ್ಥಳಗಳ ಮೇಲೆ 2017ರ ಆಗಸ್ಟ್‌ 2ರಂದು ದಾಳಿ ಮಾಡಿ, ಶೋಧ ನಡೆಸಿದ್ದರು.

₹ 374 ಕೋಟಿ ಮೌಲ್ಯದ ಅಘೋ ಷಿತ ಆಸ್ತಿ ಹೊಂದಿರುವ ಆರೋಪದಡಿ ಆರ್ಥಿಕ ಅಪರಾಧಗಳ ನ್ಯಾಯಾಲಯದಲ್ಲಿ ಶಿವಕುಮಾರ್‌ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಮೂರು ಪ್ರಕರಣ ದಾಖಲಿಸಲಾಗಿತ್ತು. ಐ.ಟಿ ವರದಿ ಆಧರಿಸಿ ಪ್ರತ್ಯೇಕ ಪ್ರಕರಣ ದಾಖಲಿಸಿದ್ದ ಜಾರಿ ನಿರ್ದೇಶ ನಾಲಯ, 2019ರ ಸೆಪ್ಟೆಂಬರ್‌ 3ರಂದು ಅವರನ್ನು ಬಂಧಿಸಿತ್ತು.

ಅಕ್ರಮ ಆಸ್ತಿ ಹೊಂದಿದ ಆರೋಪದಡಿ ಶಿವಕುಮಾರ್‌ ವಿರುದ್ಧ ಸಿಬಿಐ ತನಿಖೆ ನಡೆಸುವಂತೆ ಐ.ಟಿ, ಇ.ಡಿ ಅಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ರಾಜ್ಯ ಸರ್ಕಾರ 2019ರ ಅಕ್ಟೋಬರ್‌ನಲ್ಲಿ ಸಿಬಿಐ ತನಿಖೆಗೆ ಸಮ್ಮತಿ ನೀಡಿತ್ತು.

ಶಿವಕುಮಾರ್‌ 2013ರ ಏ.1ರಿಂದ 2018ರ ಏಪ್ರಿಲ್‌ 30ರ ಅವಧಿಯಲ್ಲಿ ಅಕ್ರಮ ಆಸ್ತಿ ಸಂಪಾದಿಸಿರುವ ಆರೋ ಪದ ಮೇಲೆ 2020ರ ಮಾರ್ಚ್‌ನಲ್ಲಿ ಸಿಬಿಐ ಪ್ರಾಥಮಿಕ ವಿಚಾರಣೆ ಆರಂಭಿಸಿತ್ತು. ₹ 74.93 ಕೋಟಿ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ಎಫ್‌ಐಆರ್‌ ದಾಖಲಿಸಿತ್ತು.

ತನಿಖೆಯ ಅವಧಿಗೂ ಮೊದಲು ಶಿವಕುಮಾರ್‌ ಕುಟುಂಬ ₹ 33.92 ಕೋಟಿ ಆಸ್ತಿ ಹೊಂದಿತ್ತು. ಐದು ವರ್ಷ ಗಳ ಅವಧಿಯಲ್ಲಿ ಅವರ ಕುಟುಂಬ ₹ 166.79 ಕೋಟಿಯನ್ನು ವರಮಾನ ಮತ್ತು ಇತರ ರೂಪದಲ್ಲಿ ಪಡೆದಿದೆ. ಇದೇ ಅವಧಿಯಲ್ಲಿ ₹ 113.12 ಕೋಟಿ ವೆಚ್ಚ ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿತ್ತು. ಬಳಿಕ ಸಿಬಿಐ ಹಲವೆಡೆ ದಾಳಿ ಮಾಡಿ, ಶೋಧ ನಡೆಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ಅಧಿಕಾರಿಗಳು ಶಿವಕುಮಾರ್ ಅವರಿಗೆ ಕಳೆದ ವಾರ ಸಮನ್ಸ್‌ ನೀಡಿದ್ದರು. ಸೋಮವಾರ ಮಧ್ಯಾಹ್ನ 12 ಗಂಟೆಯ ವೇಳೆಗೆ ಶಿವಕುಮಾರ್ ಅವರು ಜಾರಿನಿರ್ದೇಶನಾಲಯ ಕಚೇರಿಗೆ ಬಂದರು.

‘ಯಾವ ವಿಷಯಕ್ಕೆ ಸಮನ್ಸ್‌ ನೀಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ’ ಎಂದು ಶಿವಕುಮಾರ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು. ಬಳಿಕ ಸುಮಾರು 2 ಗಂಟೆಗಳ ಕಾಲ ಅಧಿಕಾರಿಗಳು ವಿಚಾರಣೆ ನಡೆಸಿದರು. ಭೋಜನ ವಿರಾಮದ ಬಳಿಕ ಸಂಜೆಯವರೆಗೆ ವಿಚಾರಣೆ ಮುಂದುವರಿಸಿದರು.

ಅಕ್ರಮ ಆಸ್ತಿ ಹೊಂದಿರುವುದು, ಕೆಲವು ವ್ಯಕ್ತಿಗಳು ಮತ್ತು ಕಂಪನಿಗಳ ಜತೆ ಸಂಶಯಾಸ್ಪದ ರೀತಿಯಲ್ಲಿ ಹಣದ ವಹಿವಾಟು ನಡೆಸಿರುವುದು ಸೇರಿದಂತೆ ಹಲವು ವಿಷಯಗಳ ಕುರಿತು ಅಧಿಕಾರಿಗಳು ಪ್ರಶ್ನೆಗಳನ್ನು ಕೇಳಿದರು ಎಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು