ಡಿಎಂಕೆ ಮಿತ್ರ ಪಕ್ಷದ ಕಾರ್ಯಕರ್ತರಿಂದ ರಾಜ್ಯಪಾಲರ ನಿವಾಸದೆದುರು ಪ್ರತಿಭಟನೆ

ಚೆನ್ನೈ: ತಮಿಳುನಾಡಿನಲ್ಲಿ ಅಧಿಕಾರದಲ್ಲಿರುವ ಡಿಎಂಕೆಯ ಮಿತ್ರ ಪಕ್ಷವಾಗಿರುವ ವಿಡುದಲೈ ಚಿರುತೈಗಳ್ ಕಚ್ಚಿ (ವಿಸಿಕೆ) ಕಾರ್ಯಕರ್ತರು ರಾಜ್ಯಪಾಲ ಆರ್.ಎನ್.ರವಿ ನಿವಾಸದೆದುರು ಶುಕ್ರವಾರ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಜ್ಯಪಾಲ ರವಿ ಅವರಿಗೆ ಸಂವಿಧಾನಬದ್ಧವಾಗಿ ಕರ್ತವ್ಯ ನಿರ್ವಹಿಸುವಂತೆ ಸಲಹೆ ನೀಡಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಒತ್ತಾಯಿಸಿದ್ದಾರೆ.
ಸಂಸದರಾದ ಟಿ.ಆರ್.ಬಾಲು, ಎ.ರಾಜಾ, ಪಿ.ವಿಲ್ಸನ್ ಹಾಗೂ ತಮಿಳುನಾಡಿನ ಕಾನೂನು ಸಚಿವ ಎಸ್.ರಘುಪತಿ ಅವರನ್ನೊಳಗೊಂಡ ನಿಯೋಗವು ಗುರುವಾರ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿಯಾಗಿ ರಾಜ್ಯಪಾಲರ ವಿರುದ್ಧ ದೂರು ಸಲ್ಲಿಸಿತ್ತು. ರವಿ ಅವರು ಜನವರಿ 9ರಂದು ಸದನವನ್ನು ಉದ್ದೇಶಿಸಿ ಮಾತನಾಡುವಾಗ ಸಂವಿಧಾನದ ನಡಾವಳಿಗಳು ಹಾಗೂ ಸದನದ ನಿಯಮಾವಳಿಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ನಿಯೋಗವು ರಾಷ್ಟ್ರಪತಿಯವರಿಗೆ ತಿಳಿಸಿತ್ತು.
‘ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ರಾಷ್ಟ್ರಪತಿಯವರಿಗೆ ಬರೆದಿದ್ದ ಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ. ಆ ಪತ್ರದಲ್ಲಿ ಏನಿದೆ ಎಂಬುದು ಮುಖ್ಯಮಂತ್ರಿಯವರಿಗಷ್ಟೇ ಗೊತ್ತು’ ಎಂದು ಟಿ.ಆರ್.ಬಾಲು ಹೇಳಿದ್ದರು.
‘ಸ್ಟಾಲಿನ್ ಅವರು ಹಂಚಿಕೊಂಡಿದ್ದ ಮಾಹಿತಿಯನ್ನೆಲ್ಲ ರಾಷ್ಟ್ರಪತಿಯವರಿಗೆ ವಿವರಿಸಿದ್ದೇವೆ. ಪತ್ರದಲ್ಲಿ ಉಲ್ಲೇಖಿಸಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯನ್ನೂ ಮಾಡಿದ್ದೇವೆ. ಈ ಕುರಿತು ಪರಿಶೀಲನೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ’ ಎಂದಿದ್ದರು.
ಇದನ್ನೂ ಓದಿ: ತಮಿಳುನಾಡು ಸದನದಲ್ಲಿ ಗದ್ದಲ: ರಾಷ್ಟ್ರಗೀತೆಗೂ ಮುನ್ನವೇ ಸದನ ತೊರೆದ ರಾಜ್ಯಪಾಲ
‘ರವಿ ಅವರು ತಮಿಳುನಾಡಿನಲ್ಲಿ ಆರ್‌ಎಸ್‌ಎಸ್‌ನ ಸನಾತನ ನೀತಿಗಳನ್ನು ಹೇರಲು ಪ್ರಯತ್ನಿಸುತ್ತಿದ್ದಾರೆ. ಇ.ವಿ.ರಾಮಸ್ವಾಮಿ ಪೆರಿಯಾರ್, ಕೆ.ಕಾಮರಾಜ್, ಸಿ.ಎನ್.ಅಣ್ಣಾದೊರೈ ಹಾಗೂ ಎಂ.ಕರುಣಾನಿಧಿ ಅವರಂತಹ ದ್ರಾವಿಡ ನೇತಾರರು ಜನಿಸಿದ್ದ ನೆಲದಲ್ಲಿ ರವಿ ಅವರ ಪ್ರಯತ್ನ ಫಲಿಸುವುದಿಲ್ಲ. ರಾಜ್ಯಪಾಲರು ರಾಷ್ಟ್ರಗೀತೆಗೂ ಮುನ್ನವೇ ಸದನ ತೊರೆಯುವ ಮೂಲಕ ಅದಕ್ಕೆ ಅಪಮಾನ ಮಾಡಿದ್ದಾರೆ. ತಮಿಳುನಾಡಿನ ಜನರನ್ನೂ ಅವಮಾನಿಸಿದ್ದಾರೆ’ ಎಂದು ಹರಿಹಾಯ್ದಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.