ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5 ಸಾವಿರಕ್ಕೂ ಅಧಿಕ ಕೌಟುಂಬಿಕ ದೌರ್ಜನ್ಯ ದೂರು ದಾಖಲು: ಕೇಂದ್ರ

Last Updated 25 ಡಿಸೆಂಬರ್ 2020, 10:56 IST
ಅಕ್ಷರ ಗಾತ್ರ

ನವದೆಹಲಿ: ಮಹಿಳೆಯರ ಮೇಲಿನ ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ಪ್ರಸಕ್ತ ವರ್ಷದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕಳವಳಕ್ಕೆ ಕಾರಣವಾಗಿದ್ದು, ಇಲ್ಲಿಯವರೆಗೂ ದೌರ್ಜನ್ಯಕ್ಕೆ ಸಂಬಂಧಿಸಿ 5 ಸಾವಿರಕ್ಕೂ ಅಧಿಕ ದೂರುಗಳು ದಾಖಲಾಗಿವೆ.

ಕೋವಿಡ್‌–19 ಕಾರಣದಿಂದಾಗಿ ಮಾರ್ಚ್‌ನಿಂದ ಹೇರಲಾಗಿದ್ದ ಲಾಕ್‌ಡೌನ್‌, ಮಹಿಳೆಯರು ಅನಿವಾರ್ಯವಾಗಿ ಅವರಿಗೆ ಕಿರುಕುಳ ನೀಡುವವರ ಜೊತೆ ಮನೆಯಲ್ಲಿಯೇ ಇರುವಂತೆ ಮಾಡಿದೆ. ಇದರಿಂದಾಗಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಕೌಟುಂಬಿಕ ದೌರ್ಜನ್ಯದ ಬಗ್ಗೆ ಹೆಚ್ಚಿನ ದೂರುಗಳು ಬಂದಿವೆ. ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಕೌಟುಂಬಿಕ ದೌರ್ಜನ್ಯದ ದೂರುಗಳು ಏರಿಕೆಯಾಗಿದ್ದು, ಜುಲೈನಲ್ಲಿ ಅತ್ಯಧಿಕ(660) ದೂರುಗಳು ದಾಖಲಾಗಿವೆ.

‘ಲಾಕ್‌ಡೌನ್‌ ಕಾರಣದಿಂದಾಗಿ ಸಂತ್ರಸ್ತರು ಸಹಾಯಕ್ಕಾಗಿ ತಮ್ಮ ಕುಟುಂಬ ಸದಸ್ಯರನ್ನು ಸಂಪರ್ಕಿಸುವುದು ಕಷ್ಟವಾಯಿತು. ಸರಣಿ ಲಾಕ್‌ಡೌನ್‌ಗಳು ಕೌಟುಂಬಿಕ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವುದಕ್ಕೂ ಅಡ್ಡಿಯಾಯಿತು’ ಎಂದು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದರು.

‘ಮಹಿಳೆಯರು ದೌರ್ಜನ್ಯ ಹಾಗೂ ಕಿರುಕುಳ ಆಗುತ್ತಿದ್ದ ಸ್ಥಳದಿಂದ ಸುರಕ್ಷಿತವಾದ ಸ್ಥಳಗಳಿಗೆ ತೆರಳಲು ಲಾಕ್‌ಡೌನ್‌ ಅಡ್ಡಿಯಾಯಿತು. ಸಂತ್ರಸ್ತೆ ತನಗಾದ ನೋವನ್ನು ಮೊದಲು ಹೇಳಿಕೊಳ್ಳುವುದು ಪಾಲಕರು ಹಾಗೂ ಕುಟುಂಬದ ಬಳಿ. ಲಾಕ್‌ಡೌನ್‌ ಕಾರಣದಿಂದಾಗಿ ಈ ಸಂಪರ್ಕವೂ ಕಡಿತವಾಗಿತ್ತು. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯ್ದೆಯಡಿ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಲಾಕ್‌ಡೌನ್‌ ಸಂದರ್ಭದಲ್ಲಿ ಅಗತ್ಯಸೇವೆಗಳಡಿ ಪರಿಗಣಿಸಲಾಗಿರಲಿಲ್ಲ. ಹೀಗಾಗಿ ರಕ್ಷಣಾ ಅಧಿಕಾರಿಗಳು, ಎನ್‌ಜಿಒಗಳು ಸಂತ್ರಸ್ತೆಯನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಪೊಲೀಸರು ಕೋವಿಡ್‌–19 ನಿಯಂತ್ರಣ ಕರ್ತವ್ಯದಲ್ಲಿದ್ದರು’ ಎಂದು ಅವರು ಹೇಳಿದರು.

ಮಕ್ಕಳ ಮೇಲಿನ ಅಪರಾಧ ಕೃತ್ಯಗಳೂ ಏರಿಕೆಯಾಗುತ್ತಿರುವುದು ಸಚಿವಾಲಯದ ಕಳವಳಕ್ಕೆ ಕಾರಣವಾಗಿದ್ದು, ಮಾ.1ರಿಂದ ಸೆ.18ರವರೆಗೆ ಅತ್ಯಾಚಾರ, ಸಾಮೂಹಿಕ ಅತ್ಯಾಚಾರ ಸೇರಿ 13,244 ಪ್ರಕರಣಗಳು ದಾಖಲಾಗಿವೆ ಎಂದು ಸಚಿವಾಲಯವು ಸಂಸತ್‌ಗೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT