ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಣಿಗೆ: ಬಿಜೆಪಿ ಶ್ರೀಮಂತ ಪಕ್ಷ, ದ್ವಿತೀಯ ಸ್ಥಾನದಲ್ಲಿ ಟಿಎಂಸಿ

2021–22ನೇ ಸಾಲಿನ ಎಡಿಆರ್‌ ವರದಿಯಲ್ಲಿ ಉಲ್ಲೇಖ
Last Updated 2 ಮಾರ್ಚ್ 2023, 5:05 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದ ಎಂಟು ರಾಷ್ಟ್ರೀಯ ಪಕ್ಷಗಳು 2021–22ನೇ ಹಣಕಾಸು ವರ್ಷದ ತಮ್ಮ ಆದಾಯವನ್ನು ಘೋಷಿಸಿಕೊಂಡಿವೆ. ಈ ಹಣಕಾಸು ಅವಧಿಯಲ್ಲಿ ಎಂಟೂ ಪಕ್ಷಗಳಿಗೆ ಒಟ್ಟು ₹3,289.34 ಕೋಟಿ ಆದಾಯ ಬಂದಿದೆ. ಈ ಮೊತ್ತದ ಅರ್ಧದಷ್ಟು ಆದಾಯ ಕೇವಲ ಬಿಜೆಪಿ ಪಕ್ಷಕ್ಕೆ ಸಂದಿದೆ’ ಎಂದು ಅಸೋಷಿಯೇಷನ್‌ ಫಾರ್‌ ಡೆಮೊಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಬುಧವಾರ ಹೇಳಿದೆ.

ಬಿಜೆಪಿ, ಕಾಂಗ್ರೆಸ್‌, ಟಿಎಂಸಿ, ಬಿಎಸ್‌ಪಿ, ಎನ್‌ಸಿಪಿ, ಸಿಪಿಐ, ಸಿಪಿಎಂ ಮತ್ತು ನ್ಯಾಷನಲ್‌ ಪೀಪಲ್ಸ್‌ ಪಕ್ಷ ತಮ್ಮ ಆದಾಯದ ವಿವರಗಳನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿವೆ. ಈ ಮಾಹಿತಿಗಳನ್ನು ಒಟ್ಟುಗೂಡಿಸಿ ಎಡಿಆರ್‌ ವರದಿ ಬಿಡುಗಡೆ ಮಾಡಿದೆ.

ಪಕ್ಷಗಳ ಆದಾಯ ಕುರಿತ ಮಾಹಿತಿ, 2020–21ನೇ ಹಣಕಾಸು ವರ್ಷಕ್ಕೆ ಹೋಲಿಸಿದರೆ 2021–22ರಲ್ಲಿ ಎಷ್ಟು ಏರಿಕೆಯಾಗಿದೆ, ಚುನಾವಣಾ ಬಾಂಡ್‌ಗಳ ಮೂಲಕ ಪಕ್ಷಗಳು ಎಷ್ಟು ದೇಣಿಗೆ ಸಂಗ್ರಹಿಸಿವೆ ಎಂಬ ಮಾಹಿತಿಗಳು ಈ ವರದಿಯಲ್ಲಿದೆ.

2021–22ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳು ಒಟ್ಟು ₹2,673.05 ದೇಣಿಗೆ ಪಡೆದುಕೊಂಡಿದ್ದವು. ಇದರಲ್ಲಿ ಶೇ 67.79ರಷ್ಟು ಮೊತ್ತದ ಹಣವು ರಾಷ್ಟ್ರೀಯ ಪಕ್ಷಗಳಿಗೆ ಸಂದಾಯವಾಗಿದೆ ಎಂದು ಎಡಿಆರ್ ಸಲ್ಲಿಸಿದ್ದ ಆರ್‌ಟಿಐ ಅರ್ಜಿಗೆ ನೀಡಿದ ಉತ್ತರದಲ್ಲಿ ತಿಳಿಸಲಾಗಿದೆ.

ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ನೀಡಿದರೆ, ದೇಣಿಗೆ ನೀಡಿದ ವ್ಯಕ್ತಿಯ ಮಾಹಿತಿ ಸಿಗುವುದಿಲ್ಲ. ಈ ಕಾರಣಕ್ಕಾಗಿಯೇ 2020–21 ಹಾಗೂ 2021–22ರಲ್ಲೂ ಚುನಾವಣಾ ಬಾಂಡ್‌ ಮೂಲಕವೇ ದೇಣಿಗೆ ಪಡೆದುಕೊಳ್ಳುವುದರ ಸಂಖ್ಯೆ ಹೆಚ್ಚಾಗಿದೆ ಎಂದು ಎಡಿಆರ್‌ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT