ಸೋಮವಾರ, ಮೇ 23, 2022
30 °C

ರೈತರು ಹಠ ಮಾಡಬಾರದು, ತಮ್ಮ ಮನೆಗಳಿಗೆ ಹಿಂದಿರುಗಬೇಕು: ಕೇಂದ್ರ ಸಚಿವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಮೂರು ಕೃಷಿ ಕಾನೂನುಗಳನ್ನು ಕೇಂದ್ರ ಸರ್ಕಾರ ರದ್ದುಗೊಳಿಸಬೇಕೆಂಬ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದಮೇಲೂ ರೈತರು ಹಠ ಮಾಡಬಾರದು. ಮನೆಗಳಿಗೆ ಹಿಂದಿರುಗಬೇಕು,’ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವ ಕೈಲಾಶ್‌ ಚೌಧರಿ ಆಗ್ರಹಿಸಿದ್ದಾರೆ.

ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಖಚಿತತೆ ಸಿಗುವವರೆಗೆ ಹೋರಾಟ ಮುಂದುವರಿಯಲಿದೆ ಎಂದು ರೈತ ಸಂಘಗಳು ಶುಕ್ರವಾರ ಪುನರುಚ್ಚರಿಸಿವೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಕೈಲಾಶ್‌ ಚೌಧರಿ, ರೈತರು ಹೋರಾಟ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಸುದ್ದಿ ಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ ಚೌಧರಿ, ಮೂರು ಕೃಷಿ ಕಾಯ್ದೆಗಳನ್ನು ರೈತರ ಹಿತರಕ್ಷಣೆಯ ಉದ್ದೇಶದಿಂದ ಜಾರಿಗೆ ತರಲಾಗಿತ್ತು. ಇಂಥದ್ದೊಂದು ಶಾಸನ ಬೇಕು ಎಂದು ಹಿಂದಿನಿಂದಲೂ ಆಗ್ರಹಿಸಿದ್ದರಿಂದ ಕಾನೂನು ರೂಪಿಸಲಾಗಿತ್ತು. ಹಿಂದಿನ ಸರ್ಕಾರಗಳು ಸಹ ಈ ಕಾನೂನುಗಳನ್ನು ತರಲು ಪ್ರಯತ್ನಿಸಿದ್ದವು ಎಂದು ಅವರು ಹೇಳಿದರು.

ಆದರೆ, ಸರ್ಕಾರ ಮತ್ತು ರೈತ ಸಂಘಗಳ ಪ್ರಮುಖ ಪ್ರತಿನಿಧಿಗಳ ನಡುವೆ ಹಲವು ಸುತ್ತಿನ ಚರ್ಚೆ ನಡೆದರೂ ರೈತ ಸಮುದಾಯದ ಒಂದು ವರ್ಗ ಈ ಕಾನೂನುಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

‘ಚರ್ಚೆಗಳ ನಂತರವೂ ಒಂದು ವರ್ಗ ಈ ಕಾನೂನುಗಳನ್ನು ಅರ್ಥಮಾಡಿಳ್ಳಲಿಲ್ಲ. ಕೆಲವು ರೈತರ ಮನವೊಲಿಸುವಲ್ಲಿ ನಾವು ಯಶಸ್ವಿಯಾಗಲಿಲ್ಲ ಎಂದು ನನಗೆ ಅನಿಸುತ್ತದೆ. ಹೀಗಾಗಿ, ಪ್ರಧಾನಿ ಮೋದಿ ಅವರು ಹೃದಯವಂತಿಕೆ ತೋರಿ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡರು" ಎಂದು ಚೌಧರಿ ಹೇಳಿದರು. .

‘ಚರ್ಚೆಯ ನಂತರವೇ ಶಾಸನಗಳನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಕಾನೂನುಗಳನ್ನು ಜಾರಿಗೆ ತಂದಿದ್ದರೆ, ರೈತರು ಲಾಭ ಪಡೆಯಲು ಹೆಚ್ಚು ದಿನ ಕಾಯಬೇಕಾಗಿರಲಿಲ್ಲ,‘ ಎಂದು ಅವರು ಹೇಳಿದರು.

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಖಾತ್ರಿಯಾಗುವವರೆಗೆ ತಮ್ಮ ಪ್ರತಿಭಟನೆಯನ್ನು ಕೈಬಿಡುವುದಿಲ್ಲ ಎಂಬ ರೈತ ಸಂಘಗಳ ನಿರ್ಧಾರದ ಕುರಿತು ಮಾತನಾಡಿದ ಸಚಿವ ಕೈಲಾಶ್‌ ಚೌಧರಿ ‘ಒಂದು ಸಣ್ಣ ರೈತ ಸಮುದಾಯದ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಪ್ರಧಾನಿಯವರು ತೆಗೆದುಕೊಂಡಿರುವ ಈ ನಿರ್ಧಾರಕ್ಕಿಂತಲೂ ದೊಡ್ಡದು ಏನಾದರೂ ಇರಬಹುದೇ? ರೈತರ ಬೇಡಿಕೆ ಇದ್ದದ್ದು ಕೃಷಿ ಕಾಯ್ದೆಗಳ ರದ್ದತಿ. ಅದನ್ನು ಈಡೇರಿಸಲಾಗಿದೆ. ರೈತಸಂಘದ ಮುಖಂಡರು ಹಠ ಮಾಡಬಾರದು. ಅವರು ತಮ್ಮ ಮನೆಗಳಿಗೆ ಹಿಂತಿರುಗಬೇಕು. ಅವರು ತಮ್ಮ ಕೃಷಿ ಚಟುವಟಿಕೆಗಳ ಮೇಲೆ ಗಮನಹರಿಸಬೇಕು’ ಎಂದು ಅವರು ಒತ್ತಾಯಿಸಿದರು.

ಇಂದು (ಶುಕ್ರವಾರ) ಬೆಳಿಗ್ಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಮೂರೂ ಕೃಷಿ ಕಾಯ್ದೆಗಳನ್ನು ರದ್ದುಪಡಿಸಲು ನಿರ್ಧರಿಸಿರುವುದಾಗಿ ಘೋಷಿಸಿದ್ದರು. ಸುಮಾರು ಒಂದು ವರ್ಷದಿಂದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ದೆಹಲಿಯ ಗಡಿ ಭಾಗಗಳಲ್ಲಿ ಹೋರಾಟ ನಡೆಸುತ್ತಿದ್ದು, ಕೊನೆಗೂ ಕೇಂದ್ರ ಸರ್ಕಾರವು ಕಾಯ್ದೆಗಳ ರದ್ದತಿ ನಿರ್ಧಾರ ಕೈಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು