ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರನ್ನು ಖಲಿಸ್ತಾನಿಗಳು ಎನ್ನಬೇಡಿ: ಮಾಧ್ಯಮಗಳಿಗೆ ಭಾರತೀಯ ಸಂಪಾದಕರ ಕೂಟ ಸಲಹೆ

‘ದೇಶದ್ರೋಹಿಗಳು’ ಎಂಬ ಹಣೆಪಟ್ಟಿ ಹಚ್ಚಬೇಡಿ
Last Updated 4 ಡಿಸೆಂಬರ್ 2020, 22:00 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಮೂರು ‘ಕೃಷಿ ಸುಧಾರಣಾ’ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ‘ಖಲಿಸ್ತಾನಿಗಳು’ ಮತ್ತು ‘ದೇಶದ್ರೋಹಿಗಳು’ ಎಂಬ ಹಣೆಪಟ್ಟಿ ಹಚ್ಚಬಾರದು ಎಂದು ಭಾರತೀಯ ಸಂಪಾದಕರ ಕೂಟವು ಮಾಧ್ಯಮಗಳಿಗೆ ಸಲಹೆ ನೀಡಿದೆ. ಭಿನ್ನಾಭಿಪ್ರಾಯವನ್ನು ಅವಹೇಳನ ಮಾಡುವಂತಹ ಕಾರ್ಯಗಳಲ್ಲಿ ಮಾಧ್ಯಮಗಳು ತಮ್ಮನ್ನು ತೊಡಗಿಸಿಕೊಳ್ಳಬಾರದು ಎಂದು ಕೂಟವು ಹೇಳಿದೆ.

ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಲ್ಲಿ ಬಹುತೇಕ ಮಂದಿ ಸಿಖ್ಖರು ಮತ್ತು ಪಂಜಾಬ್‌ನವರು. ಪ್ರತ್ಯೇಕ ಪಂಜಾಬ್ ರಾಷ್ಟ್ರಕ್ಕಾಗಿ (ಖಲಿಸ್ತಾನ) ಹೋರಾಟ ನಡೆಸುತ್ತಿರುವವರನ್ನು ಖಲಿಸ್ತಾನಿಗಳು ಎಂದು ಕರೆಯಲಾಗುತ್ತದೆ. ಆದರೆ ಕೆಲವು ಮಾಧ್ಯಮಗಳು, ಪಂಜಾಬ್‌ ರೈತರನ್ನು ಖಲಿಸ್ತಾನಿಗಳು ಮತ್ತು ದೇಶದ್ರೋಹಿಗಳು ಎಂದು ಬಿಂಬಿಸುತ್ತಿವೆ. ಇದು ಪುನರಾವರ್ತನೆಯಾಗುತ್ತಿದೆ.

‘ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರನ್ನು ಕೆಲವು ಮಾಧ್ಯಮಗಳು ತಮ್ಮ ವರದಿಗಳಲ್ಲಿ, ‘ಖಲಿಸ್ತಾನಿಗಳು’ ಮತ್ತು ‘ದೇಶವಿರೋಧಿಗಳು’ ಎಂದು ಕರೆಯುತ್ತಿವೆ. ಪ್ರತಿಭಟನೆ ನಡೆಸುತ್ತಿರುವವರನ್ನು, ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ
ಹೀಗೆ ಚಿತ್ರಿಸುತ್ತಿರುವುದು ಕಳವಳಕಾರಿ. ಇದು ಪತ್ರಿಕೋದ್ಯಮದ ಜವಾಬ್ದಾರಿ ಮತ್ತು ನೈತಿಕತೆಗೆ ವಿರುದ್ಧವಾದುದು. ಹೀಗೆ ಬಿಂಬಿಸಿದ್ದರಿಂದ ಮಾಧ್ಯಮಗಳ ವಿಶ್ವಾಸಾರ್ಹತೆಗೆ ಧಕ್ಕೆಯಾಗಿದೆ’ ಎಂದು ಸಂಪಾದಕರ ಕೂಟವು ಕಳವಳ ವ್ಯಕ್ತಪಡಿಸಿದೆ.

‘ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಚಲಾಯಿಸುತ್ತಿರುವ ರೈತರ ಬಗ್ಗೆ ಪಕ್ಷಪಾತವಿಲ್ಲದೆ ವರದಿ ಮಾಡಬೇಕು. ರೈತರ ಪ್ರತಿಭಟನೆಯ ವರದಿಗಾರಿಕೆಯಲ್ಲಿ ವಸ್ತುನಿಷ್ಠತೆ ಇರಬೇಕು, ಸಮತೋಲನ ಇರಬೇಕು. ಉಡುಗೆ ಮತ್ತು ಸಂಸ್ಕೃತಿಯ ಆಧಾರದ ಮೇಲೆ ಪ್ರತಿಭಟನಕಾರರ ಭಿನ್ನಾಭಿಪ್ರಾಯವನ್ನು ಮಾಧ್ಯಮವು ಅವಹೇಳನ ಮಾಡಬಾರದು' ಎಂದು ಸಂಪಾದಕರ ಕೂಟವು ಮಾಧ್ಯಮಗಳಿಗೆ ಸಲಹೆ ನೀಡಿದೆ.

ಎಂಎಸ್‌ಪಿಗೆ ಆರ್‌ಎಸ್‌ಎಸ್‌ ಘಟಕ ಬೆಂಬಲ: ‘ಕೃಷಿ ಉತ್ಪನ್ನಗಳನ್ನು ಎಪಿಎಂಸಿಯ ಮೂಲಕ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಖರೀದಿಸುವುದನ್ನು ನಾವು ಬೆಂಬಲಿಸುತ್ತೇವೆ’ ಎಂದುಆರ್‌ಎಸ್‌ಎಸ್‌ನ ರೈತ ಘಟಕ ಭಾರತೀಯ ಕಿಸಾನ್ ಸಂಘವು ಹೇಳಿದೆ. ಆದರೆ ರೈತರ ಪ್ರತಿಭಟನೆಯಿಂದ ಈ ಸಂಘವು ದೂರವುಳಿದಿದೆ.

ಮುಸ್ಲಿಮರ ಸಮುದಾಯ ಅಡುಗೆಮನೆ: ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಊಟದ ವ್ಯವಸ್ಥೆ ಮಾಡಲು ಪಂಜಾಬ್‌ನ 25 ಮುಸ್ಲಿಂ ಸ್ವಯಂಸೇವಕರು, ಸಿಂಘು ಗಡಿಯಲ್ಲಿ ಸಮುದಾಯ ಅಡುಗೆಮನೆ ನಡೆಸುತ್ತಿದ್ದಾರೆ. ಪಂಜಾಬ್ ಮುಸ್ಲಿಂ ಫೆಡರೇಶನ್‌ನ ಸದಸ್ಯರು ಇಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ.

ಕಳೆದ ಬುಧವಾರದಿಂದ ಈ ಅಡುಗೆ ಮನೆ ಸಿಂಘು ಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ‘ಎಲ್ಲರಿಗೂ ಅನ್ನ ನೀಡುವ ರೈತರಿಗೆ ನೆರವು ನೀಡಲು ನಾವು ಈ ಕೆಲಸ ಮಾಡುತ್ತಿದ್ದೇವೆ. ರೈತರು ನಮ್ಮೆಲ್ಲರಿಗಾಗಿ ಎಷ್ಟೆಲ್ಲಾ ಮಾಡುತ್ತಾರೆ. ಅದಕ್ಕೆ ಪ್ರತಿಯಾಗಿ ನಮ್ಮಿಂದ ಈ ಸಣ್ಣ ಸೇವೆ. ಪ್ರತಿಭಟನೆ ಎಷ್ಟು ದಿನ ಇರುತ್ತದೋ ಅಷ್ಟೂ ದಿನ, 24 ಗಂಟೆಯೂ ಈ ಅಡುಗೆಮನೆ ಕಾರ್ಯನಿರ್ವಹಿಸಲಿದೆ’ ಎನ್ನುತ್ತಾರೆ ಈ ತಂಡದ ಮುಂದಾಳು ಫಾರೂಕಿ ಮುಬೀನ್.

‘ದೆಹಲಿಗೆ ಒತ್ತೆಸೆರೆ’: ‘ಪ್ರತಿಭಟನೆ ಹೆಸರಿನಲ್ಲಿ ರಾಜಕೀಯ ಪಕ್ಷಗಳ ಕಾರ್ಯಕರ್ತರು ದೆಹಲಿಯನ್ನು ಪದೇ-ಪದೇ ಒತ್ತೆ ಇರಿಸಿಕೊಳ್ಳುತ್ತಿದ್ದಾರೆ. ಇಂತಹ ಸ್ಥಿತಿಯಿಂದ ದೆಹಲಿ ನಿವಾಸಿಗಳನ್ನು ಕಾಪಾಡಲು, ಅಗತ್ಯ ಕ್ರಮ ತೆಗೆದುಕೊಳ್ಳಬೇಕು' ಎಂದು ದೆಹಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರು ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಪತ್ರ ಬರೆದಿದ್ದಾರೆ.

‘ರಾಜಕೀಯ ಪಕ್ಷಗಳ ಕಾರ್ಯಕರ್ತರು ಕೆಲವು ದಿನಗಳಿಂದ ಪ್ರತಿಭಟನೆ ಹೆಸರಿನಲ್ಲಿ ದೆಹಲಿಗೆ ಎಲ್ಲಾ ಸ್ವರೂಪದ ಪೂರೈಕೆಯನ್ನು ಸ್ಥಗಿತಗೊಳಿಸಿದ್ದಾರೆ’ ಎಂದು ಕಪಿಲ್ ಮಿಶ್ರಾ ಕಳವಳ ವ್ಯಕ್ತಪಡಿಸಿದ್ದಾರೆ.

‘ಕಂಗನಾ ಕ್ಷಮೆ ಕೇಳಬೇಕು’

ರೈತರ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ವೃದ್ಧ ಮಹಿಳೆ, ‘100 ರೂಪಾಯಿಗೆಲ್ಲಾ ಸಿಗುತ್ತಾರೆ’ ಎಂದು ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರನೋಟ್ ಅವರಿಗೆ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ ಶುಕ್ರವಾರ ನೋಟಿಸ್ ನೀಡಿದೆ. ಕಂಗನಾ ಅವರು ಬೇಷರತ್ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದೆ.

ಕಂಗನಾ ಅವರು ನವೆಂಬರ್ 27ರಂದು ಮಾಡಿದ್ದ ಟ್ವೀಟ್‌ನಲ್ಲಿ, ಶಾಹೀನ್‌ಬಾಗ್ ಹೋರಾಟದ ಹಿರಿಯಜ್ಜಿ ಬಿಲ್ಕಿಸ್ ಬಾನೊ ಅವರ ಚಿತ್ರ ಮತ್ತು ಅವರನ್ನೇ ಹೋಲುವಂತಹ ಮತ್ತೊಬ್ಬ ಹಿರಿಯಜ್ಜಿಯ ಚಿತ್ರವನ್ನು ಹಾಕಿದ್ದರು. ಅಲ್ಲದೆ, ‘ಶಾಹೀನ್‌ಬಾಗ್‌ನ ಅಜ್ಜಿ ರೈತರ ಪ್ರತಿಭಟನೆಯಲ್ಲೂ ಕಾಣಿಸಿಕೊಂಡಿದ್ದಾರೆ. ಇವರು 100 ರೂಪಾಯಿಗೆಲ್ಲಾ ಸಿಗುತ್ತಾರೆ’ ಎಂದು ಬರೆದಿದ್ದರು.

ಕಂಗನಾ ಅವರು ಪ್ರಕಟಿಸಿದ್ದ ಚಿತ್ರದಲ್ಲಿ ಇದ್ದ ಮತ್ತೊಬ್ಬ ಹಿರಿಯಜ್ಜಿ ಬಿಲ್ಕಿಸ್ ಬಾನು ಆಗಿರಲಿಲ್ಲ. ಬದಲಿಗೆ ಆ ಹಿರಿಯಜ್ಜಿ ಮಹಿಂದರ್ ಕೌರ್ ಆಗಿದ್ದರು. ಇದನ್ನು ಹಲವರು ಗುರುತುಮಾಡಿ, ಕಂಗನಾ ಅವರನ್ನು ಟೀಕಿಸಿದರು. ಇದರ ಬೆನ್ನಲ್ಲೇ ನಟಿ ತಮ್ಮಟ್ವೀಟ್ ಅನ್ನು ಅಳಿಸಿಹಾಕಿದ್ದರು. ಆದರೆ ಈ ಸಂಬಂಧ ಪಂಜಾಬ್‌ನ ಗಾಯಕರ ಜತೆ ಕಂಗನಾ ತೀವ್ರ ವಾಗ್ವಾದ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT