ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಲೀಂಧ್ರ ಬಣ್ಣದಿಂದ ಧೃತಿಗೆಡಬೇಡಿ: ಕಾರಣ, ಪರಿಣಾಮ ತಿಳಿಯಿರಿ –ಪರಿಣಿತರ ಕಿವಿಮಾತು

ಕಪ್ಪು, ಹಳದಿ ಮತ್ತು ಬಿಳಿ ಶಿಲೀಂಧ್ರ
Last Updated 25 ಮೇ 2021, 12:08 IST
ಅಕ್ಷರ ಗಾತ್ರ

ನವದೆಹಲಿ: ‘ಸೋಂಕುಗಳ ಬಣ್ಣದಿಂದ ಧೃತಿಗೆಡಬೇಡಿ. ಅದಕ್ಕೆ ಕಾರಣ ಮತ್ತು ಅದರ ಪರಿಣಾಮಗಳನ್ನು ಮೊದಲು ಗುರುತಿಸಿ’ ಎಂದು ಕಪ್ಪು ಶಿಲೀಂಧ್ರ ಸೋಂಕು ಕುರಿತಂತೆ ವಿವಿಧ ಪರಿಣತರು ಸಲಹೆ ನೀಡಿದ್ದಾರೆ.

ಕಪ್ಪು ಶಿಲೀಂಧ್ರ ಸೋಂಕು ಪ್ರಕರಣಗಳ ಹಿಂದೆಯೇ ವಿವಿಧೆಡೆ ಬಿಳಿ ಶಿಲೀಂಧ್ರ, ಹಳದಿ ಶಿಲೀಂಧ್ರ ಸೋಂಕು ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಸೋಂಕು ಕುರಿತಂತೆ ಪರಿಣತರು ಮೇಲಿನಂತೆ ಸಲಹೆ ನೀಡಿದ್ದಾರೆ.

ಆರೋಗ್ಯ ಸಚಿವ ಹರ್ಷವರ್ಧನ್‌ ಅವರು ಈಚೆಗೆ, 18 ರಾಜ್ಯಗಳಲ್ಲಿ ಒಟ್ಟಾರೆ 5,424 ಮ್ಯೂಕೊರ್‌ಮೈಕೊಸಿಸ್‌ ಪ್ರಕರಣಗಳು ದಾಖಲಾಗಿವೆ. ಕೋವಿಡ್‌ ಪೀಡಿತರಲ್ಲಿ ಇವು ಜೀವಹಾನಿಗೆ ಕಾರಣವಾಗುತ್ತಿವೆ ಎಂದು ಹೇಳಿದ್ದರು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥರಾದ ಡಾ.ಸಮಿರನ್‌ ಪಾಂಡಾ, ‘ಸೋಂಕಿಗೆ ಸಂಬಂಧಿಸಿದಂತೆ ಕಪ್ಪು, ಹಳದಿ, ಬಿಳಿ ಎಂದು ಬಣ್ಣಗಳಿಂದ ಗುರುತಿಸುವುದೇ ಸಾರ್ವಜನಿಕರಲ್ಲಿ ಮೊದಲಿಗೆ ಆತಂಕ ಹಾಗೂ ಭೀತಿಯನ್ನು ಹೆಚ್ಚಿಸುತ್ತಿದೆ‘ ಎಂದು ಅಭಿಪ್ರಾಯಪಟ್ಟರು.

‘ನನ್ನ ಪ್ರಕಾರ ಜನಸಾಮಾನ್ಯರು ಸೋಂಕಿನ ಬಣ್ಣದ ಬಗ್ಗೆ ವಿಚಲಿತರಾಗಬಾರದು. ಸೋಂಕು ಯಾವುದೇ ಬಣ್ಣದ್ದಿರಲಿ, ದೇಹದಲ್ಲಿ ನಿರೋಧಕ ಶಕ್ತಿ ಕಡಿಮೆ ಇದ್ದಾಗಲೇ ಅದು ಬಾಧಿಸುತ್ತದೆ. ನಾವು ಮುಖ್ಯವಾಗಿ ಗಮನಕೊಡಬೇಕಿರುವುದು ದೇಹದಲ್ಲಿ ನಿರೋಧಕ ಶಕ್ತಿ ಅಥವಾ ಸಾಮರ್ಥ್ಯವನ್ನು ಹೆಚ್ಚಿಸುವುದೇ ಆಗಬೇಕಿದೆ’ ಎಂದು ಹೇಳಿದರು.

ಗಜಿಯಾಬಾದ್‌ನಲ್ಲಿ 54 ವರ್ಷದ ಒಬ್ಬರಿಗೇ ಮೂರೂ ಬಣ್ಣದ ಸೋಂಕುಗಳು (ಕಪ್ಪು, ಬಿಳಿ ಮತ್ತು ಹಳದಿ) ಬಾಧಿಸುತ್ತಿವೆ. ರೋಗಿಯು ಉತ್ತರ ಪ್ರದೇಶದ ಎನ್‌ಸಿಆರ್‌ ಸಿಟಿ ನಿವಾಸಿಯಾಗಿದ್ದಾರೆ ಎಂದು ಖಾಸಗಿ ಆಸ್ಪತ್ರೆಯೊಂದರಲ್ಲಿ ಆತನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮೇ 24ರಂದು ತಿಳಿಸಿದ್ದಾರೆ.

‘ಹಳದಿ ಸೋಂಕು ಅನ್ನು ಸಾಮಾನ್ಯವಾಗಿ ಹಲ್ಲಿಯಂತಹ ಸಸ್ತನಿಗಳಲ್ಲಿ ಕಾಣಬಹುದು. ಮನುಷ್ಯರಲ್ಲಿ ಅಲ್ಲ’ ಎಂದು ನಗರದ ಹರ್ಷ್ ಆಸ್ಪತ್ರೆಯ ಇಎನ್‌ಟಿ ತಜ್ಞ ಡಾ.ಬಿ.ಪಿ.ತ್ಯಾಗಿ ಅವರು ಪ್ರತಿಪಾದಿಸಿದರು.

ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ ಪ್ರೊಫೆಸರ್ ಡಾ.ಗಿರಿಧರ ಬಾಬು, ‘ಸೋಂಕು ಬಾಧಿಸಿದ ಸಂದರ್ಭದಲ್ಲಿ ಅದಕ್ಕೆ ಕಾರಣಗಳು ಮತ್ತು ಪರಿಣಾಮಗಳನ್ನು ಗುರುತಿಸುವುದೇ ಮುಖ್ಯ’ ಎಂದು ಹೇಳಿದರು.

ಮ್ಯೂಕೊರ್‌ಮೈಕೊಸಿಸ್‌ ಅಥವಾ ಕಪ್ಪುಶಿಲೀಂದ್ರ ಸೋಂಕು ಹರಡುವಾಗ ನಾವು ಏನು ಪರಿಶೀಲನೆ ಮಾಡುತ್ತಿದ್ದೇವೆ. ಸೂಕ್ಷ್ಮಾಣುಜೀವಿ ತಜ್ಞನಾಗಿ ನನಗೆ ಅದರಕ್ಕೆ ಕಾರಣಗಳನ್ನು ಗುರುತಿಸುವುದರಲ್ಲಿ ಆಸಕ್ತಿ ಇದೆ. ಮೊದಲ ಅಲೆಯಲ್ಲಿ ಇಂಥ ಪ್ರಕರಣ ಇರಲಿಲ್ಲ. ಈಗ ಎರಡನೇ ಅಲೆಯ ಸಂದರ್ಭದಲ್ಲಿಯಷ್ಟೇ ಕಾಣಿಸಿಕೊಂಡಿದೆ ಎಂದರು.

ದೇಶದಲ್ಲಿ ಮೊದಲ ಅಲೆಗಿಂತಲೂ ಎರಡನೇ ಅಲೆ ಭಿನ್ನವಾಗಿದೆ. ಈಗ ಕೈಗಾರಿಕಾ ಆಮ್ಲಜನಕ ಬಳಕೆ ಆಗುತ್ತಿದೆ. ರೂಪಾಂತರಿ ಸೋಂಕುಗಳು ಕಾಣಿಸಿಕೊಂಡಿವೆ. ಸಾಮಾನ್ಯವಾಗಿ ವಾತಾವರಣದಲ್ಲಿ ಸಾಂಕ್ರಾಮಿಕ ಸೋಂಕುಗಳು ಎಂದಿಗೂ ಇರುತ್ತವೆ. ಉತ್ತಮ ನಿರೋಧಕ ಶಕ್ತಿ ಇರುವವರಿಗೆ ಇವು ಬಾಧಿಸುವುದಿಲ್ಲ ಎಂದು ಹೇಳಿದರು.

ಏಮ್ಸ್ ನಿರ್ದೇಶಕ ರಣದೀಪ್‌ ಗುಲ್ಹೇರಿಯಾ ಅವರು ಈ ಸೋಂಕುಗಳನ್ನು ವರ್ಣದ ಬದಲಿಗೆ ನಿರ್ದಿಷ್ಟ ಹೆಸರಿನಿಂದಲೇ ಗುರುತಿಸುವುದು ಸೂಕ್ತ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT