ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತಿ ಆಗೋದು ಬೇಕಿಲ್ಲ, ನನ್ನದೇನಿದ್ದರೂ ಪ್ರಧಾನಿಯಾಗುವ ಗುರಿ: ಮಾಯಾವತಿ

Last Updated 28 ಏಪ್ರಿಲ್ 2022, 10:41 IST
ಅಕ್ಷರ ಗಾತ್ರ

ಲಖನೌ: ‘ನನಗೆ ಭಾರತದ ರಾಷ್ಟ್ರಪತಿ ಆಗುವ ಆಸೆಯಿಲ್ಲ. ನನ್ನದೇನಿದ್ದರೂ ಈ ದೇಶದ ಪ್ರಧಾನಿಯಾಗಬೇಕು ಅಥವಾ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿರಬೇಕು ಎಂಬುವುದೇ ಪ್ರಮುಖ ಗುರಿ’ ಎಂದು ಬಹುಜನ ಸಮಾಜವಾದಿ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ.

ಇತ್ತೀಚಿಗಷ್ಟೇ ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಅವರು, ‘ಬಿಜೆಪಿ ತಮ್ಮನ್ನು ರಾಷ್ಟ್ರಪತಿ ಮಾಡುತ್ತೆ ಎನ್ನುವ ಕನಸನ್ನು ಮಾಯಾವತಿ ಕಾಣುತ್ತಿದ್ದಾರೆ’ ಎಂದು ಲೇವಡಿ ಮಾಡಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಮಾಯಾವತಿ, ‘ನಾನು ಪ್ರಧಾನಿ ಅಥವಾ ಯುಪಿ ಸಿಎಂ ಆಗುವ ಕನಸು ಕಾಣುತ್ತೇನೆ ಹೊರತು ಸಮಾಜವಾದಿ ಪಕ್ಷದ ನಾಯಕನ ರೀತಿ ಈಡೇರದ ಕನಸು ಕಾಣುವುದಿಲ್ಲ’ ಎಂದಿದ್ದಾರೆ.

‘ನಾನು ನನ್ನ ಜೀವನವನ್ನು ಹಾಯಾಗಿ ಕಳೆಯಲು ಇಷ್ಟುಪಡುವುದಿಲ್ಲ. ಅಂಬೇಡ್ಕರ್ ಹಾಗೂ ಕಾನ್ಶಿರಾಮ್ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯುತ್ತಿರುವೆ. ಅವರ ಕನಸುಗಳನ್ನು ಈಡೇರಿಸಲು ಶ್ರಮಿಸುತ್ತಿದ್ದೇನೆ. ರಾಷ್ಟ್ರಪತಿಯಾದರೆ ಈ ಕೆಲಸಗಳನ್ನು ಮಾಡಲು ಆಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತು’ ಎಂದು ಹೇಳಿದ್ದಾರೆ.

‘ಹಿಂದುಳಿದವರು, ಆದಿವಾಸಿಗಳು, ದಲಿತರು, ಬಡವರು ಹಾಗೂ ಮುಸ್ಲಿಮರು ಬಿಎಸ್‌ಪಿಗೆ ಬೆಂಬಲ ನೀಡಿದರೆ ನಾವು ಕೇವಲ ಉತ್ತರ ಪ್ರದೇಶ ಸಿಎಂ ಆಗುವುದಿಲ್ಲ, ಪ್ರಧಾನಿಯೇ ಆಗಬಹುದು’ ಎಂದು ಮಾಯಾವತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ಹಾಗೇ ನೋಡಿದರೆ ನನ್ನನ್ನು ಈ ದೇಶದ ರಾಷ್ಟ್ರಪತಿಯನ್ನಾಗಿ ಮಾಡಿ, ತಾನು ಮಾತ್ರ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸಬಹುದು ಎಂದು ಸಮಾಜವಾದಿ ಪಕ್ಷ ಕನಸು ಕಾಣುತ್ತಿದೆ. ಆದರೆ, ಎಸ್‌ಪಿ ಇನ್ನೆಂದೂ ಅಧಿಕಾರಕ್ಕೆ ಬರುವುದಿಲ್ಲ. ಅದರ ನಾಯಕರು ವಿದೇಶಕ್ಕೆ ಪಲಾಯನ ಮಾಡುತ್ತಾರೆ’ ಎಂದು ಮಾಯಾವತಿ ಕುಹಕವಾಡಿದ್ದಾರೆ.

ಕಳೆದ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಮಾಯಾವತಿ ಅವರ ಬಿಎಸ್‌ಪಿ ಹಿಂಬಾಗಿಲಿನಿಂದ ಸಹಾಯ ಮಾಡಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದಕ್ಕಾಗಿ ಬಿಜೆಪಿ ಮಾಯಾವತಿ ಅವರನ್ನು ರಾಷ್ಟ್ರಪತಿಯನ್ನಾಗಿ ಮಾಡುತ್ತದೆ ಎಂಬ ಗುಸುಗುಸು ಕೇಳಿ ಬಂದಿದ್ದವು. ಯುಪಿ ಫಲಿತಾಂಶದಲ್ಲಿ ಬಿಎಸ್‌ಪಿ 1 ಸ್ಥಾನವನ್ನು ಗೆಲ್ಲಲು ಮಾತ್ರ ಶಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT