ಶುಕ್ರವಾರ, ಅಕ್ಟೋಬರ್ 7, 2022
24 °C

ದ್ರೌಪದಿ ಮುರ್ಮು ಪರ ಒಡಿಶಾದಲ್ಲಿ ಭಾರಿ ಸಂಭ್ರಮ, ಬಿಜೆಪಿಯಿಂದ ಅಭಿನಂದನೆ ಯಾತ್ರೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: 15 ನೇ ರಾಷ್ಟ್ರಪತಿ ಚುನಾವಣೆ ಭಾಗವಾಗಿ ಇಂದು ಸಂಸತ್ ಭವನದಲ್ಲಿ ಮತ ಎಣಿಕೆ ಬಿರುಸಿನಿಂದ ಸಾಗಿದ್ದು ಸಂಜೆಯ ವೇಳೆಗೆ ಫಲಿತಾಂಶ ಪ್ರಕಟಗೊಳ್ಳಲಿದೆ.

ಎನ್‌ಡಿಎ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ರಾಜ್ಯಪಾಲೆ ಹಾಗೂ ಬುಡಕಟ್ಟು ಸಮುದಾಯದ ನಾಯಕಿ ದ್ರೌಪದಿ ಮುರ್ಮು ಮತ್ತು ವಿರೋಧ ಪಕ್ಷಗಳ ಬೆಂಬಲಿತ ಅಭ್ಯರ್ಥಿಯಾಗಿ ಟಿಎಂಸಿ ನಾಯಕರಾಗಿದ್ದ ಯಶವಂತ್ ಸಿನ್ಹಾ ಅವರು ಕಣದಲ್ಲಿದ್ದಾರೆ.

ದ್ರೌಪದಿ ಮುರ್ಮು ಅವರ ಗೆಲುವು ಬಹುತೇಕ ನಿಚ್ಚಳವಾಗಿರುವುದರಿಂದ ಅವರ ಹುಟ್ಟೂರಾದ ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರಾಯ್‌ರಂಗಪುರ್‌ನಲ್ಲಿ ಸಂಭ್ರಮ ಮನೆ ಮಾಡಿದೆ.

ಒಡಿಶಾದಲ್ಲಿ ಜನ ಹಾಗೂ ಅನೇಕ ಸಂಘಟನೆಗಳು ಸ್ವಯಂಪ್ರೇರಿತವಾಗಿ ಸಂಭ್ರಮ ಆಚರಿಸುತ್ತಿದ್ದಾರೆ. ಮಯೂರ್‌ಭಂಜ್ ನಲ್ಲಿ 20 ಸಾವಿರಕ್ಕೂ ಹೆಚ್ಚು ಲಡ್ಡುಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. 10 ಸಾವಿರಕ್ಕು ಅಧಿಕ ಬ್ಯಾನರ್‌ಗಳು ರಾರಾಜಿಸುತ್ತಿವೆ.

ಇದೇ ಮೊದಲ ಬಾರಿಗೆ ಬುಡಕಟ್ಟು ಸಮುದಾಯದವರೊಬ್ಬರು ರಾಷ್ಟ್ರದ ಪರಮೋಚ್ಚ ಸ್ಥಾನವನ್ನು ಅಲಂಕರಿಸುತ್ತಿದ್ದಾರೆ. ಇದರಿಂದ ಒಡಿಶಾ ಸೇರಿದಂತೆ ದೇಶದ ಆದಿವಾಸಿ ಹಾಗೂ ಬುಡಕಟ್ಟು ಸಮುದಾಯಗಳಲ್ಲಿ ಸಂಭ್ರಮ ಗರಿಗೆದರುವಂತೆ ಮಾಡಿದೆ.

 

ಇನ್ನು ಮುರ್ಮು ಅವರ ಗೆಲುವು ಖಚಿತ ಎಂದು ತಿಳಿದಿರುವ ಬಿಜೆಪಿ, ರಾಷ್ಟ್ರ ರಾಜಧಾನಿಯಲ್ಲಿ  ಅಭಿನಂದನೆ ಯಾತ್ರೆ ಆಯೋಜಿಸಿದೆ. ಸಂಜೆ ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರು ಪಂಡಿತ್ ಪಂತ್ ಮಾರ್ಗದಿಂದ ರಾಜಪಥ್ ಮಾರ್ಗದವರೆಗೆ ಯಾತ್ರೆ ಆಯೋಜಿಸಿದ್ದಾರೆ. ಅಲ್ಲದೇ ನಡ್ಡಾ ಅವರು ಬಿಜೆಪಿ ಕಚೇರಿಯಲ್ಲಿ ನೂತನ ರಾಷ್ಟ್ರಪತಿ ಬಗ್ಗೆ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಮೊದಲಿಗೆ ಸಂಸದರ ಮತಗಳನ್ನು ಎಣಿಕೆ ಮಾಡಿ ಫಲಿತಾಂಶದ ಟ್ರೆಂಡ್ ಏನಿದೆ ಎಂಬುದನ್ನು ಮುಖ್ಯ ಚುನಾವಣಾ ಅಧಿಕಾರಿ ಹೇಳಲಿದ್ದಾರೆ. ನಂತರ ಇಂಗ್ಲಿಷ್ ವರ್ಣಮಾಲೆಯ ಮೊದಲ ಅಕ್ಷರಗಳ ಆಧಾರದಲ್ಲಿ 10 ರಾಜ್ಯಗಳ ಮತ ಎಣಿಕೆ ಮಾಡಿ ಮುನ್ನಡೆ ಯಾರಿದ್ದಾರೆ? ಎಂದು ಮತ್ತೊಂದು ಸಲ ಘೋಷಣೆ ಮಾಡುತ್ತಾರೆ.

ಎಲ್ಲ ರಾಜ್ಯಗಳ ಮತ ಎಣಿಕೆ ಮುಗಿದ ಮೇಲೆ ಸಂಜೆ ವೇಳೆಗೆ ಯಾರಿಗೆ ಎಷ್ಟು ಮತ ಬಂದಿವೆ ಎಂಬುದನ್ನು ಅಧಿಕೃತವಾಗಿ ಮುಖ್ಯ ಚುನಾವಣಾ ಅಧಿಕಾರಿ ಪಿ.ಸಿ ಮೋದಿ ಅವರು ಪ್ರಕಟ ಮಾಡುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು