ಮಂಗಳವಾರ, ಆಗಸ್ಟ್ 16, 2022
21 °C

ಕೇರಳದಲ್ಲಿ ರಂಗೇರಿದ ಸ್ಥಳೀಯಾಡಳಿತ ಚುನಾವಣೆ: ಪ್ರಚಾರಕ್ಕೂ ಡ್ರೋನ್ ಬಳಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಕೋವಿಡ್‌–19 ಪಿಡುಗಿನ ಸಂದರ್ಭದಲ್ಲಿ ಮನೆಮನೆಗಳಿಗೆ ತೆರಳಿ ಚುನಾವಣಾ ಪ್ರಚಾರವು ಅಭ್ಯರ್ಥಿಗಳಿಗೆ ಸವಾಲಾಗಿದ್ದು, ಬಹುಮಹಡಿ ಕಟ್ಟಡಗಳಲ್ಲಿ ವಾಸಿಸುತ್ತಿರುವ ಜನರನ್ನು ತಲುಪುವುದೂ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಕೊಟ್ಟಯಂನ ಸ್ಥಳೀಯಾಡಳಿತ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಯೊಬ್ಬರು ಡ್ರೋನ್‌ ಮುಖಾಂತರ ಪರಿಹಾರ ಕಂಡುಕೊಂಡಿದ್ದಾರೆ.

ಕೊಟ್ಟಯಂ ನಗರಪಾಲಿಕೆ ಎಡರಂಗದ ಅಭ್ಯರ್ಥಿ ಜಿಬ್ಬಿ ಜಾನ್‌ ಎಂಬುವವರು, ತಮ್ಮ ಸ್ನೇಹಿತನ ಸಲಹೆ ಮೇರೆಗೆ ಚುನಾವಣಾ ಪ್ರಚಾರಕ್ಕೆ ಡ್ರೋನ್‌ ಬಳಕೆ ಮಾಡಿದ್ದಾರೆ.  ಸಿಪಿಎಂ ಅಭ್ಯರ್ಥಿಯಾಗಿ ಜಿಬ್ಬಿ ಕಣಕ್ಕೆ ಇಳಿದಿರುವ ಕಂಜಿಕ್ಕುಳಿ ವಾರ್ಡ್‌ನಲ್ಲಿ ಹೆಚ್ಚಿನ ಬಹುಮಹಡಿ ಕಟ್ಟಡಗಳಿವೆ. ಕೋವಿಡ್‌–19 ಕಾರಣದಿಂದಾಗಿ ಈ ಕಟ್ಟಡಗಳಿಗೆ ಪ್ರವೇಶಿಸಲು ಅವುಗಳ ಮಾಲೀಕರು ನಿರ್ಬಂಧ ಹೇರಿದ್ದಾರೆ. ಮುಖಾಮುಖಿಯಾಗಿ ಭೇಟಿಯಾಗಿ ಮತದಾರರನ್ನು ಮಾತನಾಡಿಸಲು ಈ ನಿರ್ಬಂಧವು ಅಭ್ಯರ್ಥಿಗಳಿಗೆ ಅಡ್ಡಿಯಾಗಿದೆ.

ಜಿಬ್ಬಿ ಅವರ ಸ್ನೇಹಿತ ಸೂರಜ್‌ ಡ್ರೋನ್‌ ಕಾರ್ಯಾಚರಣೆ ನಡೆಸಲು ಅನುಮತಿಯನ್ನು ಪಡೆದಿದ್ದಾರೆ. ಬಹುಮಹಡಿ ಕಟ್ಟಡಗಳಲ್ಲಿ ಇರುವ ಮತದಾರರನ್ನು ತಲುಪಲು ಡ್ರೋನ್‌ ಬಳಕೆಯ ಸಲಹೆಯನ್ನು ಸೂರಜ್‌ ನೀಡಿದ್ದರು. ಡ್ರೋನ್‌ನಲ್ಲಿ ಅಭ್ಯರ್ಥಿಯ ಚಿತ್ರ, ವಿವರ ಹಾಗೂ ಮತದಾನಕ್ಕೆ ಮನವಿಯುಳ್ಳ ಬ್ಯಾನರ್‌ ಅನ್ನು ನೇತು ಹಾಕಿ ಹಾರಿಬಿಡಲಾಗುತ್ತಿದೆ. ಜನರು ಇದನ್ನು ವೀಕ್ಷಿಸಲು ಬಾಲ್ಕನಿಗೆ ಬಂದ ಸಂದರ್ಭದಲ್ಲಿ ಬಹುಮಹಡಿ ಕಟ್ಟಡದ ಪ್ರವೇಶದ್ವಾರದಲ್ಲಿ ನಿಲ್ಲುವ ಜಿಬ್ಬಿ, ತಮಗೆ ಮತದಾನ ಮಾಡುವಂತೆ ಮನವಿ ಮಾಡಿ ಕೈಬೀಸುತ್ತಿದ್ದಾರೆ.

‘ಈ ಪ್ರದೇಶದಲ್ಲಿ ಜಿಬ್ಬಿ ಅವರು ಎಲ್ಲರಿಗೂ ಪರಿಚಿತರು. ಹೀಗಿದ್ದರೂ, ಕೋವಿಡ್‌–19 ಕಾರಣದಿಂದಾಗಿ ಮತದಾರರನ್ನು  ಪರಸ್ಪರ ಭೇಟಿಯಾಗಲು ಸಾಧ್ಯವಾಗುತ್ತಿರಲಿಲ್ಲ. ಈ ಸಮಸ್ಯೆಯನ್ನು ನನ್ನ ಬಳಿ ಹೇಳಿಕೊಂಡಿದ್ದರು. ಹೀಗಾಗಿ ಡ್ರೋನ್‌ ಬಳಕೆಯ ಸಲಹೆಯನ್ನು ನೀಡಿದ್ದೆ. ಡ್ರೋನ್‌ ಬಳಸಿ ಚುನಾವಣಾ ಪ್ರಚಾರವು ಹೆಚ್ಚಿನ ಮತದಾರರನ್ನು ಸೆಳೆದಿದೆ’ ಎಂದು ಸೂರಜ್‌ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು