ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ರಾಜ್ಯಗಳಲ್ಲಿ ರಾಜಕೀಯ ಸಂಪ್ರದಾಯವಾಗಿರುವ ‘ವಂಶಾಡಳಿತ ಭ್ರಷ್ಟಾಚಾರ’: ಮೋದಿ

Last Updated 27 ಅಕ್ಟೋಬರ್ 2020, 15:22 IST
ಅಕ್ಷರ ಗಾತ್ರ

ನವದೆಹಲಿ: ‘ವಂಶಾಡಳಿತ ಭ್ರಷ್ಟಾಚಾರ’ ದೇಶಕ್ಕೆ ದೊಡ್ಡ ಸವಾಲಾಗಿದೆ,' ಎಂದು ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಹೇಳಿದ್ದಾರೆ. ಅಲ್ಲದೆ, 'ಇದು ಅನೇಕ ರಾಜ್ಯಗಳಲ್ಲಿ ರಾಜಕೀಯ ಸಂಪ್ರದಾಯದ ಒಂದು ಭಾಗವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

‘ಜಾಗರೂಕತೆ ಮತ್ತು ಭ್ರಷ್ಟಚಾರ ವಿರೋಧ’ದ ಕುರಿತ ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಧಾನಿ ಮಂಗಳವಾರ ಮಾತನಾಡಿದರು. ‘ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ವರ್ಗಾವಣೆಗೊಳ್ಳುತ್ತಿರುವ ಭ್ರಷ್ಟಾಚಾರವು ದೇಶವನ್ನು ಟೊಳ್ಳಾಗಿಸಿದೆ,’ ಎಂದು ಅವರು ಅಭಿಪ್ರಾಯಪಟ್ಟರು.

‘ಇಂದು ನಾನು ನಿಮ್ಮ ಮುಂದೆ ಮತ್ತೊಂದು ದೊಡ್ಡ ಸವಾಲನ್ನು ಪ್ರಸ್ತಾಪಿಸಲಿದ್ದೇನೆ. ಈ ಸವಾಲು ಕಳೆದ ದಶಕಗಳಲ್ಲಿ ಕ್ರಮೇಣ ಬೆಳೆಯುತ್ತಾ ಬಂದಿದೆ. ದೇಶದಲ್ಲಿ ಅಸಾಧಾರಣ ರೂಪವವನ್ನೂ ಪಡೆದುಕೊಂಡಿದೆ. ಅದು ವಂಶಾಡಳಿತ ಭ್ರಷ್ಟಾಚಾರದ ಸವಾಲು. ಅಂದರೆ ಭ್ರಷ್ಟಾಚಾರವನ್ನು, ಒಂದು ಪೀಳಿಗೆಯವರು ಮತ್ತೊಂದು ತಲೆಮಾರಿನವರಿಗೆ ವರ್ಗಾಯಿಸುತ್ತಿದ್ದಾರೆ,’ ಎಂದು ಮೋದಿ ಹೇಳಿದರು.

‘ಕಳೆದ ದಶಕಗಳಲ್ಲಿ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಒಂದು ತಲೆಮಾರಿನವರು ಶಿಕ್ಷೆಯಿಂದ ಪಾರಾಗಿದ್ದಾರೆ. ಮುಂದಿನ ಪೀಳಿಗೆಯವರು ಇಂತಹ ಕೃತ್ಯಗಳನ್ನು ಮಾಡುವಲ್ಲಿ ಲಜ್ಜಾಹೀನರಾಗಿದ್ದಾರೆ. ಮನೆಯಲ್ಲಿ ಕುಳಿತೇ ಕೋಟಿ ರೂಪಾಯಿಗಳನ್ನು ಸಂಪಾದಿಸಿದರೂ ಏನೂ ಆಗದಿದ್ದಾಗ, ಅತನ ಆತ್ಮವಿಶ್ವಾಸವು ಮತ್ತಷ್ಟು ಹೆಚ್ಚಾಗುತ್ತದೆ’ ಎಂದು ಮೋದಿ ಹಿಂದಿ ಭಾಷಣದಲ್ಲಿ ಹೇಳಿದರು.

ಭ್ರಷ್ಟಾಚಾರದ ತಡೆಗೆ ವ್ಯವಸ್ಥಿತ ತಪಾಸಣೆ, ಪರಿಣಾಮಕಾರಿ ಲೆಕ್ಕಪರಿಶೋಧನೆ, ಸಾಮರ್ಥ್ಯ ವೃದ್ಧಿ, ತರಬೇತಿಯ ಅಗತ್ಯವಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

‘ಭ್ರಷ್ಟಾಚಾರದ ವಿರುದ್ಧ ಹೋರಾಡುವುದು ಯಾವುದೇ ಒಂದು ಸಂಸ್ಥೆಯ ಕೆಲಸವಲ್ಲ. ಆದರೆ ಅದು ಸಾಮೂಹಿಕ ಜವಾಬ್ದಾರಿಯಾಗಿದೆ’ ಎಂದು ಅವರು ಇದೇ ವೇಳೆ ಹೇಳಿದರು.

ಮೂರು ದಿನಗಳ ರಾಷ್ಟ್ರೀಯ ಸಮ್ಮೇಳನವನ್ನು ಸಿಬಿಐ ಆಯೋಜಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT