ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ.ಡಿಯಿಂದ ಪಂಜಾಬ್‌ ಸಿಎಂ ಚನ್ನಿ ಸೋದರಳಿಯನ ಬಂಧನ

Last Updated 4 ಫೆಬ್ರುವರಿ 2022, 18:16 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಪಂಜಾಬ್‌ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಅವರ ಸೋದರ ಅಳಿಯ ಭೂಪಿಂದರ್ ಸಿಂಗ್ ಅವರನ್ನುಮರಳು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಬಂಧಿಸಿದೆ. ಇದು ರಾಜಕೀಯ ಆರೋಪ–ಪ್ರತ್ಯಾರೋಪಕ್ಕೆ ಕಾರಣವಾಗಿದೆ.

2018ರಲ್ಲಿ ದಾಖಲಾಗಿದ್ದ ಮರಳು ಅಕ್ರಮ ಗಣಿಗಾರಿಕೆ ಪ್ರಕರಣದ ಸಂಬಂಧ ಜನವರಿ 18ರಂದು ಜಾರಿ ನಿರ್ದೇಶನಾಲಯವು ಭೂಪಿಂದರ್ ಸಿಂಗ್ ಅವರ ಮನೆ, ಕಚೇರಿ ಮತ್ತು ಇತರ ಕಡೆಗಳಲ್ಲಿ ಶೋಧ ಕಾರ್ಯ ನಡೆಸಿತ್ತು. ಆಗ ₹8 ಕೋಟಿ ನಗದು ಪತ್ತೆಯಾಗಿತ್ತು. ಆ ಸಂಬಂಧ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣದ ವಿಚಾರಣೆಗಾಗಿ ನಿರ್ದೇಶನಾಲಯದ ಜಲಂಧರ್ ಕಚೇರಿಗೆ ಭೂಪಿಂದರ್ ಸಿಂಗ್ ಅವರನ್ನು
ಗುರುವಾರ ಕರೆಸಿಕೊಳ್ಳಲಾಗಿತ್ತು. ತಡರಾತ್ರಿಯವರೆಗೂ ವಿಚಾರಣೆ ನಡೆಸಲಾಯಿತು. ಆನಂತರ ಭೂಪಿಂದರ್ ಅವರನ್ನು ಬಂಧಿಸಲಾಯಿತು ಎಂದು ಜಾರಿ ನಿರ್ದೇಶನಾಲಯವು ಹೇಳಿದೆ.

‘ವಿಚಾರಣೆ ವೇಳೆ ಕೇಳಲಾದ ಪ್ರಶ್ನೆಗೆ ಅವರು ಸಮರ್ಪಕವಾದ ಉತ್ತರ ನೀಡಿಲ್ಲ. ಬದಲಿಗೆ ಹಾರಿಕೆಯ ಉತ್ತರ
ನೀಡುತ್ತಿದ್ದರು. ವಿಚಾರಣೆ ಮುಂದುವರಿಸುವ ಅಗತ್ಯ ಇರುವ ಕಾರಣ ಅವರನ್ನು ಬಂಧಿಸಲಾಗಿದೆ. ಅವರನ್ನು ಶೀಘ್ರವೇ ಹಣ ಅಕ್ರಮ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ’ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಹೇಳಿದ್ದಾರೆ.

ಪಂಜಾಬ್‌ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್‌ ತನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನೇನು ಘೋಷಿಸಲಿದೆ. ಆ ಸಂದರ್ಭದಲ್ಲಿಯೇ ಮುಖ್ಯಮಂತ್ರಿ ಚನ್ನಿ ಅವರ ಸೋದರಳಿಯನನ್ನು ಜಾರಿ ನಿರ್ದೇಶನಾಲಯವು ಬಂಧಿಸಿದೆ. ಚನ್ನಿ ಸಹ ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯ ಆಕಾಂಕ್ಷಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT