ನವದೆಹಲಿ (ಪಿಟಿಐ): ಬಿಎಸ್–4 ವಾಹನ ಖರೀದಿಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ಸಂಬಂಧ ತನಿಖೆ ಕೈಗೊಂಡಿರುವ ಜಾರಿ ನಿರ್ದೇಶನಾಲಯವು (ಇ.ಡಿ) ಆಂಧ್ರಪ್ರದೇಶದ ತೆಲುಗು ದೇಶಂ ಪಕ್ಷದ (ಟಿಡಿಪಿ) ಮಾಜಿ ಶಾಸಕ ಜೆ.ಸಿ.ಪ್ರಭಾಕರ ರೆಡ್ಡಿ, ಅವರ ಸಹವರ್ತಿ ಮತ್ತು ಅವರ ಒಡೆತನದ ಕಂಪನಿಗಳಿಗೆ ಸೇರಿದ ₹22 ಕೋಟಿಗೂ ಅಧಿಕ ಮೌಲ್ಯದ ಸ್ವತ್ತುಗಳನ್ನು ಬುಧವಾರ ಮುಟ್ಟುಗೋಲು ಹಾಕಿದೆ.
‘ಈ ಹಗರಣದಲ್ಲಿ ಅಶೋಕ್ ಲೇಲ್ಯಾಂಡ್ ಕಂಪನಿಯ ಪಾತ್ರದ ಕುರಿತು ತನಿಖೆ ಕೈಗೊಳ್ಳಲಾಗಿದೆ’ ಎಂದು ಇ.ಡಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
‘ರೆಡ್ಡಿ ಅಧೀನದ ಜಟಾಧರ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ (ಜೆಐಪಿಎಲ್) ಕಂಪನಿ, ರೆಡ್ಡಿ ಅವರ ಸಹವರ್ತಿ ಸಿ.ಗೋಪಾಲ ರೆಡ್ಡಿ ಹಾಗೂ ಇತರರು ಅಶೋಕ್ ಲೇಲ್ಯಾಂಡ್ ಕಂಪನಿಯಿಂದ 2017ರ ಮಾರ್ಚ್‌ನಲ್ಲಿ ಬಿಎಸ್–3 ವಾಹನಗಳನ್ನು ಖರೀದಿಸಿದ್ದರು. ಬಳಿಕ ಅವುಗಳನ್ನು ಬಿಎಸ್–4 ವಾಹನಗಳೆಂದು ಅಕ್ರಮವಾಗಿ ನೋಂದಣಿ ಮಾಡಿದ್ದರು. ದರ ಪಟ್ಟಿಯನ್ನೂ ತಿರುಚಿದ್ದರು’ ಎಂದು ಹೇಳಲಾಗಿದೆ.
‘ನಾಗಲ್ಯಾಂಡ್, ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ಕೆಲ ವಾಹನಗಳ ನೋಂದಣಿ ಮಾಡಿಸಿರುವ ಮಾಹಿತಿ ತನಿಖೆಯಿಂದ ಬಹಿರಂಗವಾಗಿತ್ತು. ರೆಡ್ಡಿ ಹಾಗೂ ಅವರ ಸಹವರ್ತಿಗೆ ಸೇರಿದ ₹6.31 ಕೋಟಿ ಮೌಲ್ಯದ ಚರಾಸ್ತಿ ಹಾಗೂ ₹15.79 ಕೋಟಿ ಮೌಲ್ಯದ ಸ್ಥಿರಾಸ್ತಿ ಜಪ್ತಿ ಮಾಡಲಾಗಿದೆ. ತನಿಖೆ ಮುಂದುವರಿಸಲಾಗಿದೆ’ ಎಂದೂ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.