ಸೋಮವಾರ, ಆಗಸ್ಟ್ 8, 2022
23 °C

ಜಮ್ಮು- ಕಾಶ್ಮೀರ: ಬಿಲಾಕ್ವಿಸ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಿದ ಇ.ಡಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಶಬೀರ್‌ ಶಾ ಪತ್ನಿ ಬಿಲಾಕ್ವಿಸ್‌ ಶಾ ವಿರುದ್ಧ ಜಾರಿ ನಿರ್ದೇಶನಾಲಯವು (ಇ.ಡಿ) ಚಾರ್ಜ್‌ಶೀಟ್‌ ಸಲ್ಲಿಸಿದೆ.

ಜಮ್ಮು ಮತ್ತು ಕಾಶ್ಮೀರದ ಭಯೋತ್ಪಾದಕರಿಗೆ ಹಣಕಾಸಿನ ನೆರವು ನೀಡುತ್ತಿರುವ ಜಾಲದ ಬಗ್ಗೆ ಇ.ಡಿ ತನಿಖೆ ನಡೆಸುತ್ತಿದೆ. ಜಾರ್ಜ್‌ಶೀಟ್‌ನಲ್ಲಿ ಬಿಲಾಕ್ವಿಸ್‌ ಅವರನ್ನು ಆರೋಪಿ ಎಂದು ಉಲ್ಲೇಖಿಸಲಾಗಿದೆ.

ಹೆಚ್ಚುವರಿ ಹಾಗೂ ಸೆಷನ್ಸ್‌ ನ್ಯಾಯಾಧೀಶ ಧರ್ಮೇಂದ್ರ ರಾಣಾ ಅವರು ನವೆಂಬರ್‌ 10ರಂದು ಇದರ ವಿಚಾರಣೆ ನಡೆಸಲಿದ್ದಾರೆ.

ಬಿಲಾಕ್ವಿಸ್‌ ಹಾಗೂ ಶಬೀರ್‌ ಅವರು ಹವಾಲಾ ಡೀಲರ್‌ ಅಸ್ಲಾಮ್‌ ವನಿ ಎಂಬಾತನಿಂದ ₹2.08 ಕೋಟಿ ಹಣ ಸ್ವೀಕರಿಸಿದ್ದಾರೆ ಎಂದು ಇ.ಡಿ ಪರ ವಿಶೇಷ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎನ್‌.ಕೆ.ಮಠ್‌ ಮತ್ತು ರಾಜೀವ್‌ ಅಶ್ವತಿ ಅವರು ಜಾರ್ಜ್‌ಶೀಟ್‌ನಲ್ಲಿ ತಿಳಿಸಿದ್ದಾರೆ.

‘ ₹2.08 ಕೋಟಿ ಮೊತ್ತವನ್ನು ನಗದು ರೂಪದಲ್ಲಿ ಶಬೀರ್‌ ಮತ್ತು ಬಿಲಾಕ್ವಿಸ್‌ಗೆ ನೀಡಿರುವುದಾಗಿ ಅಸ್ಲಾಮ್‌ ವನಿ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ’ ಎಂಬ ಅಂಶವನ್ನೂ ಜಾರ್ಜ್‌ಶೀಟ್‌ನಲ್ಲಿ ಸೇರಿಸಲಾಗಿದೆ.

‘ತನ್ನ ಪತಿಗೆ ಯಾವುದೇ ಆದಾಯ ಮೂಲಗಳಿಲ್ಲ. ಇದು ಅಕ್ರಮ ಹಣ ಎಂಬುದು ಗೊತ್ತಾದ ಮೇಲೂ ಬಿಲಾಕ್ವಿಸ್‌ ಅಷ್ಟೂ ಮೊತ್ತವನ್ನೂ ಪಡೆದಿದ್ದಾರೆ. ತನ್ನ ಗಂಡನ ಅಪರಾಧ ಚಟುವಟಿಕೆಗಳಲ್ಲಿ ಅವರೂ ಸಕ್ರಿಯವಾಗಿ ಭಾಗಿಯಾಗಿರುವುದು ಇದರಿಂದ ಖಾತರಿಯಾಗುತ್ತದೆ. ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್‌ 3ರ ಅನ್ವಯ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ’ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಜಮಾತ್ ಉಲ್‌ ದವಾ ಸಂಘಟನೆಯ ಮುಖ್ಯಸ್ಥ ಹಾಗೂ ಭಯೋತ್ಪಾದಕ ಹಫೀಜ್‌ ಸಯೀದ್‌ ಜೊತೆ ಶಬೀರ್‌ ನಿರಂತರ ಸಂಪರ್ಕದಲ್ಲಿದ್ದ. ಪಾಕಿಸ್ತಾನದ ಮೊಹಮ್ಮದ್‌ ಶಫಿ ಶಾಯರ್‌ ಜೊತೆಗೂ ಶಬೀರ್‌ ಸಂಪರ್ಕದಲ್ಲಿದ್ದ. ತನ್ನ ಪರವಾಗಿ ದೆಹಲಿಯಿಂದ ಅಕ್ರಮ ಹಣವನ್ನು (ಪಾಕಿಸ್ತಾನದಿಂದ ಬಂದಿದ್ದು) ಪಡೆದುಕೊಳ್ಳುವಂತೆ ಅಸ್ಲಾಂ ವನಿಗೆ ಸೂಚಿಸಿದ್ದ ಶಬೀರ್‌, ಇದಕ್ಕಾಗಿ ಶಫಿ ಶಾಯರ್‌ನ ಪಾಕಿಸ್ತಾನದ ದೂರವಾಣಿ ಸಂಖ್ಯೆಯನ್ನು ಅಸ್ಲಾಂಗೆ ನೀಡಿದ್ದ ಎಂದೂ ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು