ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ ಅಕ್ರಮ ವರ್ಗಾವಣೆ: ಪಿಎಫ್‌ಐ ಮುಖ್ಯಸ್ಥರ ಮನೆ ಸೇರಿ ಹಲವೆಡೆ ಇಡಿ ದಾಳಿ

Last Updated 3 ಡಿಸೆಂಬರ್ 2020, 19:43 IST
ಅಕ್ಷರ ಗಾತ್ರ

ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇಡಿ) ಪಾಪುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಮುಖ್ಯಸ್ಥ ಒ.ಎಂ.ಅಬ್ದುಲ್‌ ಸಲಾಂ, ಪಿಎಫ್‌ಐನ ಕೇರಳ ರಾಜ್ಯಾಧ್ಯಕ್ಷ ನಾಸರುದ್ದೀನ್‌ ಎಲಾಮರೊಮ್‌ ಅವರ ನಿವಾಸ ಸೇರಿದಂತೆ ಒಂಬತ್ತು ರಾಜ್ಯಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದೆ.

‘ತಮಿಳುನಾಡು, ಕರ್ನಾಟಕ, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ಥಾನ, ನವದೆಹಲಿ ಹಾಗೂ ಕೇರಳದ ಮಲಪ್ಪುರಂ ಮತ್ತು ತಿರುವನಂತಪುರದಲ್ಲಿ ದಾಳಿ ನಡೆಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.

‘ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕಲೆಹಾಕುವ ಸಲುವಾಗಿ ಪಿಎಂಎಲ್‌ಎ ಕಾಯ್ದೆಯ ಅಡಿಯಲ್ಲಿ ಈ ಒಂಬತ್ತು ರಾಜ್ಯಗಳ 26 ಕಡೆ ದಾಳಿ ನಡೆಸಲಾಗಿದೆ. ಸಲಾಂ ಮತ್ತು ನಾಸರುದ್ದೀನ್‌ ಅವರ ನಿವಾಸಗಳಲ್ಲೂ ಶೋಧ ಕಾರ್ಯ ನಡೆದಿದೆ’ ಎಂದು ಹೇಳಲಾಗಿದೆ.

ಪೌರತ್ವ ತಿದ್ದುಪ‍ಡಿ ಕಾಯ್ದೆಯ (ಸಿಎಎ) ವಿರುದ್ಧದ ಹೋರಾಟಕ್ಕೆ ಪಿಎಫ್‌ಐ ಕುಮ್ಮಕ್ಕು ನೀಡಿದ್ದು, ಹಣಕಾಸಿನ ನೆರವು ಒದಗಿಸಿದೆ ಎಂಬ ಆರೋಪದಡಿ ಇಡಿ ತನಿಖೆ ನಡೆಸುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಡಿ, ಈ ಹಿಂದೆ ಸಲಾಂ ಅವರ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು.

‘ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ನವದೆಹಲಿಯಲ್ಲಿರೈತರು ಬೃಹತ್‌ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಜನರ ಗಮನವನ್ನುಬೇರೆಡೆಗೆ ಸೆಳೆಯುವ ಸಲುವಾಗಿ ಇಡಿ, ಪಿಎಫ್‌ಐ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿದೆ. ಇದಕ್ಕೆ ಕೇಂದ್ರ ಬಿಜೆಪಿ ಸರ್ಕಾರದ ಕುಮ್ಮಕ್ಕೂ ಇದೆ. ಮೋದಿ ಸರ್ಕಾರ ತನ್ನ ವೈಫಲ್ಯಗಳನ್ನು ಮರೆಮಾಚಲು ಸಾಂವಿಧಾನಿಕ ಸಂಸ್ಥೆಯೊಂದನ್ನು ದಾಳವಾಗಿ ಬಳಸಿಕೊಳ್ಳುತ್ತಿರುವುದಕ್ಕೆ ಇದು ತಾಜಾ ಉದಾಹರಣೆ’ ಎಂದು ಸಲಾಂ ದೂರಿದ್ದಾರೆ.

‘ಇಂತಹ ದಾಳಿಗಳಿಗೆ ನಾವು ಬಗ್ಗುವುದಿಲ್ಲ. ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ನಾವು ಗಟ್ಟಿ ಧ್ವನಿ ಎತ್ತುತ್ತೇವೆ’ ಎಂದು ಪಿಎಫ್‌ಐ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT