ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಪ್ರತಿಭಟನೆ | ಕಾಂಗ್ರೆಸ್‌ನ ರಾಜ್ಯ ನಾಯಕರು ವಶಕ್ಕೆ

Last Updated 14 ಜೂನ್ 2022, 20:00 IST
ಅಕ್ಷರ ಗಾತ್ರ

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಭೇಟಿ ಯಾಗಲು ಬಂದಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ. ಸುರೇಶ್‌, ಶಾಸಕರಾದ ಎಚ್‌.ಕೆ. ಪಾಟೀಲ, ದಿನೇಶ್‌ ಗುಂಡೂರಾವ್‌ ಅವರನ್ನು ದೆಹಲಿ ಪೊಲೀಸರು ಮಂಗಳವಾರ ವಶಕ್ಕೆ ಪಡೆದರು.

ಇ.ಡಿ. ವಿಚಾರಣೆಗೆ ಹಾಜರಾಗುವ ಮುನ್ನ ರಾಹುಲ್‌ ಗಾಂಧಿ ಅವರು ಅಕ್ಬರ್‌ ರಸ್ತೆಯಲ್ಲಿರುವ ಕಾಂಗ್ರೆಸ್‌ ಕಚೇರಿಗೆ ಬಂದರು. ಈ ವೇಳೆ, ರಾಜ್ಯ ಮುಖಂಡರು ರಾಹುಲ್ ಅವರನ್ನು ಭೇಟಿಯಾಗಲು ಉದ್ದೇಶಿಸಿದ್ದರು. ಅದಕ್ಕಾಗಿ ಕಾಂಗ್ರೆಸ್‌ ಕಚೇರಿಯತ್ತ ಸಾಗಿದರು. ಇದಕ್ಕೆ ದೆಹಲಿ ಪೊಲೀಸರು ಅವಕಾಶ ನೀಡಲಿಲ್ಲ. ‘ನಾವು ಪ್ರತಿಭಟನೆ ನಡೆಸುತ್ತಿಲ್ಲ. ಪಕ್ಷದ ಕಚೇರಿಗೆ ಹೋಗು ತ್ತಿದ್ದೇವೆ’ ಎಂದು ಡಿ.ಕೆ. ಸುರೇಶ್ ಸಮಜಾಯಿಷಿ ನೀಡಿದರು. ಪೊಲೀಸರು ಅದನ್ನು ಒಪ್ಪಲಿಲ್ಲ. ಇಂತಹ ಧೋರಣೆ ಸರಿಯಲ್ಲ ಎಂದು ಸುರೇಶ್‌ ಹೇಳಿದರು. ಆ ವೇಳೆ, ಪೊಲೀಸರು ಹಾಗೂ ಸುರೇಶ್‌ ನಡುವೆ ವಾಗ್ವಾದ ನಡೆಯಿತು.

ಪೊಲೀಸ್‌ ಅಧಿಕಾರಿಯೊಬ್ಬರು ಹಿಂದಿನಿಂದ ಬಂದು ಸುರೇಶ್ ಅವರನ್ನು ತಳ್ಳಿದರು. ಬಳಿಕ ಪೊಲೀಸರು ವಾಹನದಲ್ಲಿ ಮುಖಂಡರನ್ನು ನರೆಲಾ ಠಾಣೆಗೆ ಕರೆದೊಯ್ದರು. ರಾಹುಲ್‌ ಗಾಂಧಿ ಅವರ ವಿಚಾರಣೆ ಮುಗಿಯುವವರೆಗೂ ಮೂವರನ್ನು ಠಾಣೆಯಲ್ಲಿ ಕೂರಿಸಿಕೊಂಡರು. ಈ ವೇಳೆ, ಸುರೇಶ್‌ ಹಾಗೂ ದಿನೇಶ್ ಗುಂಡೂರಾವ್ ಅವರು ರಕ್ತದಾನ ಮಾಡಿದರು.

‘ನಮ್ಮ ರಾಷ್ಟ್ರೀಯ ನಾಯಕರನ್ನು ಭೇಟಿ ಮಾಡಿ ನೈತಿಕ ಬೆಂಬಲ ನೀಡಲು ಬಂದಿದ್ದೆವು. ನಾವು ತಪ್ಪು ಏನೂ ಮಾಡಿರಲಿಲ್ಲ. ಆದರೂ ಪೊಲೀಸರು ನಮ್ಮನ್ನು ವಶಕ್ಕೆ ಪಡೆದು ಇಡೀ ದಿನ ಠಾಣೆಯಲ್ಲಿ ಕೂರಿಸಿಕೊಂಡರು’ ಎಂದು ಎಚ್‌.ಕೆ.ಪಾಟೀಲ ದೂರಿದರು.

‘ಪೊಲೀಸರು ನಮ್ಮ ಮೇಲೆ ದೌರ್ಜನ್ಯ ನಡೆಸಿದರು. ಒಂದು ರೀತಿಯಲ್ಲಿ ಅಪಹರಣ ಮಾಡಿದರು. ಕೇಂದ್ರ ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸರು ಈ ಕೆಲಸ ಮಾಡಿದ್ದಾರೆ’ ಎಂದು ಸುರೇಶ್ ದೂರಿದರು.

‘ದೆಹಲಿ ಪೊಲೀಸರು ಜನಪ್ರತಿನಿಧಿಗಳಿಗೆ ಗೌರವ ಕೊಡದೆ ದೌರ್ಜನ್ಯ ನಡೆಸಿದ್ದಾರೆ. ಇದಕ್ಕೆ ಬಿಜೆಪಿ ಚಿತಾವಣೆಯೇ ಕಾರಣ. ಇದಕ್ಕೆಲ್ಲ ನಾವು ಬಗ್ಗುವುದಿಲ್ಲ’ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT