ನವದೆಹಲಿ (ಪಿಟಿಐ): ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಮಾಲೀಕತ್ವ ಇದೆ ಎನ್ನಲಾದ ‘ಸಾಕ್ಷಿ’ ಪತ್ರಿಕೆಯ ಪ್ರಸರಣ ಸಂಖ್ಯೆಯನ್ನು ಹೆಚ್ಚಿಸುವ ಸಲುವಾಗಿಯೇ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವೊಂದನ್ನು ಪ್ರಶ್ನಿಸಿ ‘ಈನಾಡು’ ಪತ್ರಿಕೆಯ ಪ್ರಕಾಶನ ಸಂಸ್ಥೆ ಉಶೋದಯ ಪಬ್ಲಿಕೇಷನ್, ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಈ ಸಂಬಂಧ ಆಂಧ್ರ ಪ್ರದೇಶ ಸರ್ಕಾರಕ್ಕೆ ನ್ಯಾಯಾಲಯವು ಬುಧವಾರ ನೋಟಿಸ್ ನೀಡಿದೆ.
‘ಸರ್ಕಾರದ ಆದೇಶದಿಂದಾಗಿ ಸಮಾನತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯಗಳಂಥ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದು ಉಶೋದಯ ಪಬ್ಲಿಕೇಷನ್ ಪರ ವಕೀಲ ಮುಕುಲ್ ರೋಹಟಗಿ ವಾದಿಸಿದರು.
‘ಸಾಕ್ಷಿ’ ಪತ್ರಿಕೆಯನ್ನು ಖರೀದಿಸಲು ಗ್ರಾಮ ಹಾಗೂ ವಾರ್ಡ್ ಹಂತದ ಕಾರ್ಯಕರ್ತರಿಗೆ ಸರ್ಕಾರಿ ನಿಧಿಯಿಂದ ₹200 ಭತ್ಯೆ ನೀಡುವ ಸಲುವಾಗಿ ಆಂಧ್ರ ಪ್ರದೇಶ ಸರ್ಕಾರವು ಆದೇಶ ಹೊರಡಿಸಿತ್ತು. ಈ ಆದೇಶಕ್ಕೆ ತಡೆ ನೀಡಬೇಕು ಎಂದು ಕೋರಿ ಉಶೋದಯ ಪಬ್ಲಿಕೇಷನ್ ಆಂಧ್ರ ಪ್ರದೇಶ ಹೈಕೋರ್ಟ್ ಅರ್ಜಿ ಸಲ್ಲಿಸಿತ್ತು. ಆದರೆ, ಈ ಆದೇಶಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತು. ನಂತರ, ಉಶೋದಯ ಪಬ್ಲಿಕೇಷನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
‘‘ಈನಾಡು’ ಪತ್ರಿಕೆಯು ಪೀತ ಪತ್ರಿಕೋದ್ಯಮವನ್ನು ಅನುಸರಿಸುತ್ತದೆ. ಆದ್ದರಿಂದ ಈ ಪತ್ರಿಕೆಯನ್ನು ಕೊಳ್ಳಬೇಡಿ ಎಂದು ರಾಜ್ಯ ಸರ್ಕಾರವೇ ಹೇಳಿದೆ’ ಎಂದು ಮುಖ್ಯಮಂತ್ರಿ ಜಗನ್ ಅವರ ಮಾತನ್ನು ಉಲ್ಲೇಖಿಸಿ ವಕೀಲ ರೋಹಟಗಿ ಅವರು ವಾದಿಸಿದರು.
ಅರ್ಜಿಯ ಸಂಬಂಧ ಪ್ರತಿಕ್ರಿಯೆ ನೀಡುವಂತೆ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಜೆ.ಬಿ. ಪಾರ್ದೀವಾಲಾ ಅವರಿದ್ದ ಪೀಠವು ಆಂಧ್ರ ಪ್ರದೇಶ ಸರ್ಕಾರಕ್ಕೆ ಹೇಳಿದೆ. ಜೊತೆಗೆ, ಅರ್ಜಿಯ ವಿಚಾರಣೆಯನ್ನು ಏ. 10ಕ್ಕೆ ನಿಗದಿ ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.