ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ವಿರುದ್ಧ ಚುನಾವಣಾ ಆಯೋಗದ ಪಕ್ಷಪಾತ ಧೋರಣೆ: ಶಿವಸೇನಾ ಆರೋಪ

ಬಿಜೆಪಿ ಅಲ್ಲದೇ, ಎಲ್ಲ ಪಕ್ಷಗಳ ಅಭಿಪ್ರಾಯ ಆಲಿಸಲು ಮನವಿ
Last Updated 14 ಏಪ್ರಿಲ್ 2021, 5:32 IST
ಅಕ್ಷರ ಗಾತ್ರ

ಮುಂಬೈ:‌‌ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ವಿಚಾರದಲ್ಲಿ ಚುನಾವಣಾ ಆಯೋಗವು ಪಕ್ಷಪಾತ ನೀತಿ ಅನುಸರಿಸುತ್ತಿದೆ ಎಂದು ಶಿವಸೇನಾ ಬುಧವಾರ ಆರೋಪಿಸಿದೆ.

ಇತ್ತೀಚೆಗೆ ಚುನಾವಣೆ ಪ್ರಚಾರದ ವೇಳೆ ಮಮತಾ ಬ್ಯಾನರ್ಜಿ ಅವರು ಮಾಡಿದ ಕೆಲವು ಟೀಕೆಗಳಿಗಾಗಿ, ಚುನಾವಣಾ ಆಯೋಗ 24 ಗಂಟೆಗಳ ಕಾಲ ಪ್ರಚಾರ ಮಾಡದಂತೆ ಅವರ ಮೇಲೆ ನಿರ್ಬಂಧ ಹೇರಿತ್ತು. ಚುನಾವಣಾ ಆಯೋಗದಂತಹ ಸಾಂವಿಧಾನಿಕ ಸಂಸ್ಥೆಗಳು, ರಾಜಕೀಯ ಲಾಭಕ್ಕಾಗಿ ಈ ರೀತಿ ಕೀಳಾಗಿ ವರ್ತಿಸಬಾರದು ಎಂದು ಸೇನಾ ತನ್ನ ಮುಖವಾಣಿ ‘ಸಾಮ್ನಾ‘ದ ಸಂಪಾದಕೀಯದಲ್ಲಿ ಹೇಳಿದೆ.

‘ಆಯೋಗವು ಮಮತಾ ಬ್ಯಾನರ್ಜಿ ವಿರುದ್ಧ ಪಕ್ಷಪಾತದಿಂದ ವರ್ತಿಸುತ್ತಿದೆ. ನಾವು ಆಯೋಗದ ಎದುರು ಕೈ ಮುಗಿದು ಕೇಳುತ್ತೇವೆ, ಚುನಾವಣಾ ಆಯೋಗ ಕೇವಲ ಬಿಜೆಪಿಯವರ ಮಾತನ್ನಷ್ಟೇ ಕೇಳಬಾರದು, ಎಲ್ಲ ಪಕ್ಷಗಳ ಅಭಿಪ್ರಾಯವನ್ನೂ ಆಲಿಸಬೇಕು. ಯಾವುದೇ ಕಾರಣಕ್ಕೂ ಈ ವಿಷಯದಲ್ಲಿ ಪಕ್ಷಪಾತ ಮಾಡಬಾರದು‘ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದ ವೇಳೆ ಪ್ರತಿಯೊಬ್ಬರೂ ಶಿಷ್ಟಾಚಾರವನ್ನು ಮರೆತಿದ್ದಾರೆ. ಆದರೆ, ಚುನಾವಣಾ ಆಯೋಗ ಬ್ಯಾನರ್ಜಿಯವರಿಗೆ ಮಾತ್ರ ಶಿಕ್ಷೆ ನೀಡಿದೆ ಎಂದು ಆರೋಪಿಸಿದೆ.

‘ಕಾನೂನಿನ ಮುಂದೆ ಪ್ರತಿಯೊಬ್ಬರೂ ಸಮಾನರು ಎಂಬುದು ಸುಳ್ಳು ಎಂದು ಚುನಾವಣಾ ಆಯೋಗ ಪಶ್ಚಿಮ ಬಂಗಾಳದಲ್ಲಿ ನಿರೂಪಿಸಿದೆ. ಪಶ್ಚಿಮ ಬಂಗಾಳದ ನೆಲ ಕ್ರಾಂತಿಕಾರಿಗಳು ಮತ್ತು ಬಂಡಾಯಗಾರರ ಭೂಮಿ ಎಂಬುದನ್ನೂ ಮರೆತಿದೆ‘ ಎಂದು ಸೇನಾ ಹೇಳಿದೆ.

ಪ್ರಸ್ತುತ ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣಾ ನಡೆಯುತ್ತಿದ್ದು, ನಾಲ್ಕು ಹಂತದ ಮತದಾನ ಈಗಾಗಲೇ ಪೂರ್ಣಗೊಂಡಿದೆ. ಈ ಚುನಾವಣೆಯಲ್ಲಿ ಶಿವಸೇನೆ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಗೆ ಬೆಂಬಲ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT