ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಅಭಿವೃದ್ಧಿಗೆ ಮಹಿಳಾ ಸಬಲೀಕರಣ ಅಗತ್ಯ: ಪ್ರಧಾನಿ ಮೋದಿ

Last Updated 18 ಜೂನ್ 2022, 13:35 IST
ಅಕ್ಷರ ಗಾತ್ರ

ವಡೋದರ: 21ನೇ ಶತಮಾನದ ಭಾರತದ ತ್ವರಿತ ಅಭಿವೃದ್ಧಿಗೆ ಮಹಿಳಾ ಸಬಲೀಕರಣ ಅಗತ್ಯ ಎಂದು ಪ್ರತಿಪಾದಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಮಹಿಳೆಯರ ಜೀವನವನ್ನು ಸುಲಭಗೊಳಿಸುವುದು ಮತ್ತು ಅವರ ಅಭಿವೃದ್ಧಿಗೆ ಅವಕಾಶಗಳನ್ನು ಒದಗಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದೆ ಎಂದು ಶನಿವಾರ ಹೇಳಿದ್ದಾರೆ.

ವಡೋದರಲ್ಲಿ ನಡೆದ ‘ಗುಜರಾತ್ ಗೌರವ್ ಅಭಿಯಾನ’ ರ‍್ಯಾಲಿಯಲ್ಲಿ ಗರ್ಭಿಣಿಯರಿಗೆ ಅಗತ್ಯ ಪೌಷ್ಟಿಕಾಂಶ ಒದಗಿಸುವ ಉದ್ದೇಶದ ಗುಜರಾತ್ ಸರ್ಕಾರದ ₹ 800 ಕೋಟಿ ವೆಚ್ಚದ ‘ಮುಖ್ಯಮಂತ್ರಿ ಮಾತೃಶಕ್ತಿ ಯೋಜನೆ’ಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಇಂದು ಭಾರತವು ಮಹಿಳೆಯರ ಅಗತ್ಯತೆ– ಆಕಾಂಕ್ಷೆಗಳನ್ನು ಗಮನದಲ್ಲಿಟ್ಟುಕೊಂಡು ಯೋಜನೆಗಳನ್ನು ರೂಪಿಸುತ್ತಿದೆ, ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಸಶಸ್ತ್ರ ಪಡೆಗಳಿಂದ ಹಿಡಿದು ಗಣಿಗಳವರೆಗೆ ಮಹಿಳೆಯರು ತಮ್ಮ ಇಷ್ಟದ ವೃತ್ತಿಗೆ ಸೇರಲು ನಮ್ಮ ಸರ್ಕಾರ ಎಲ್ಲಾ ಬಾಗಿಲುಗಳನ್ನು ತೆರೆದಿದೆ’ ಎಂದರು.

‘ಎರಡು ದಶಕಗಳ ಹಿಂದೆ ನಾನು ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗ ಅಪೌಷ್ಟಿಕತೆ ದೊಡ್ಡ ಸವಾಲಾಗಿತ್ತು. ತಾಯಿಯ ಅನಾರೋಗ್ಯವು ಆಕೆಯ ಮೇಲಷ್ಟೇ ಅಲ್ಲ ಮುಂದಿನ ಪೀಳಿಗೆಯ ಮೇಲೂ ಪರಿಣಾಮ ಬೀರುತ್ತದೆ. ಇದು ಮಗುವಿನ ಜೀವನವನ್ನೂ ನಿರ್ಧರಿಸುತ್ತದೆ. ಹಾಗಾಗಿ, ನಮ್ಮ ಸರ್ಕಾರ ಒಂದರ ಹಿಂದೆ ಒಂದರಂತೆ ಅನೇಕ ಕ್ರಮಗಳನ್ನು ಕೈಗೊಂಡು ಕಾರ್ಯಪ್ರವೃತ್ತವಾಗಿದೆ. ಈ ನಿಟ್ಟಿನಲ್ಲಿ ಗರ್ಭಿಣಿಯರ ಅಪೌಷ್ಟಿಕ ನಿವಾರಣೆಗೆ ‘ಮುಖ್ಯಮಂತ್ರಿ ಮಾತೃಶಕ್ತಿ ಯೋಜನೆ’ ಮತ್ತು ಬುಡಕಟ್ಟು ಮಹಿಳೆಯರ ಅಪೌಷ್ಟಿಕ ನಿವಾರಣೆಗೆ ‘ಪೋಷಣ್ ಸುಧಾ’ ಯೋಜನೆಯು ಪರಿಣಾಮಕಾರಿಯಾಗಿದೆ. ಈ ಯೋಜನೆಯಿಂದ ಸುಮಾರು 1.36 ಲಕ್ಷ ಬುಡಕಟ್ಟು ಮಹಿಳೆಯರು ಪ್ರಯೋಜನ ಪಡೆಯಲಿದ್ದಾರೆ’ ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ಪ್ರಧಾನಿ ಅವರು, ವಿಡಿಯೊ ಲಿಂಕ್ ಮೂಲಕ ₹ 16 ಸಾವಿರ ಕೋಟಿ ವೆಚ್ಚದ 18 ರೈಲ್ವೆ ಯೋಜನೆಗಳನ್ನು ಅನಾವರಣಗೊಳಿಸಿದರು. ಗುಜರಾತ್ ಕೇಂದ್ರೀಯ ವಿಶ್ವವಿದ್ಯಾಲಯದ ಕ್ಯಾಂಪಸ್ ಮತ್ತು ಭಾರತೀಯ ಗತಿ ಶಕ್ತಿ ವಿಶ್ವವಿದ್ಯಾನಿಲಯದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆಯನ್ನೂ ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT