ಬುಧವಾರ, ಜೂನ್ 29, 2022
24 °C
ತಮಿಳುನಾಡು ಸರ್ಕಾರಕ್ಕೆ ವಿರೋಧಪಕ್ಷಗಳಾದ ಎಐಎಡಿಎಂಕೆ, ಪಿಎಂಕೆ ಒತ್ತಾಯ

ಮೇಕೆದಾಟು: ಕರ್ನಾಟಕ ಅಣೆಕಟ್ಟು ನಿರ್ಮಿಸದಂತೆ ನೋಡಿಕೊಳ್ಳಿ-ಎಐಎಡಿಎಂಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ಕರ್ನಾಟಕ ಸರ್ಕಾರ ಮೇಕೆದಾಟು ಯೋಜನೆಗೆ ಬಜೆಟ್‌ನಲ್ಲಿ ₹1,000 ಕೋಟಿ ಹಂಚಿಕೆ ಮಾಡಿದ ಬೆನ್ನಲ್ಲೇ, ತಮಿಳುನಾಡಿನ ವಿರೋಧ ಪಕ್ಷಗಳು ಈ ವಿಷಯವನ್ನೇ ಮುಂದಿಟ್ಟುಕೊಂಡು ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲು ಆರಂಭಿಸಿವೆ.

‘ಕಾವೇರಿ ನದಿಗೆ ಕರ್ನಾಟಕ ಸರ್ಕಾರ ಅಣೆಕಟ್ಟು ನಿರ್ಮಿಸದಂತೆ ನೋಡಿಕೊಳ್ಳುವುದಾಗಿ ಖಾತ್ರಿಪಡಿಸಬೇಕು’ ಎಂದು ಡಿಎಂಕೆ ನೇತೃತ್ವದ ಸರ್ಕಾರವನ್ನು ವಿರೋಧ ಪಕ್ಷಗಳಾದ ಎಐಎಡಿಎಂಕೆ ಹಾಗೂ ಪಿಎಂಕೆ ಒತ್ತಾಯಿಸಿವೆ.

‘ಮೇಕದಾಟು ಯೋಜನೆಗೆ ಸಂಬಂಧಿಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಲು ಕೂಡಲೇ ಸರ್ವಪಕ್ಷ ಸಭೆ ಕರೆಯಬೇಕು’ ಎಂದು ಎಐಎಡಿಎಂಕೆ ಸಮನ್ವಯಕಾರ ಒ.ಪನ್ನೀರ್‌ಸೆಲ್ವಂ ಹಾಗೂ ಪಿಎಂಕೆ ಮುಖಂಡ ಅನ್ಬುಮಣಿ ರಾಮದಾಸ್ ಅವರು ಪ್ರತ್ಯೇಕವಾಗಿ ಬಿಡುಗಡೆ ಮಾಡಿರುವ ಪ್ರಕಟಣೆಗಳಲ್ಲಿ ಆಗ್ರಹಿಸಿದ್ದಾರೆ.

‘ಮೇಕೆದಾಟು ಯೋಜನೆ ವಿರೋಧಿಸಿ ನಡೆಸುವ ಹೋರಾಟಕ್ಕೆ ತಮ್ಮ ಪಕ್ಷಗಳು ರಾಜ್ಯ ಸರ್ಕಾರಕ್ಕೆ ಸಂಪೂರ್ಣ ಬೆಂಬಲ ನೀಡುತ್ತವೆ’ ಎಂದೂ ಅವರು ಭರವಸೆ ನೀಡಿದ್ದಾರೆ.

ವಿರೋಧ ಪಕ್ಷಗಳ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಜಲಸಂಪನ್ಮೂಲ ಸಚಿವ ದೊರೈ ಮುರುಗನ್, ‘ಅಗತ್ಯ ಕಂಡುಬಂದಲ್ಲಿ, ಈ ವಿಷಯಕ್ಕೆ ಸಂಬಂಧಿಸಿ ವಿಧಾನಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗುವುದು’ ಎಂದು ಹೇಳಿದ್ದಾರೆ.

‘ಮಾತುಕತೆ ಅಗತ್ಯವಿಲ್ಲ’: ‘ಮೇಕೆದಾಟು ಯೋಜನೆಯನ್ನು ನಿಲ್ಲಿಸಲೇಬೇಕು. ಈ ವಿಷಯವಾಗಿ ಯಾವುದೇ ಮಾತುಕತೆಯ ಅಗತ್ಯ ಇಲ್ಲ ಎಂಬ ನಿಲುವನ್ನೇ ತಮಿಳುನಾಡು ಸರ್ಕಾರ ಯಾವಾಗಲೂ ತಳೆಯುತ್ತಾ ಬಂದಿದೆ’ ಎಂದು ಪನ್ನೀರ್ ಸೆಲ್ವಂ ಹೇಳಿದ್ದಾರೆ.

‘ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಕಾರ್ಯಗತಗೊಳಿಸದಂತೆ ತಡೆಯಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತಮಿಳುನಾಡು ಸರ್ಕಾರ ಕೈಗೊಳ್ಳಬೇಕು’ ಎಂದು ರಾಮದಾಸ್‌ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು