ಶುಕ್ರವಾರ, ಜನವರಿ 27, 2023
17 °C
ದಾವೆ ಪ್ರಕ್ರಿಯೆ ಸರಳವಾಗಬೇಕು * ನ್ಯಾಯಾಲಯ ವ್ಯವಸ್ಥೆಯನ್ನು ಮರು ರೂಪಿಸಬೇಕು

ನ್ಯಾಯಾಲಯಗಳಲ್ಲಿ ತಂತ್ರಜ್ಞಾನ ಬಳಕೆ ಹೆಚ್ಚಿಸಬೇಕು: ಸಿಜೆಐ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ದಾವೆ ಪ್ರಕ್ರಿಯೆಗಳನ್ನು ಸರಳೀಕರಿಸುವುದರ ಜತೆಗೆ ಅವುಗಳನ್ನು ನಾಗರಿಕ ಕೇಂದ್ರಿತಗೊಳಿಸಬೇಕಿದೆ. ಇದಕ್ಕಾಗಿ ನ್ಯಾಯಾಂಗದಲ್ಲಿ ಸಾಂಸ್ಥಿಕ ಸುಧಾರಣೆಗಳ ಜತೆಗೆ ತಂತ್ರಜ್ಞಾನದ ಬಳಕೆಯನ್ನು ಹೆಚ್ಚಿಸಬೇಕಿದೆ’ ಎಂದು ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಶನಿವಾರ ಅಭಿಪ್ರಾಯಪಟ್ಟರು.

‘ಜನರು ನ್ಯಾಯಕ್ಕಾಗಿ ನ್ಯಾಯಾಲಯಗಳಿಗೆ ಎಡತಾಗುವುದರ ಬದಲಿಗೆ, ನ್ಯಾಯವು ನಾಗರಿಕರನ್ನು ತಲುಪುವಂತಾಗಬೇಕು. ಈ ನಿಟ್ಟಿನಲ್ಲಿ ನ್ಯಾಯಾಲಯ ವ್ಯವಸ್ಥೆಯನ್ನು ಮರು ರೂಪಿಸಬೇಕಾದ ಅಗತ್ಯವಿದೆ’ ಎಂದು ಅವರು ಪ್ರತಿಪಾದಿಸಿದರು. 

ಸುಪ್ರೀಂಕೋರ್ಟ್‌ನಲ್ಲಿ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಸಿಜೆಐ, ‘ದೇಶದಾದ್ಯಂತ ಇರುವ ನ್ಯಾಯಾಧೀಶರು ನ್ಯಾಯ, ಸಮಾನತೆ ಮತ್ತು ಸ್ವಾತಂತ್ರ್ಯ ಪಡೆಯುವ ಸಾಂವಿಧಾನಿಕ ದೃಷ್ಟಿಕೋನವನ್ನು ಪ್ರತಿಬಂಬಿಸಬೇಕು’ ಎಂದು ಸೂಚಿಸಿದರು.

‘ನಿರ್ಲಕ್ಷ್ಯಕ್ಕೆ ಒಳಗಾಗಿರುವ ಸಮುದಾಯಗಳು ಮತ್ತು ಮಹಿಳೆಯ ಪ್ರಾತಿನಿಧ್ಯವನ್ನು ವಕೀಲ ವೃತ್ತಿ ಮತ್ತು ನ್ಯಾಯಾಂಗದಲ್ಲಿ ಹೆಚ್ಚಿಸಬೇಕಾದ ಅಗತ್ಯವಿದೆ’ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿದ ವರ್ಚುವಲ್‌ ‘ಜಸ್ಟೀಸ್‌ ಕ್ಲಾಕ್‌’, ‘ಜಸ್ಟೀಸ್‌ ಮೊಬೈಲ್‌ ಅಪ್ಲಿಕೇಷನ್‌ 2.0’, ‘ಡಿಜಿಟಲ್‌ ಕೋರ್ಟ್‌’ ಮತ್ತು ಜಿಲ್ಲಾ ನ್ಯಾಯಾಲಯಗಳ ‘ಎಸ್‌3ವಾಸ್‌ ವೆಬ್‌ಸೈಟ್‌ಗಳ’ ಕುರಿತು ಸಿಜೆಐ ಮಾತನಾಡಿದರು.

ಕೋವಿಡ್‌ ಸಾಂಕ್ರಾಮಿಕದ ಸಂದರ್ಭದಲ್ಲಿ ಅಳವಡಿಸಿಕೊಂಡ ತಂತ್ರಜ್ಞಾನಗಳನ್ನು ಹಾಳುಗೆಡವಲು ಬಿಡಬಾರದು. ಅವುಗಳನ್ನು ಒಳಗೊಂಡಂತೆ ಮೂಲ ಸೌಕರ್ಯವನ್ನು ಇನ್ನಷ್ಟು ಮೇಲ್ದರ್ಜೆಗೇರಿಸಿ ಪೂರಕವಾಗಿ ಬಳಸಿಕೊಳ್ಳಬೇಕು ಎಂದು ಹೈಕೋರ್ಟ್‌ ನ್ಯಾಯಮೂರ್ತಿಗಳಿಗೆ ಸಿಜೆಐ ಸೂಚಿಸಿದರು.

ಪ್ರಸ್ತುತ ಸುಪ್ರೀಂಕೋರ್ಟ್‌ ಹೈಬ್ರಿಡ್‌ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ದೇಶದ ವಿವಿಧ ಭಾಗಗಳ ವಕೀಲರು ಮತ್ತು ಕಕ್ಷಿದಾರರಿಗೆ ವೈಯಕ್ತಿಕವಾಗಿ ಹಾಜರಾಗಲು ಅವಕಾಶ ದೊರೆಯುತ್ತಿದೆ ಎಂದು ಸಿಜೆಐ ತಿಳಿಸಿದರು.

‘ವರ್ಚುವಲ್ ಜಸ್ಟಿಸ್ ಕ್ಲಾಕ್‌’ ಕುರಿತು ಮಾತನಾಡಿದ ಸಿಜೆಐ, ಇದು ರಾಷ್ಟ್ರೀಯ ನ್ಯಾಯಾಂಗ ಡೇಟಾ ಗ್ರಿಡ್ ಮೂಲಕ ಲಭ್ಯವಿರುವ ಮಾಹಿತಿಯನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ವೇದಿಕೆಯಾಗಿದೆ ಎಂದರು.

‘ಜಸ್ಟಿಸ್ ಮೊಬೈಲ್ ಅಪ್ಲಿಕೇಷನ್ 2.0’ ಅನ್ನು ಜಿಲ್ಲಾ ನ್ಯಾಯಾಲಯಗಳ ನ್ಯಾಯಾಧೀಶರಿಗಾಗಿ ಅಭಿವೃದ್ಧಿಪಡಿಸಲಾಗಿದೆ. ಇದು ನ್ಯಾಯಾಲಯಗಳಲ್ಲಿನ ಬಾಕಿ ಇರುವ ಮತ್ತು ವಿಲೇವಾರಿಯಾದ ಪ್ರಕರಣಗಳ ಕುರಿತು ನ್ಯಾಯಾಂಗದ ಅಧಿಕಾರಿಗಳಿಗೆ ಮಾಹಿತಿ ಒದಗಿಸುತ್ತದೆ ಎಂದು ಅವರು ತಿಳಿಸಿದರು.

ನ್ಯಾಯಾಲಯಗಳನ್ನು ಕಾಗದ ರಹಿತಗೊಳಿಸುವ ಉದ್ದೇಶವನ್ನು ‘ಡಿಜಿಟಲ್‌ ಕೋರ್ಟ್‌’ ಹೊಂದಿದೆ ಎಂದು ಅವರು ಹೇಳಿದರು.

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು