ಭಾನುವಾರ, ಜನವರಿ 24, 2021
17 °C

ಜೈಲಿಗೆ ಹಾಕಿದರೂ, ಅಲ್ಲಿಂದಲೇ ಟಿಎಂಸಿ ಪಕ್ಷವನ್ನು ಗೆಲ್ಲಿಸುತ್ತೇನೆ: ಮಮತಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಬಂಕುರ (ಪಶ್ಚಿಮ ಬಂಗಾಳ): ‘ಬಿಜೆಪಿಗಾಗಲಿ ಇನ್ನಾವುದೇ ಸಂಸ್ಥೆಗಳಿಗಾಗಲಿ ನಾನು ಅಂಜುವುದಿಲ್ಲ. ಅವರಿಗೆ (ಬಿಜೆಪಿ) ತಾಕತ್ತಿದ್ದರೆ ನನ್ನನ್ನು ಬಂಧಿಸಿ, ಕಂಬಿಗಳ ಹಿಂದೆ ಕೂರಿಸಲಿ. ಜೈಲಿನಿಂದಲೇ ಚುನಾವಣೆ ಎದುರಿಸುತ್ತೇನೆ. ಟಿಎಂಸಿ ಪಕ್ಷ ಗೆಲ್ಲುವುದು ಖಚಿತ' ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸವಾಲು ಹಾಕಿದರು.

‘ಕೋವಿಡ್‌ 19‘ ನಂತರದ ಮೊದಲ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ತಮ್ಮ ಮಾತಿನ ಉದ್ದಕ್ಕೂ ಬಿಜೆಪಿ ವಿರುದ್ಧ ಹಾಗೂ ಪಕ್ಷಾಂತರ ಮಾಡಲು ಸಿದ್ಧವಾಗಿರುವ ತಮ್ಮ ಪಕ್ಷದ ನಾಯಕರ ವಿರುದ್ಧ ಪರೋಕ್ಷವಾಗಿ ಹರಿ ಹಾಯ್ದರು.

ಬಿಜೆಪಿಯನ್ನು ‘ಸುಳ್ಳಿನ ಕಸ' ಮತ್ತು ‘ರಾಷ್ಟ್ರಕ್ಕೆ ಅತಿ ದೊಡ್ಡ ಶಾಪ‘ ಎಂದು ಜರಿದ ಮಮತಾ, ‘ನನ್ನನ್ನು ಬಂಧಿಸಿದರೂ ಚಿಂತೆಯಿಲ್ಲ, ಜೈಲಿನಿಂದಲೇ ಮುಂದಿನ ಚುನಾವಣೆಯನ್ನು ಎದುರಿಸಿ, ಟಿಎಂಸಿ ಪಕ್ಷವನ್ನು ಗೆಲ್ಲಿಸುತ್ತೇನೆ‘ ಎಂದರು.

ಟಿಎಂಸಿ ಶಾಸಕರಿಗೆ ಲಂಚ ನೀಡಲು ಪ್ರಯತ್ನಿಸುವ ಮೂಲಕ ಬಿಜೆಪಿ ಜನಪ್ರತಿನಿಧಿಗಳನ್ನು ಬೇಟೆಯಾಡಲು ಹೊರಟಿದೆ ಎಂದು ಆರೋಪಿಸಿದ ಮಮತಾ, ‘ಈ ಬಾರಿ ಕೇಸರಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬಹುದೆಂಬ ಭ್ರಮೆಯಿಂದ ಅನೇಕರು ಬೇಲಿಯ ಮೇಲೆ ಕುಳಿತವರಂತೆ ವರ್ತಿಸುತ್ತಿದ್ದಾರೆ‘ ಎಂದು ಯಾರನ್ನೂ ಹೆಸರಿಸದೇ ಆಕ್ರೋಶ ವ್ಯಕ್ತಪಡಿಸಿದರು.

'ಬಿಜೆಪಿ ಒಂದು ರಾಜಕೀಯ ಪಕ್ಷವಲ್ಲ, ಅದು ಸುಳ್ಳುಗಳ ಕಸ. ಚುನಾವಣೆ ಬಂದಾಗಲೆಲ್ಲ, ‘ಸ್ಟಿಂಗ್ ಆಪರೇಷನ್‌‘ ಮತ್ತು ಹಗರಣಗಳ ವಿಷಯವನ್ನು ಮುಂದಿಟ್ಟುಕೊಂಡು ಟಿಎಂಸಿ ಪಕ್ಷದ ನಾಯಕರನ್ನು ಬೆದರಿಸಲು ಪ್ರಯತ್ನಿಸುತ್ತಾರೆ‘ ಎಂದು ದೂರಿದರು.

ಇತ್ತೀಚೆಗಷ್ಟೇ ಮುಗಿದ ಬಿಹಾರ ಚುನಾವಣೆಯನ್ನು ಉಲ್ಲೇಖಿಸಿದ ಬ್ಯಾನರ್ಜಿ, ‘ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಅವರನ್ನು ಜೈಲಿಗೆ ಹಾಕಿಸಿದರೂ, ಆ ಪಕ್ಷ ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಆ ಚುನಾವಣೆಯಲ್ಲಿ ಬಿಜೆಪಿ ಗೆದ್ದಿರುವುದು ಮೋಸದಿಂದಲೇ ಹೊರತು, ಜನ ಮನ್ನಣೆಯಿಂದಲ್ಲ‘ ಎಂದು ಹೇಳಿದರು.

294 ಸದಸ್ಯರನ್ನು ಹೊಂದಿರುವ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು