ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿ ಜಿಲ್ಲೆಗೂ ಬೇಕು ವಾಯುಮಾಪನ ಕೇಂದ್ರ

ರಾಷ್ಟ್ರೀಯ ಹಸಿರು ಪೀಠದ ಆದೇಶ
Last Updated 3 ಡಿಸೆಂಬರ್ 2020, 19:39 IST
ಅಕ್ಷರ ಗಾತ್ರ

ನವದೆಹಲಿ: ಗಾಳಿಯ ಗುಣಮಟ್ಟದ ಮೇಲೆ ನಿಗಾ ಇರಿಸುವ ಕೇಂದ್ರಗಳು ಪ್ರತಿ ಜಿಲ್ಲೆಯಲ್ಲಿ ಕನಿಷ್ಠ ಒಂದಾದರೂ ಇರಬೇಕು ಎಂದು ರಾಷ್ಟ್ರೀಯ ಹಸಿರು ಪೀಠವು (ಎನ್‌ಜಿಟಿ) ಆದೇಶಿಸಿದೆ. ಗಾಳಿಯ ಗುಣಮಟ್ಟದ ಮೇಲೆ ನಿಗಾ ಇರಿಸುವ ಇಂತಹ ಕೇಂದ್ರಗಳ ಸ್ಥಾಪನೆಗೆ ಮೂರು ತಿಂಗಳ ಗಡುವನ್ನು ನೀಡಲಾಗಿದೆ.

ನ್ಯಾಯಮೂರ್ತಿ ಆದರ್ಶ ಕುಮಾರ್‌ ಗೋಯಲ್‌ ಅವರ ನೇತೃತ್ವದ ಎನ್‌ಜಿಟಿಯ ಪ್ರಧಾನ ಪೀಠವು ಈ ಆದೇಶ ನೀಡಿದೆ.

‘ವಾಯು ಗುಣಮಟ್ಟ ಪರಿಶೀಲನೆಯ ವ್ಯವಸ್ಥೆ ಇಲ್ಲದಿರುವ ಜಿಲ್ಲೆಗಳಲ್ಲಿ, ಕನಿಷ್ಠಪಕ್ಷ ಮನುಷ್ಯರು ನಿರ್ವಹಿಸುವ (ಸ್ವಯಂಚಾಲಿತ ಅಲ್ಲದ) ನಿಗಾ ವ್ಯವಸ್ಥೆಯನ್ನಾದರೂ ಸ್ಥಾಪಿಸಬೇಕು. ಮೂರು ತಿಂಗಳೊಳಗೆ ಇದನ್ನು ಆರಂಭಿಸುವುದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹೊಣೆ. ವಾಯು ಗುಣಮಟ್ಟದ ವಿವರಗಳನ್ನು ಜಿಲ್ಲಾಡಳಿತದ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು. ವಾಯು ಗುಣಮಟ್ಟ ಸೂಚ್ಯಂಕ, ಮಾಲಿನ್ಯಕಾರಕ ಕಣ (ಪಿ.ಎಂ) 2.5 ಮತ್ತುಪಿ.ಎಂ 10ರ ಕುರಿತ ಮಾಹಿತಿ ಇದರಲ್ಲಿ ಇರಬೇಕು. ಇವುಗಳನ್ನು ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪ್ರದರ್ಶಿಸಬೇಕು’ ಎಂದು ಆದೇಶದಲ್ಲಿ ಹೇಳಲಾಗಿದೆ.

ಮಾಲಿನ್ಯ ಹೆಚ್ಚಳ ಮತ್ತು ಕೋವಿಡ್‌–19 ಪ್ರಕರಣಗಳ ಏರಿಕೆಯ ಕಾರಣಕ್ಕೆ ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಪಟಾಕಿ ಸಿಡಿಸುವುದನ್ನು ನಿಷೇಧಿಸಬೇಕು ಎಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಲಾಗಿದೆ.

‘ದೇಶದಲ್ಲಿ 740 ಜಿಲ್ಲೆಗಳಿವೆ. ನಾಲ್ಕು ಸಾವಿರಕ್ಕೂ ಹೆಚ್ಚು ನಗರಗಳಿವೆ. ಪ್ರತಿ ಜಿಲ್ಲೆಯ ಕೇಂದ್ರದಲ್ಲಿಯೂ ವಾಯು ಗುಣಮಟ್ಟ ಅಳೆಯುವ ಕನಿಷ್ಠ ಒಂದು ಕೇಂದ್ರ ಇರುವುದು ಅತ್ಯಗತ್ಯ’ ಎಂದು ಆದೇಶವು ಹೇಳಿದೆ. ಮಾಲಿನ್ಯದಿಂದ ತೊಂದರೆಗೆ ಒಳಗಾದ ವ್ಯಕ್ತಿಯು ಪರಿಹಾರಕ್ಕಾಗಿ ಜಿಲ್ಲಾಧಿಕಾರಿಗೆ ಅರ್ಜಿ ಕೊಡಬಹುದು. ತಮಗೆ ಆಗಿರುವ ಹಾನಿಗೆ ಸಾಕ್ಷ್ಯವನ್ನು ಒದಗಿಸಬೇಕು ಮತ್ತು ಅದಕ್ಕೆ ಕಾರಣರಾದವರು ಯಾರು ಎಂಬುದನ್ನು ತಿಳಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಈ ಬಾರಿಯ ದೀಪಾವಳಿ ಸಂದರ್ಭದಲ್ಲಿ ವಾತಾವರಣದಲ್ಲಿ ಮಾಲಿನ್ಯಕಾರಕಗಳ ಪ್ರಮಾಣವು ಹೆಚ್ಚಾಗಿತ್ತು ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳೀ ಸಲ್ಲಿಸಿದ್ದ ವರದಿಯನ್ನು ಪೀಠವು ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT