ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಲ್ಡೋಜರ್‌ ಆಡಳಿತ: ನಿವೃತ್ತ ನ್ಯಾಯಮೂರ್ತಿಗಳು, ಹಿರಿಯ ವಕೀಲರಿಂದ ಸಿಜೆಐಗೆ ಪತ್ರ

ನಿವೃತ್ತ ನ್ಯಾಯಮೂರ್ತಿಗಳು, ಹಿರಿಯ ವಕೀಲರಿಂದ ಸಿಜೆಐಗೆ ಪತ್ರ * ಇದು, ಪ್ರಜಾಪ್ರಭುತ್ವದ ಅಣಕ ಎಂದೂ ವ್ಯಾಖ್ಯಾನ
Last Updated 14 ಜೂನ್ 2022, 14:16 IST
ಅಕ್ಷರ ಗಾತ್ರ

ನವದೆಹಲಿ: ‘ಬುಲ್ಡೋಜರ್‌ ಬಳಸಿ ಮನೆಗಳನ್ನು ನೆಲಸಮ ಮಾಡಿರುವ ಮತ್ತು ಮೂಲಭೂತ ಹಕ್ಕುಗಳನ್ನು ‘ನಿರ್ದಯವಾಗಿ ಹತ್ತಿಕ್ಕುವ’ ಘಟನೆಗಳ ಕುರಿತಂತೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಕ್ರಮ ತೆಗೆದುಕೊಳ್ಳಬೇಕು’ ಎಂದು ಕೋರಿ ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅವರಿಗೆ ಪತ್ರ ಬರೆಯಲಾಗಿದೆ.

ಉತ್ತರಪ್ರದೇಶ ಸರ್ಕಾರ ಮತ್ತು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಿಜೆಐಗೆ ಬರೆದಿರುವ ಪತ್ರದಲ್ಲಿ ಸುಪ್ರೀಂ ಕೋರ್ಟ್ ಹಾಗೂ ವಿವಿಧ ಹೈಕೋರ್ಟ್‌ಗಳ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಹಿರಿಯ ವಕೀಲರುಗಳು ಮನವಿ ಮಾಡಿದ್ದಾರೆ.

ಇಂತಹ ಕ್ಲಿಷ್ಟಕರ ಸಂದರ್ಭಗಳಲ್ಲಿ ನ್ಯಾಯಾಂಗವನ್ನು ಸತ್ವಪರೀಕ್ಷೆಗೆ ಒಡ್ಡಿರುವ ಹಲವು ನಿದರ್ಶನಗಳಿವೆ. ಈ ಸಂದರ್ಭಗಳಲ್ಲಿ ಸವಾಲು ಎದುರಿಸಿ, ಜನರ ಹಕ್ಕುಗಳನ್ನು ರಕ್ಷಿಸುವಲ್ಲಿ ನ್ಯಾಯಾಂಗವೂ ಯಶಸ್ವಿಯಾಗಿದೆ. ಪೆಗಾಸಸ್‌ ಪ್ರಕರಣ, ವಲಸೆ ಕಾರ್ಮಿಕರ ಸಂಕಷ್ಟ ಪ್ರಕರಣಗಳಲ್ಲಿ ಹೀಗೆ ಸುಪ್ರೀಂಕೋರ್ಟ್ ಸ್ವಯಂಪ್ರೇರಿತವಾಗಿ ಕ್ರಮ ತೆಗೆದುಕೊಂಡಿತ್ತು ಎಂದು ಪತ್ರದಲ್ಲಿ ಒತ್ತಿ ಹೇಳಲಾಗಿದೆ.

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಬಿ.ಸುದರ್ಶನ ರೆಡ್ಡಿ, ವಿ.ಗೋಪಾಲ ಗೌಡ, ಎ.ಕೆ.ಗಂಗೂಲಿ, ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ.ಶಾ, ಮದ್ರಾಸ್‌ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಚಂದ್ರು, ಕರ್ನಾಟಕ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಹಮ್ಮದ್‌ ಅನ್ವರ್, ಹಿರಿಯ ವಕೀಲರಾದ ಶಾಂತಿ ಭೂಷಣ್, ಇಂದಿರಾ ಜೈಸಿಂಗ್, ಸಿಯು ಸಿಂಗ್, ಶ್ರೀರಾಂ ಪಂಚು, ಪ್ರಶಾಂತ್ ಭೂಷಣ್‌ ಮತ್ತು ಆನಂದ್ ಗ್ರೋವರ್ ಪತ್ರಕ್ಕೆ ಸಹಿ ಹಾಕಿದ್ದಾರೆ.

‘ಆಡಳಿತ ವ್ಯವಸ್ಥೆ ಹೀಗೆ ಕ್ರೂರವಾಗಿ ನಿಯಮ ಹೇರುವುದು ಒಪ್ಪಿತವಲ್ಲ. ಇದು ಜನರ ಹಕ್ಕುಗಳು, ನೆಲದ ಕಾನೂನುಗಳ ಉಲ್ಲಂಘನೆಯೂ ಆಗಲಿದೆ. ಒಟ್ಟಾರೆ, ಸಂವಿಧಾನ ಮತ್ತು ಪ್ರಜೆಗಳ ಮೂಲಭೂತ ಹಕ್ಕುಗಳನ್ನೇ ಅಣಕಿಸುವಂತಿವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ವಕ್ತಾರರೊಬ್ಬರ ‘ಆಕ್ಷೇಪಾರ್ಹ’ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ಪೊಲೀಸರು ಕೈಗೊಂಡಿರುವ ಕಠಿಣ ಕ್ರಮಗಳ ಬಗ್ಗೆಯೂ ಗಮನಹರಿಸಬೇಕು. ಸುಪ್ರೀಂ ಕೋರ್ಟ್‌ ಈ ಕುರಿತಂತೆ ತುರ್ತಾಗಿ ಕ್ರಮ ಕೈಗೊಳ್ಳಬೇಕು ಎಂದೂ ಮನವಿ ಮಾಡಿದ್ದಾರೆ.

ಪ್ರವಾದಿ ಮಹಮ್ಮದ್‌ ಅವರನ್ನು ಕುರಿತು ಬಿಜೆಪಿ ವಕ್ತಾರರು ನೀಡಿರುವ ಕೆಲ ಹೇಳಿಕೆಯನ್ನು ವಿರೋಧಿಸಿ ದೇಶದ ವಿವಿಧೆಡೆ ಮುಖ್ಯವಾಗಿ ಉತ್ತರಪ್ರದೇಶದಲ್ಲಿ ತೀವ್ರ ರೀತಿಯಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಈ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ಶಾಂತಿಯುತವಾಗಿ ಪ್ರತಿಭಟಿಸುತ್ತಿರುವವರಿಗೆ ನೋವು ಹೇಳಿಕೊಳ್ಳಲು ಅವಕಾಶ ನೀಡುವ ಬದಲು ಉತ್ತರ ಪ್ರದೇಶ ಸರ್ಕಾರ ಅವರ ವಿರುದ್ಧ ಕಠಿಣ ಕ್ರಮಜರುಗಿಸಲು ಅನುಮತಿ ನೀಡಿರುವಂತಿದೆ. ಯಾರೊಬ್ಬರೂ ಅಹಿತಕರ ಕೃತ್ಯ ನಡೆಸದಂತೆ ಹಾಗೂ ಕಾನೂನು ಉಲ್ಲಂಘಿಸದಂತೆ ಎಚ್ಚರಿಸುವಂತೆ ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲು ಸಿ.ಎಂ ಸೂಚಿಸಿದಂತಿದೆ’ ಎಂದಿದ್ದಾರೆ.

ಅಲ್ಲದೆ, ಸದ್ಯ ಪ್ರತಿಭಟನೆಯಲ್ಲಿ ಭಾಗವಹಿಸುವ ತಪ್ಪಿತಸ್ಥರ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ 1980 ಮತ್ತು ಉತ್ತರ ಪ್ರದೇಶ ಗೂಂಡಾಗಳು ಮತ್ತು ಸಮಾಜ ವಿರೋಧಿ ಶಕ್ತಿಗಳ (ನಿಯಂತ್ರಣ) ಕಾಯ್ದೆ 1986ರ ಅನ್ವಯ ಪ್ರಕರಣವನ್ನು ದಾಖಲಿಸಲು ಸೂಚನೆ ನೀಡಿರುವಂತಿದೆ ಎಂದು ವಿಶ್ರಾಂತ ನ್ಯಾಯಮೂರ್ತಿಗಳು ಮತ್ತು ಹಿರಿಯ ವಕೀಲರು ಅಭಿಪ್ರಾಯಪಟ್ಟಿದ್ದಾರೆ.

‘ಅದರಂತೆ, ಉತ್ತರ ಪ್ರದೇಶದ ಪೊಲೀಸರು 300ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ. ಯುವಕನಿಗೆ ಪೊಲೀಸರು ಲಾಠಿಯಿಂದ ಥಳಿಸುತ್ತಿರುವ ವಿಡಿಯೊಗಳಿವೆ. ನೋಟಿಸ್ ನೀಡದೆಯೇ ಪ್ರತಿಭಟನಕಾರರ ಮನೆಗಳನ್ನು ಏಕಾಏಕಿ ನೆಲಸಮ ಮಾಡಲಾಗುತ್ತಿದೆ. ಮುಸ್ಲಿಂ ಪ್ರತಿಭಟನಕಾರರನ್ನು ಅಟ್ಟಾಡಿಸಿಕೊಂಡುಪೊಲೀಸರು ಹೊಡೆಯುತ್ತಿರುವ ವಿಡಿಯೊಗಳೂ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಈ ಬೆಳವಣಿಗೆಗಳು ಒಟ್ಟಾಗಿ ದೇಶದ ಆತ್ಮಸಾಕ್ಷಿಯನ್ನೇ ಕಲಕುವಂತಿವೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT