ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಬಕಾರಿ ನೀತಿ ಹಗರಣ: ತಿಹಾರ್‌ ಜೈಲಿನಲ್ಲಿ ಸಿಸೋಡಿಯಾ ವಿಚಾರಣೆ

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಹಣ ಅಕ್ರಮ ವರ್ಗಾವಣೆ ಆರೋಪ: ತನಿಖೆ ನಡೆಸುತ್ತಿರುವ ಇ.ಡಿ
Last Updated 7 ಮಾರ್ಚ್ 2023, 19:06 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ‘ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೊಳಗಾಗಿರುವ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ಮಂಗಳವಾರ ತಿಹಾರ್‌ ಜೈಲಿನಲ್ಲಿ ವಿಚಾರಣೆಗೊಳಪಡಿಸಿದೆ. ಹಣ ಅಕ್ರಮ ವರ್ಗಾವಣೆ ಸಂಬಂಧ ಅವರ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ’ ಎಂದು ಅಧಿಕೃತ ಮೂಲಗಳು ತಿಳಿಸಿವೆ.

‘ಪ್ರಕರಣ ಸಂಬಂಧ ಅಧಿಕಾರಿಗಳು ಹೈದರಾಬಾದ್‌ ಮೂಲದ ಉದ್ಯಮಿ ಅರುಣ್‌ ರಾಮಚಂದ್ರ ಪಿಳ್ಳೈ ಎಂಬುವರನ್ನು ಸೋಮವಾರ ಸಂಜೆ ಬಂಧಿಸಿದ್ದಾರೆ’ ಎಂದೂ ಮೂಲಗಳು ಮಾಹಿತಿ ನೀಡಿವೆ.

‘ತಿಹಾರ್‌ ಜೈಲಿಗೆ ಭೇಟಿ ನೀಡಿದ್ದ ತನಿಖಾಧಿಕಾರಿಗಳು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಸಿಸೋಡಿಯಾ ಅವರ ಹೇಳಿಕೆ ದಾಖಲು ಮಾಡಿಕೊಂಡಿದ್ದಾರೆ. ವಿಚಾರಣೆಗಾಗಿ ಅವರು ನ್ಯಾಯಾಲಯದಿಂದ ಅನುಮತಿ ಪಡೆದಿದ್ದರು’ ಎಂದು ಹೇಳಿವೆ.

‘ಅಬಕಾರಿ ನೀತಿ ಹಗರಣದಲ್ಲಿ ಸಿಸೋಡಿಯಾ ಸೇರಿದಂತೆ 36 ಆರೋಪಿಗಳು ಸಾವಿರಾರು ಕೋಟಿ ಮೊತ್ತದ ‘ಕಿಕ್‌ ಬ್ಯಾಗ್‌’ಗಳನ್ನು ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶಪಡಿಸುವುದಕ್ಕಾಗಿ 170 ಮೊಬೈಲ್‌ಗಳನ್ನು ಒಡೆದುಹಾಕಿರುವ, ಬಳಸಿರುವ ಅಥವಾ ಬದಲಾಯಿಸಿರುವುದು ತನಿಖೆಯಿಂದ ದೃಢಪಟ್ಟಿದೆ’ ಎಂದು ಇ.ಡಿ, ದೋಷಾರೋಪ ಪಟ್ಟಿಯ ಮೂಲಕ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಈ ವಿಚಾರವಾಗಿಯೇ ಸಿಸೋಡಿಯಾ ಅವರ ಹೇಳಿಕೆ ದಾಖಲು ಮಾಡಿಕೊಂಡಿದೆ’ ಎಂದು ಮಾಹಿತಿ ನೀಡಿವೆ.

ಈ ವರ್ಷದ ಆರಂಭದಲ್ಲಿ ನ್ಯಾಯಾಲಯಕ್ಕೆ ಎರಡನೇ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಿದ್ದ ಇ.ಡಿ, ಅದರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೆಸರನ್ನೂ ಉಲ್ಲೇಖಿಸಿತ್ತು.

ಉದ್ಯಮಿ ಬಂಧನ: ‘ಸೋಮವಾರ ಸುದೀರ್ಘ ಅವಧಿವರೆಗೂ ಅರುಣ್‌ ಅವರನ್ನು ವಿಚಾರಣೆಗೆ ಒಳಪಡಿಸಿದ ಅಧಿಕಾರಿಗಳು ಬಳಿಕ ಪಿಎಂಎಲ್‌ಎ ಕಾಯ್ದೆಯ ಕ್ರಿಮಿನಲ್‌ ಕಲಂ ಗಳ ಅಡಿಯಲ್ಲಿ ಅವರನ್ನು ಬಂಧಿಸಿದ್ದಾರೆ. ಅವರನ್ನು ಸ್ಥಳೀಯ ನ್ಯಾಯಾಲಯದ ಎದುರು ಹಾಜರುಪಡಿಸಲಿರುವ ಅಧಿಕಾರಿಗಳು ವಿಚಾರಣೆಗಾಗಿ ತಮ್ಮ ಸುಪರ್ದಿಗೆ ಪಡೆಯುವ ಸಾಧ್ಯತೆ ಇದೆ’ ಎಂದು ತಿಳಿಸಿವೆ.

ಅರುಣ್‌ ಪಿಳ್ಳೈ ಅವರು ರಾಬಿನ್‌ ಡಿಸ್ಟಿಲರೀಸ್‌ ಎಲ್ಎಲ್‌ಪಿ ಹೆಸರಿನ ಕಂಪನಿಯ ಪಾಲುದಾರರಾಗಿದ್ದಾರೆ. ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ‍ ‍ಪುತ್ರಿಯಾಗಿರುವ ವಿಧಾನಪರಿಷತ್ ಸದಸ್ಯೆ ಕೆ.ಕವಿತಾ ಹಾಗೂ ಇತರರನ್ನು ಒಳಗೊಂಡ ‘ದಕ್ಷಿಣದ ಗುಂಪನ್ನು’ ರಾಬಿನ್‌ ಡಿಸ್ಟಿಲರೀಸ್‌ ಕಂಪನಿ ಪ್ರತಿನಿಧಿಸುತ್ತಿದೆ ಎಂದು ಇ.ಡಿ ಈ ಹಿಂದೆ ಹೇಳಿತ್ತು. ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೊಳಗಾಗಿರುವ ಉದ್ಯಮಿ ಸಮೀರ್‌ ಮಹಾಂದ್ರು, ಅವರ ಪತ್ನಿ ಗೀತಿಕಾ ಮಹಾಂದ್ರು ಹಾಗೂ ಇವರ ಒಡೆತನದ ಇಂಡೊಸ್ಪಿರಿಟ್‌ ಸಮೂಹದ ಜೊತೆಗೂ ಅರುಣ್‌ ಪಿಳ್ಳೈ ಒಡನಾಟ ಹೊಂದಿದ್ದಾರೆ.

ಸಿಸೋಡಿಯಾ ಆಪ್ತ ಸಹಾಯಕನ ವಿಚಾರಣೆ
ನವದೆಹಲಿ (ಪಿಟಿಐ): ‘ದೆಹಲಿ ಅಬಕಾರಿ ನೀತಿ ಹಗರಣದ ತನಿಖೆ ಚುರುಕುಗೊಳಿಸಿರುವ ಸಿಬಿಐ, ಮಂಗಳವಾರ ಸಿಸೋಡಿಯಾ ಆಪ್ತ ಸಹಾಯಕ ದೇವೇಂದ್ರ ಶರ್ಮಾ ಅವರನ್ನು ವಿಚಾರಣೆಗೊಳಪಡಿಸಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಶರ್ಮಾ ಯಾನೆ ರಿಂಕುಗೆ ಸಿಬಿಐ, ಸಮನ್ಸ್‌ ಜಾರಿಗೊಳಿಸಿತ್ತು. ಸಿಬಿಐ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದ ಅವರನ್ನು ಭ್ರಷ್ಟಾಚಾರ ನಿಗ್ರಹ ಘಟಕದ ಅಧಿಕಾರಿಗಳು ಬೆಳಿಗ್ಗೆಯಿಂದಲೇ ವಿಚಾರಣೆ ನಡೆಸಿದ್ದಾರೆ’ ಎಂದು ತಿಳಿಸಿದ್ದಾರೆ.

ಸಿಸೋಡಿಯಾಗೆ ಅನ್ನ, ಚಪಾತಿ
‘ಜೈಲಿನಲ್ಲಿರುವ ಇತರ ಕೈದಿಗಳಂತೆ ಸಿಸೋಡಿಯಾ ಅವರಿಗೂ ಸೋಮವಾರ ರಾತ್ರಿಯ ಊಟಕ್ಕೆ ಅನ್ನ, ಚಪಾತಿ ಹಾಗೂ ದಾಲ್‌ ನೀಡಲಾಯಿತು’ ಎಂದು ತಿಹಾರ್‌ ಜೈಲಿನ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

‘ಸಿಸೋಡಿಯಾ ಅವರನ್ನು ಹಿರಿಯ ನಾಗರಿಕರ ಸೆಲ್‌ನಲ್ಲಿ ದಾಖಲಿಸಲಾಗಿದ್ದು, ಅಲ್ಲಿ ಅವರೊಬ್ಬರೇ ಇದ್ದಾರೆ. ಇತರರಂತೆ ಅವರಿಗೂ ಹೊದಿಕೆ, ಸೋಪು ಹಾಗೂ ಇತರೆ ನೈರ್ಮಲ್ಯ ಉತ್ಪನ್ನಗಳನ್ನು ವಿತರಿಸಲಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT