ಮಂಗಳವಾರ, ಜನವರಿ 19, 2021
17 °C

ಕೋವಿಡ್ ಮೊದಲ ಲಸಿಕೆಗೆ ಅನುಮೋದನೆ; ಕೋವಿಶೀಲ್ಡ್ ತುರ್ತು ಬಳಕೆಗೆ ಸರ್ಕಾರ ಒಪ್ಪಿಗೆ

ಪಿಟಿಐ / ರಾಯಿಟರ್ಸ್ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನೆಕಾ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ‘ಕೋವಿಶೀಲ್ಡ್’ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಶನಿವಾರ ಅನುಮೋದನೆ ನೀಡಿದೆ. ಭಾರತದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ ಮೊದಲ ಲಸಿಕೆ ಇದು.

ಪುಣೆಯ ಸೆರಂ ಇನ್‌ಸ್ಟಿಟ್ಯೂಟ್ ಆಫ್‌ ಇಂಡಿಯಾ (ಎಸ್‌ಐಐ) ಉತ್ಪಾದಿಸುವ ಈ ಲಸಿಕೆಯ ಬಳಕೆಗೆ ತಜ್ಞರ ಸಮಿತಿಯು ಶುಕ್ರವಾರವಷ್ಟೇ ಅನುಮೋದನೆ ನೀಡಿತ್ತು.

ಇನ್ನೂ ಮೂರು ಲಸಿಕೆಗಳು ಅನುಮೋದನೆಗಾಗಿ ಕಾಯುತ್ತಿವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ‘ಬಹುಶಃ ನಾಲ್ಕು ಲಸಿಕೆಗಳು ಸಿದ್ಧವಾಗುತ್ತಿರುವ ಏಕೈಕ ದೇಶ ಭಾರತ’ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

3 ಕೋಟಿ ಸಿಬ್ಬಂದಿಗೆ ಉಚಿತ ಲಸಿಕೆ: ಮೊದಲ ಹಂತದ ಕೋವಿಡ್ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಆದ್ಯತಾ ವಲಯವಾದ ಒಂದು ಕೋಟಿ ಆರೋಗ್ಯ ಸಿಬ್ಬಂದಿಗೆ ಮತ್ತು ಕೋವಿಡ್ ಕೆಲಸದಲ್ಲಿ ಮುಂಚೂಣಿಯಲ್ಲಿ ಕೆಲಸ ಮಾಡಿದ 2 ಕೋಟಿ ಮಂದಿಗೆ ಲಸಿಕೆಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ತಿಳಿಸಿದ್ದಾರೆ.

ಆನಂತರ 27 ಕೋಟಿ ಆದ್ಯತಾ ಫಲಾನುಭವಿಗಳಿಗೆ ಜುಲೈ ಅಂತ್ಯದೊಳಗೆ ಲಸಿಕೆ ನೀಡಲಾಗುತ್ತದೆ. ಈ ವಲಯದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು ಗಂಭೀರ ಆರೋಗ್ಯ ಸಮಸ್ಯೆ ಹೊಂದಿರುವವರು ಸೇರಿದ್ದಾರೆ.

‘ಕೋವಿಡ್ ಲಸಿಕೆಗೆ ಅನುಮತಿ ಸಿಕ್ಕ ತಕ್ಷಣ, ರಾಜಧಾನಿ ದೆಹಲಿಯ ಜನರಿಗೆ ಉಚಿತವಾಗಿ ಅದನ್ನು ನೀಡಲಾಗುವುದು’ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಶನಿವಾರ ಹೇಳಿದ್ದಾರೆ.

ಕೊವ್ಯಾಕ್ಸಿನ್‌ ಬಳಕೆಗೆ ಶಿಫಾರಸು
ಭಾರತ್ ಬಯೋಟೆಕ್ ಸಂಸ್ಥೆ ದೇಶೀಯವಾಗಿ ಅಭಿವೃದ್ಧಿಪಡಿಸಿರುವ ‘ಕೊವ್ಯಾಕ್ಸಿನ್’ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರೀಯ ಔಷಧ ಪ್ರಾಧಿಕಾರದ ತಜ್ಞರ ಸಮಿತಿಯು ಶನಿವಾರ ಶಿಫಾರಸು ಮಾಡಿದೆ.

ಕೊವ್ಯಾಕ್ಸಿನ್ ಲಸಿಕೆಯನ್ನು ಭಾರತೀಯ ವೈದ್ಯಕೀಯ ಪರಿಷತ್ (ಐಸಿಎಂಆರ್) ಸಹಯೋಗದಲ್ಲಿ ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದೆ. ಹೈದರಾಬಾದ್ ಮೂಲದ ಸಂಸ್ಥೆಯು ಸಲ್ಲಿಸಿದ್ದ ಹೆಚ್ಚುವರಿ ದತ್ತಾಂಶ ಮತ್ತು ದಾಖಲೆಗಳ ಬಗ್ಗೆ ಕೇಂದ್ರ ಔಷಧಿ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ಕೋವಿಡ್ ತಜ್ಞರ ತಂಡವು ಶನಿವಾರವೂ ಚರ್ಚೆ ನಡೆಸಿತು ಎಂದು ಮೂಲಗಳು ತಿಳಿಸಿವೆ.

ಔಷಧದ ತುರ್ತು ಬಳಕೆಗೆ ಅನುಮತಿ ನೀಡುವಂತೆ ಭಾರತೀಯ ಔಷಧ ಮಹಾನಿಯಂತ್ರಕರಿಗೆ ಡಿ.7ರಂದು ಭಾರತ್ ಬಯೋಟೆಕ್ ಅರ್ಜಿ ಸಲ್ಲಿಸಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು