ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷ ಭಾಷಣ ನಿಯಂತ್ರಣಕ್ಕೆ ಫೇಸ್‌ಬುಕ್ ಹೆಣಗಾಟ, ಬಜರಂಗದಳ ಅಪಾಯಕಾರಿ ಸಂಘಟನೆ-ವರದಿ

ಫೇಸ್‌ಬುಕ್‌ ಬಳಕೆ ಕುರಿತ ಅಧ್ಯಯನದ ಆಂತರಿಕ ವರದಿಯಲ್ಲಿ ಉಲ್ಲೇಖ
Last Updated 24 ಅಕ್ಟೋಬರ್ 2021, 20:51 IST
ಅಕ್ಷರ ಗಾತ್ರ

ನ್ಯೂಯಾರ್ಕ್: ‘ಭಾರತದಲ್ಲಿ ದ್ವೇಷ ಭಾಷಣ, ಸುಳ್ಳುಸುದ್ದಿಗಳು ಮತ್ತು ಹಿಂಸಾಚಾರದ ಸಂಭ್ರಮವನ್ನು ನಿಯಂತ್ರಿಸಲು ಫೇಸ್‌ಬುಕ್‌ಗೆ ಕಷ್ಟವಾಗುತ್ತಿದೆ’ ಎಂದು ಫೇಸ್‌ಬುಕ್‌ನ ಆಂತರಿಕ ವರದಿಯಲ್ಲಿ ವಿವರಿಸಲಾಗಿದೆ. ‘ಕೆಲವು ಗುಂಪುಗಳು ಮುಸ್ಲಿಂ ವಿರೋಧಿ ವಿಚಾರಗಳು ಮತ್ತು ಮುಸ್ಲಿಂ ಅವಹೇಳನಕಾರಿ ವಿಚಾರಗಳನ್ನು ಪದೇ ಪದೇ ಹಂಚಿಕೊಳ್ಳುತ್ತವೆ’ ಎಂದೂ ಈ ವರದಿಗಳಲ್ಲಿವಿವರಿಸಲಾಗಿದೆ.

ಭಾರತದಲ್ಲಿ ಫೇಸ್‌ಬುಕ್‌ ಬಳಕೆ ಕುರಿತು, ಫೇಸ್‌ಬುಕ್‌ ಆಂತರಿಕವಾಗಿ ನಡೆಸಿದ ಸಂಶೋಧನೆಯ ವರದಿಗಳಲ್ಲಿ ಈ ಮಾಹಿತಿ ಇದೆ. ಫೇಸ್‌ಬುಕ್‌ನ ಮಾಜಿ ಉದ್ಯೋಗಿ ಫ್ರಾನ್ಸಿಸ್ ಹಾಗನ್ ಅವರು ಬಹಿರಂಗಪಡಿಸಿರುವ
ದಾಖಲೆಗಳಲ್ಲಿ ಈ ವರದಿಗಳೂ ಇವೆ. ನ್ಯೂಯಾರ್ಕ್ ಟೈಮ್ಸ್ ಈ ವರದಿಗಳನ್ನು ಆಧರಿಸಿ, ಪತ್ರಿಕಾ ವರದಿ ಪ್ರಕಟಿಸಿದೆ. ದ್ವೇಷ ಭಾಷಣ, ಸುಳ್ಳುಸುದ್ದಿಗಳು ಮತ್ತು ಹಿಂಸಾಚಾರದ ಸಂಭ್ರಮವನ್ನು ಫೇಸ್‌ಬುಕ್‌ನ ನಿಯಮಗಳಿಂದ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಈ ವರದಿಯಲ್ಲಿ ಇದೆ.

‘ಫೇಸ್‌ಬುಕ್‌ನ ಉದ್ಯೋಗಿಯೊಬ್ಬರು, ತಾವು ಕೇರಳದವರು ಎಂದು ಬಿಂಬಿಸಿಕೊಳ್ಳುವಂತಹ ನಕಲಿ ಖಾತೆಯನ್ನು 2019ರ ಫೆಬ್ರುವರಿಯಲ್ಲಿ ಆರಂಭಿಸಿದ್ದರು. ಆ ಖಾತೆಗೆ ಬರುವ ಸ್ನೇಹ ಸಲಹೆಗಳು,
ಸ್ನೇಹ ವಿನಂತಿಗಳು, ವಿಡಿಯೊ ಮತ್ತು ಪೋಸ್ಟ್‌ ಸಲಹೆಗಳನ್ನು ಫೇಸ್‌ಬುಕ್‌ ನಿಯಮಕ್ಕೆ ಅನುಗುಣವಾಗಿ ಅಂಗೀಕರಿಸುತ್ತಾ ಹೋಗುವುದು ಈ ಅಧ್ಯಯನದ ಭಾಗವಾಗಿತ್ತು. ಆ ಖಾತೆ ಆರಂಭಿಸಿ ಮೂರು ವಾರಗಳ ಅವಧಿಯಲ್ಲಿ ದ್ವೇಷ ಭಾಷಣ, ಸುಳ್ಳು ಸುದ್ದಿ ಮತ್ತು ಹಿಂಸಾಚಾರವನ್ನು ಉದ್ದೀಪಿಸುವ ಫೇಸ್‌ಬುಕ್‌ ಗುಂಪುಗಳ, ಖಾತೆಗಳ, ಪೋಸ್ಟ್‌ಗಳ ಸಲಹೆಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದವು. ಇದಕ್ಕೆ ಸಂಬಂಧಿಸಿದ ವರದಿಯನ್ನು ನಂತರದ ಒಂದು ತಿಂಗಳಲ್ಲಿ ಫೇಸ್‌ಬುಕ್ ಆಂತರಿಕವಾಗಿ ಪ್ರಕಟಿಸಿತ್ತು’ ಎಂದು ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ವಿವರಿಸಿದೆ.

2019ರ ಚುನಾವಣೆ ಸಂದರ್ಭದಲ್ಲಿ ಆಡಳಿತ ಪಕ್ಷಕ್ಕೆ ಸಂಬಂಧಿಸಿದ ಬಾಟ್‌ಗಳು (ಕೃತಕ ಬುದ್ಧಿಮತೆ ನಿರ್ವಹಣೆಯ ಖಾತೆಗಳು) ಮತ್ತು ನಕಲಿ ಖಾತೆಗಳು, ಚುನಾವಣೆಯಲ್ಲಿ ಹೇಗೆ ಕೋಲಾಹಲ ಎಬ್ಬಿಸಿದ್ದವು ಎಂಬುದನ್ನೂ ಈ ಅಧ್ಯಯನದ ವರದಿಯು ದಾಖಲಿಸಿದೆ.ಚುನಾವಣೆ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಹೆಚ್ಚು ವೀಕ್ಷಣೆಗೆ ಒಳಗಾದ ಪೋಸ್ಟ್‌ಗಳಲ್ಲಿ ಶೇ 40ರಷ್ಟು ಪೋಸ್ಟ್‌ಗಳು ಸುಳ್ಳು ಸುದ್ದಿಗಳಾಗಿದ್ದವು ಮತ್ತು ದೃಢೀಕರಿಸಲಾಗದಂತಹ ಮಾಹಿತಿಗಳಾಗಿದ್ದವು. ಈ ರೀತಿಯ ಒಂದೇ ಒಂದು ಖಾತೆಯಿಂದ ಮಾಡಲಾದ ಪೋಸ್ಟ್‌ ಅನ್ನು 3 ಕೋಟಿ ಜನರು ವೀಕ್ಷಿಸಿದ್ದರು ಎಂದು ವರದಿಯಲ್ಲಿ ವಿವರಿಸಲಾಗಿದೆ.

2019ರ ಚುನಾವಣೆ ಸಂದರ್ಭದಲ್ಲಿ ಫೇಸ್‌ಬುಕ್ ಕೇಂದ್ರ ಕಚೇರಿಯ ಸಂಶೋಧಕರು ಭಾರತಕ್ಕೆ ಭೇಟಿ ನೀಡಿ, ಅಲ್ಲಿನ ಉದ್ಯೋಗಿಗಳ ಜತೆ ಮಾತುಕತೆ ನಡೆಸಿದ್ದರು. ಭಾರತದಲ್ಲಿ ಸುಳ್ಳು ಸುದ್ದಿ ಹರಡುವುದನ್ನು ತಡೆಯಲು ಕಠಿಣವಾದ ನಿಯಮಗಳ ಅಗತ್ಯವಿದೆ. ಅವುಗಳನ್ನು ಕಾರ್ಯರೂಪಕ್ಕೆ ತರಬೇಕು ಎಂಬುದು ಅಲ್ಲಿನ ಉದ್ಯೋಗಿಗಳ ಅಭಿಪ್ರಾಯವಾಗಿತ್ತು ಎಂಬುದನ್ನು ‘ಇಂಡಿಯನ್ ಎಲೆಕ್ಷನ್ ಕೇಸ್ ಸ್ಟಡಿ’ ವರದಿಯಲ್ಲಿ ಫೇಸ್‌ಬುಕ್
ದಾಖಲಿಸಿದೆ.

ಫೇಸ್‌ಬುಕ್‌ನಲ್ಲಿ ಸುಳ್ಳುಸುದ್ದಿ ಪ್ರಕಟವಾಗುವುದನ್ನು ತಡೆಯಲು ಭಾರತದಲ್ಲಿ ಕೃತಕ ಬುದ್ಧಿಮತ್ತೆ ವ್ಯವಸ್ಥೆಯನ್ನು ಫೇಸ್‌ಬುಕ್‌ ಅಳವಡಿಸಿಕೊಂಡಿದೆ. ಭಾರತದಲ್ಲಿ 22 ಭಾಷೆಗಳಲ್ಲಿ ಫೇಸ್‌ಬುಕ್ ಸೇವೆ ನೀಡುತ್ತಿದೆ. ಆದರೆ ಐದು ಭಾಷೆಗಳಲ್ಲಿ ಮಾತ್ರ ಈ ವ್ಯವಸ್ಥೆ ಇದೆ. ಹೆಚ್ಚುಬಳಕೆಯಲ್ಲಿರುವ ಹಿಂದಿ ಮತ್ತು ಬಂಗಾಳಿ ಭಾಷೆಯಲ್ಲಿ ಈ ವ್ಯವಸ್ಥೆ ಲಭ್ಯವಿಲ್ಲ. ಹೀಗಾಗಿ ಸುಳ್ಳುಸುದ್ದಿ, ದ್ವೇಷ ಭಾಷಣಕ್ಕೆ ಫೇಸ್‌ಬುಕ್ ಬಳಕೆಯಾಗುವುದನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಇದನ್ನು ಶೀಘ್ರವೇ ಆರಂಭಿಸಬೇಕು ಎಂದು ಆಂತರಿಕ ವರದಿಯಲ್ಲಿ ಶಿಫಾರಸು
ಮಾಡಲಾಗಿತ್ತು.

ಚುನಾವಣೆ ಸಂದರ್ಭದಲ್ಲಿ ಸುಳ್ಳುಸುದ್ದಿ ಹರಡುವುದನ್ನು ತಡೆಯಲು ಫೇಸ್‌ಬುಕ್ ಹಲವು ಕ್ರಮಗಳನ್ನು ತೆಗೆದುಕೊಂಡಿತ್ತು. ಸುಳ್ಳುಸುದ್ದಿ ಪತ್ತೆಮಾಡಲು ಬೇರೊಂದು ಕಂಪನಿಗೆ ಹೊರಗುತ್ತಿಗೆ ನೀಡಲಾಗಿತ್ತು ಎಂದು ವರದಿಯಲ್ಲಿ ವಿವರಿಸಲಾಗಿದೆ.

---

‘ಬಜರಂಗದಳ ಅಪಾಯಕಾರಿ ಸಂಘಟನೆ’

ಕೆಲವು ಗುಂಪುಗಳು ಅದರಲ್ಲೂ ಪ್ರಧಾನವಾಗಿ ಬಜರಂಗ ದಳವು ಮುಸ್ಲಿಂ ವಿರೋಧಿ ಭಾವನೆಯನ್ನು ಕೆರಳಿಸುವ ಪೋಸ್ಟ್‌ಗಳನ್ನು ಮಾಡುತ್ತಿತ್ತು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

‘ಬಜರಂಗ ದಳವು ಧರ್ಮಾಧಾರಿತ ಹಿಂಸಾಚಾರವನ್ನು ಉದ್ದೀಪಿಸುವ ಕಾರಣ, ಫೇಸ್‌ಬುಕ್ ಅದನ್ನು ಅಪಾಯಕಾರಿ ಸಂಘಟನೆ ಎಂದು ಪರಿಗಣಿಸಿತ್ತು. ಆದರೆ ಭಾರತದಲ್ಲಿ ಫೇಸ್‌ಬುಕ್‌ಗೆ ಹೆಚ್ಚಿನ ಅಧಿಕಾರ ಇಲ್ಲದೇ ಇದ್ದ ಕಾರಣಕ್ಕೆ, ಇಂತಹ ಪೋಸ್ಟ್‌ಗಳ ನಿಯಂತ್ರಣ ಸಾಧ್ಯವಾಗಿರಲಿಲ್ಲ. ಭಾರತವೂ ಸೇರಿದಂತೆ ವಿಶ್ವದ ಹಲವೆಡೆ ಮುಸ್ಲಿಂ ವಿರೋಧಿ ಭಾವನೆಯನ್ನು ಕೆರಳಿಸುವ ಪೋಸ್ಟ್‌ಗಳು ಹೆಚ್ಚಾಗುತ್ತಿದ್ದ ಕಾಲವದು. ಆದರೆ ಈಗ ಅದನ್ನು ನಿಯಂತ್ರಿಸಲು ಹಲವು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ’ ಎಂದು ಫೇಸ್‌ಬುಕ್‌ನ ಆಂತರಿಕ ವರದಿಯಲ್ಲಿ ವಿವರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT