ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ಜೀವದೊಂದಿಗೆ ಸರ್ಕಾರ, ಫಾರ್ಮಾ ಕೌನ್ಸಿಲ್ ಚೆಲ್ಲಾಟವಾಡಬಾರದು: ‘ಸುಪ್ರೀಂ’

ಬಿಹಾರ: ಆಸ್ಪತ್ರೆ, ಔಷಧಿ ಅಂಗಡಿ ನಡೆಸುತ್ತಿರುವ ನಕಲಿ ಫಾರ್ಮಾಸಿಸ್ಟ್‌ಗಳು
Last Updated 30 ನವೆಂಬರ್ 2022, 14:04 IST
ಅಕ್ಷರ ಗಾತ್ರ

ನವದೆಹಲಿ: ಬಿಹಾರದಲ್ಲಿ ನಕಲಿ ಫಾರ್ಮಾಸಿಸ್ಟ್‌ಗಳ ಹಾವಳಿ ಹೆಚ್ಚಾಗಿರುವುದನ್ನು ಗಮನಿಸಿರುವ ಸುಪ್ರೀಂ ಕೋರ್ಟ್, ‘ರಾಜ್ಯ ಸರ್ಕಾರವಾಗಲೀ ಅಥವಾ ಫಾರ್ಮಸಿ ಕೌನ್ಸಿಲ್ ಆಗಲೀ ಜನರ ಜೀವದೊಂದಿಗೆ ಚೆಲ್ಲಾಟವಾಡುವುದನ್ನು ಸಹಿಸಲಾಗದು’ ಎಂದು ಕಿಡಿಕಾರಿದೆ.

‘ಬಿಹಾರದಲ್ಲಿ ನಕಲಿ ಫಾರ್ಮಾಸಿಸ್ಟ್‌ಗಳು ಆಸ್ಪತ್ರೆಗಳು ಮತ್ತು ಔಷಧಿ ಅಂಗಡಿಗಳನ್ನು ನಡೆಸುತ್ತಿದ್ದಾರೆ’ ಎಂದು ಆರೋಪಿಸಿ ಪಟ್ನಾ ಹೈಕೋರ್ಟ್‌ನಲ್ಲಿ ಇತ್ಯರ್ಥಗೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್‌)ನ್ಯಾಯಮೂರ್ತಿಗಳಾದ ಎಂ.ಆರ್. ಷಾ ಮತ್ತು ಎಂ.ಎಂ. ಸುಂದರೇಶ್ ಅವರನ್ನೊಳಗೊಂಡ ನ್ಯಾಯಪೀಠವು ಮರು ವಿಚಾರಣೆಗೆ ಕೈಗೆತ್ತಿಕೊಂಡಿದೆ.

‘ನೋಂದಾಯಿತವಲ್ಲದ ಫಾರ್ಮಾಸಿಸ್ಟ್‌ನಿಂದ ಅಥವಾ ನಕಲಿ ಫಾರ್ಮಾಸಿಸ್ಟ್‌ನಿಂದ ಆಸ್ಪತ್ರೆಗಳು ಅಥವಾ ಔಷಧಾಲಯಗಳನ್ನು ನಡೆಸುವುದು ಅಂತಿಮವಾಗಿ ನಾಗರಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಬಿಹಾರದ ನಾಗರಿಕರ ಆರೋಗ್ಯ ಮತ್ತು ಜೀವನದೊಂದಿಗೆ ಚೆಲ್ಲಾಟವಾಡಲು ರಾಜ್ಯ ಸರ್ಕಾರಕ್ಕಾಗಲೀ ಅಥವಾ ಫಾರ್ಮಸಿ ಕೌನ್ಸಿಲ್‌ಗಾಗಲೀ ಅನುಮತಿ ನೀಡಲಾಗುವುದಿಲ್ಲ’ ಎಂದು ಪೀಠವು ಕಿಡಿಕಾರಿದೆ.

ಬಿಹಾರ ರಾಜ್ಯ ಫಾರ್ಮಸಿ ಕೌನ್ಸಿಲ್ ಬಗ್ಗೆ ಗಂಭೀರವಾದ ಆರೋಪಗಳನ್ನು ಮಾಡಿದ್ದರೂ ರಾಜ್ಯ ಸರ್ಕಾರವು ಯಾವುದೇ ಕ್ರಮವನ್ನು ಕೈಗೊಳ್ಳದಿರುವುದನ್ನು ಗಮನಿಸಿದ ನ್ಯಾಯಾಲಯವು, ಪಟ್ನಾ ಹೈಕೋರ್ಟಿನ ತೀರ್ಪಿಗೆ ಅಸಮ್ಮತಿ ವ್ಯಕ್ತಪಡಿಸಿ, ‘ಈ ಬಗ್ಗೆ ಫಾರ್ಮಸಿ ಕೌನ್ಸಿಲ್‌ಗೆ ವಿವರವಾದ ವರದಿ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಬೇಕಿತ್ತು’ ಎಂದೂ ಹೇಳಿದೆ.

ಇದಕ್ಕೆ ಸಂಬಂಧಿಸಿದ ಪಿಐಎಲ್ ಅನ್ನು ಪಟ್ನಾ ಹೈಕೋರ್ಟ್‌ಗೆ ವರ್ಗಾಯಿಸಿರುವ ಸುಪ್ರೀಂ ಕೋರ್ಟ್, ‘ರಾಜ್ಯ ಸರ್ಕಾರ ಮತ್ತು ಫಾರ್ಮಸಿ ಕೌನ್ಸಿಲ್‌ನಿಂದ ವಿವರವಾದ ವರದಿಯನ್ನು ಕೇಳಿ, ನಾಲ್ಕು ವಾರಗಳಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಬೇಕು’ ಎಂದೂ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT