ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ದೇವರ ಮೊಸಳೆ’ಗೆ ವಿದಾಯ

Last Updated 10 ಅಕ್ಟೋಬರ್ 2022, 19:36 IST
ಅಕ್ಷರ ಗಾತ್ರ

ಕಾಸರಗೋಡು: ಜಿಲ್ಲೆಯ ಕುಂಬಳೆ ಬಳಿಯ ಸರೋವರ ಕ್ಷೇತ್ರ ಅನಂತ ಪುರದ ‘ದೇವರ ಮೊಸಳೆ’ ‘ಬಬಿಯಾ’ ಭಾನುವಾರ ತಡರಾತ್ರಿ ಮೃತಪಟ್ಟಿದ್ದು, ಸಕಲ ಧಾರ್ಮಿಕ ವಿಧಿ ವಿಧಾನದಂತೆ ಭಕ್ತರ ಸಮ್ಮುಖದಲ್ಲಿ ಸೋಮವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.

ಸರೋವರದ ಮಧ್ಯಭಾಗದಲ್ಲಿ ಈ ದೇವಸ್ಥಾನ ಇದೆ. ಸಹಾಯಕ ಅರ್ಚಕರು ಪೂಜೆಯ ನಂತರ ಈ ಸರೋವರಕ್ಕೆ ಬಂದು ‘ಬಬಿಯಾ’ ಎಂದು ಕರೆಯುತ್ತಿದ್ದರು. ಆಗ ಅಲ್ಲಿಗೆ ಬರುತ್ತಿದ್ದ ಮೊಸಳೆ, ಅವರು ಕೊಡುವ ಪ್ರಸಾದ ಸೇವಿಸುತ್ತಿತ್ತು.

‘ಸುಮಾರು 80 ವರ್ಷದ ಈ ಮೊಸಳೆ ಸರೋವರದಲ್ಲಿ ತಂಗಿದ್ದು, ದೇವಸ್ಥಾನಕ್ಕೆ ಬರುವ ಭಕ್ತರಿಗೆ ಪ್ರಮುಖ ಆಕರ್ಷಣೆಯಾಗಿತ್ತು. ದೇವಾಲಯದ ಸೇವೆಗಳಲ್ಲಿ ಮೊಸಳೆಗೆ ನೈವೇದ್ಯವೂ ಪ್ರಧಾನವಾಗಿತ್ತು. ಸರೋವರದ ಸುತ್ತ ಜಾನುವಾರುಗಳು, ಹಕ್ಕಿಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದು, ಯಾವ ಪ್ರಾಣಿಗೂ ಈ ಮೊಸಳೆ ಈವರೆಗೆ ತೊಂದರೆ ಮಾಡಿಲ್ಲ’ ಎಂದು ದೇವಾಲಯದ ನಿವೃತ್ತ ಪರಿಚಾರಕ ಚಂದ್ರಶೇಖರ್ ಹೇಳಿದರು.

ಅನಾರೋಗ್ಯ: ಎರಡು ದಿನಗಳಿಂದ ಮಂಕಾಗಿದ್ದ ಬಬಿಯಾ, ಆಹಾರ ಸೇವಿಸಿರಲಿಲ್ಲ. ದೇವಾಲಯದ ಆಡಳಿತಾಧಿಕಾರಿ, ಪಶುವೈದ್ಯರನ್ನು ಕರೆಯಿಸಿ ಪರಿಶೀಲನೆ ನಡೆಸಿದಾಗ, ಆಹಾರ ಸೇವಿಸದಿರುವುದೇ ಅಸ್ವಸ್ಥತೆಗೆ ಕಾರಣ ಎಂದು ವೈದ್ಯರು ತಿಳಿಸಿದ್ದರು. ಸಾಮಾನ್ಯವಾಗಿ ಕೆರೆಯ ಗುಹೆಯೊಳಗೆ ಇರುತ್ತಿದ್ದ ಮೊಸಳೆ, ದೇವಾಲಯದ ಅಡುಗೆ ಆಲಯದ ಬಳಿಯ ಕೆರೆಯತ್ತ ಬಂದು ಮಲಗಿಕೊಂಡಿತ್ತು. ಭಾನುವಾರ ರಾತ್ರಿ ಮಗುಚಿ ಬಿದ್ದುಕೊಂಡ ಸ್ಥಿತಿಯಲ್ಲಿ ಇದೇ ಜಾಗದಲ್ಲಿ ಮೊಸಳೆಯ ಕಳೇಬರ ಪತ್ತೆಯಾಗಿತ್ತು ಎಂದು ದೇವಾಲಯದ ಆಡಳಿತ ಸಮಿತಿ ಪದಾಧಿಕಾರಿಗಳು ತಿಳಿಸಿದರು.

ಅಂತಿಮ ದರ್ಶನ: ಅನಂತಪುರ ದೇವಾಲಯದ ಮುಂಭಾಗದಲ್ಲಿ ಶವಪಟ್ಟಿಗೆಯಲ್ಲಿ ಬಬಿಯಾ ಕಳೇಬರ ಇರಿಸಿ ಸೋಮವಾರ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು.

ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಕಾಸರಗೋಡು ಶಾಸಕ ಎನ್.ಎ. ನೆಲ್ಲಿಕ್ಕುನ್ನು, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಸೇರಿದಂತೆ ಈ ಭಾಗದ ಜನಪ್ರತಿನಿಧಿಗಳು, ನೂರಾರು ಭಕ್ತರು ಅಂತಿಮ ದರ್ಶನ ಪಡೆದರು. ನಂತರ ದೇವಾಲಯದ ಎದುರು ದೇಹವನ್ನು ಭೂಮಿಯಲ್ಲಿ ಹೂಳಲಾಯಿತು.

ಬಬಿಯಾ: ‘ಬ್ರಿಟಿಷ್ ಆಡಳಿತ ಅವಧಿಯಲ್ಲಿ ಅನಂತಪುರ ದೇವಾಲಯದ ಸರೋವರದಲ್ಲಿ ‘ಬಬಿಯಾ’ ಎಂಬ ಹೆಸರಿನ ಮೊಸಳೆ ಬದುಕಿತ್ತು. ಒಮ್ಮೆ ಅನಂತಪುರದಲ್ಲಿ ಬ್ರಿಟಿಷ್ ಮಿಲಿಟರಿ ಕ್ಯಾಂಪ್ ನಡೆದಾಗ ಸೇನೆಯ ಹಿರಿಯ ಅಧಿಕಾರಿಯೊಬ್ಬರು ಬಬಿಯಾ ಎಂದು ಕರೆದರು. ಆಗ ಹೊರಬಂದ ಆ ಮೊಸಳೆಯನ್ನು ಗುಂಡಿಕ್ಕಿ ಕೊಂದಿದ್ದರು. ನಂತರ ತಮ್ಮ ಜೀಪ್‌ನಲ್ಲಿ ಮೊಸಳೆಯ ಮೃತದೇಹ ಕೊಂಡೊಯ್ದಿದ್ದರು. ಆದರೆ, ಅದೇ ದಿನ ಮಧ್ಯಾಹ್ನ ಪೂಜೆಯ ನಂತರ ಅರ್ಚಕರು ‘ಬಬಿಯಾ’ ಎಂದು ಕರೆದಾಗ ಮೊಸಳೆ ಮೇಲಕ್ಕೆ ಬಂದು ನೈವೇದ್ಯ ಸೇವಿಸಿತ್ತು ಎಂಬ ಪ್ರತೀತಿ ಇದೆ’ ಎನ್ನುತ್ತಾರೆ ಈ ಭಾಗದ ಹಿರಿಯರು.

ಹಿಂದೆ ಕೋಳಿಯನ್ನು ಹರಕೆಯಾಗಿ ಈ ಮೊಸಳೆಗೆ ನೀಡುವ ಪದ್ಧತಿ ಇತ್ತು. ಆದರೆ, 2002ರಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕೋಳಿಯನ್ನು ನೀಡುವುದು ಸರಿಯಲ್ಲ ಎಂದು ಕಂಡುಬಂದ ನಂತರ ಈ ಹರಕೆಯ ಕ್ರಮವನ್ನು ನಿಲ್ಲಿಸಲಾಗಿತ್ತು.ಈ ಮೊಸಳೆ ಇಲ್ಲಿಗೆ ಹೇಗೆ ಬಂತು ಎಂಬುದು ಯಾರಿಗೂ ಗೊತ್ತಿಲ್ಲ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT