ಸೋಮವಾರ, ಅಕ್ಟೋಬರ್ 26, 2020
28 °C

ಕೃಷಿ ಮಸೂದೆ: ಸರ್ಕಾರ–ವಿಪಕ್ಷ ಸಂಘರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೃಷಿ ಮಸೂದೆಗಳಲ್ಲಿ ಉಲ್ಲೇಖವಾಗಿರುವ ಕೃಷಿ ಉತ್ಪನ್ನಗಳ ‘ವ್ಯಾಪಾರದ ಪ್ರದೇಶ’ ವ್ಯಾಖ್ಯಾನದಲ್ಲಿ, ಎಪಿಎಂಸಿ ಕಾಯ್ದೆಯಡಿ ರಚಿಸಲಾಗಿರುವ ಮಾರ್ಕೆಟ್‌ ಯಾರ್ಡ್‌ಗಳಾಗಲಿ, ಖಾಸಗಿ ವ್ಯಾಪಾರಿಗಳು ಪರವಾನಗಿ ಪಡೆದು ನಡೆಸುವ ಯಾರ್ಡ್‌ಗಳಾಗಲಿ ಒಳಗೊಂಡಿಲ್ಲ. ಬದಲಿಗೆ, ಉತ್ಪಾದನಾ ಪ್ರದೇಶ, ಕಾರ್ಖಾನೆ ಆವರಣ, ಗೋದಾಮು, ಫಾರ್ಮ್‌ ಗೇಟ್‌ಗಳು, ಕೋಲ್ಡ್‌ ಸ್ಟೋರೇಜ್‌ ಮುಂತಾದವನ್ನು ‘ವ್ಯಾಪಾರ ಪ್ರದೇಶ’ ಎಂದು ವ್ಯಾಖ್ಯಾನಿಸಲಾಗಿದೆ. ಎಪಿಎಂಸಿ ಮಂಡಿಗಳನ್ನು ‘ವ್ಯಾಪಾರ ಪ್ರದೇಶ’ ವ್ಯಾಖ್ಯಾನದಿಂದ ಹೊರಗಿಡಲಾಗಿದೆ. ‘ಮಂಡಿಯ ಹೊರಗೂ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಅನುಮತಿ ನೀಡಿದರೆ ಎಲ್ಲಿ ಬೇಕಾದರೂ ತನ್ನ ಉತ್ಪನ್ನವನ್ನು ಮಾರಾಟ ಮಾಡುವ ಸ್ವಾತಂತ್ರ್ಯ ರೈತರಿಗೆ ಲಭಿಸುತ್ತದೆ’ ಎಂದು ಸರ್ಕಾರ ವಾದಿಸಿದೆ.

ಆದರೆ, ಇದರಿಂದಾಗಿ ಮಂಡಿಗಳು ತಮ್ಮ ‘ಭೌತಿಕ ಆವರಣ’ಕ್ಕೆ ಸೀಮಿತವಾಗಿ, ಕಾರ್ಪೊರೇಟ್‌ ಖರೀದಿದಾರರಿಗೆ ಕೃಷಿ ಉತ್ಪನ್ನಗಳ ಖರೀದಿಗೆ ಮುಕ್ತ ಅವಕಾಶ ಲಭ್ಯವಾಗಲಿದೆ ಎಂಬುದು ಮಸೂದೆ ವಿರೋಧಿಗಳ ವಾದ.

ಕೃಷಿ ಉತ್ಪನ್ನಗಳನ್ನು ಗ್ರಾಹಕರಿಗೆ ಮಾರಾಟ ಮಾಡಲು, ಮೌಲ್ಯವರ್ಧನೆ, ಸಂಸ್ಕರಣೆ, ತಯಾರಿಕೆ, ರಫ್ತು ಮುಂತಾದ ಉದ್ದೇಶಗಳಿಗಾಗಿ ಸ್ವತಃ ಅಥವಾ ಬೇರೆಯವರ ಪರವಾಗಿ ಖರೀದಿಸುವವರನ್ನು ‘ವರ್ತಕ’ ಎಂದು ಮೊದಲ ಮಸೂದೆಯ ಸೆಕ್ಷನ್‌ 2(ಎನ್‌) ವ್ಯಾಖ್ಯಾನಿಸುತ್ತದೆ. ಕೃಷಿ ಉತ್ಪನ್ನಗಳ ಸಂಸ್ಕರಣೆ ಮಾಡುವವರು, ರಫ್ತು ಮಾಡುವವರು, ಸಗಟು ವ್ಯಾಪಾರ ನಡೆಸುವವರು, ಮಿಲ್‌ ಮಾಲೀಕರು ಮತ್ತು ಚಿಲ್ಲರೆ ವ್ಯಾಪಾರಿಗಳೂ ಈ ವ್ಯಾಪ್ತಿಯೊಳಗೆ ಬರುತ್ತಾರೆ.

ಇಂಥ ವ್ಯಾಪಾರಿಯು ಅಗತ್ಯ ಪರವಾನಗಿ ಪಡೆದರೆ ಎಪಿಎಂಸಿ ಮಂಡಿಯೊಳಗೆಯೂ ಕಾರ್ಯ ನಿರ್ವಹಿಸಬಹುದು. ಆದರೆ ಇಂಥ ವರ್ತಕರ ಆರ್ಥಿಕ ಹಿನ್ನೆಲೆಯ ವಿವರಗಳು ಲಭ್ಯವಾಗುವುದಿಲ್ಲ. ಆದ್ದರಿಂದ ರೈತರು ಇವರನ್ನು ನಂಬುವುದು ಹೇಗೆ ಎಂದು ವಿರೋಧಿಗಳು ಪ್ರಶ್ನಿಸುತ್ತಾರೆ.

‘ಎಪಿಎಂಸಿ ಅಥವಾ ಇನ್ನಾವುದೇ ಕಾನೂನಿನಡಿಯಲ್ಲಿ ರೈತರಿಗಾಗಲಿ ವರ್ತಕರಿಗಾಗಲಿ ಮಾರುಕಟ್ಟೆ ಶುಲ್ಕ ಅಥವಾ ಸೆಸ್ ವಿಧಿಸಬಾರದು’ ಎಂದು ಮಸೂದೆ ಹೇಳುತ್ತದೆ. ಇದರಿಂದ ವ್ಯಾಪಾರದ ವೆಚ್ಚ ಕಡಿಮೆಯಾಗುತ್ತದೆ, ವರ್ತಕರು ಹಾಗೂ ರೈತ ಇಬ್ಬರಿಗೂ ಇದು ಲಾಭದಾಯಕ ಎಂದು ಸರ್ಕಾರ ಹೇಳಿದೆ. ಆದರೆ, ಶುಲ್ಕ ರದ್ದು ಮಾಡುವ ಮೂಲಕ ಸರ್ಕಾರವು ಕಾರ್ಪೊರೇಟ್‌ ಖರೀದಿದಾರರಿಗೆ ಅನುಕೂಲ ಮಾಡಿಕೊಡುತ್ತಿದೆ ಎಂದು ವಿರೋಧಿಗಳು ಆರೋಪಿಸುತ್ತಾರೆ.

ವರ್ತಕ ಹಾಗೂ ರೈತರ ಮಧ್ಯೆ ವಿವಾದ ಉಂಟಾದರೆ ಅದರ ಪರಿಹಾರ ವಿಚಾರದಲ್ಲಿ ಮಸೂದೆಯು ರೈತರಿಗೆ ಸಾಕಷ್ಟು ಭದ್ರತೆಯನ್ನು ನೀಡುತ್ತಿಲ್ಲ. ವರ್ತಕ ಹಾಗೂ ರೈತರ ಮಧ್ಯೆ ವಿವಾದ ಉಂಟಾದರೆ ಉಪ ವಿಭಾಗಾಧಿಕಾರಿಗೆ ದೂರು ನೀಡಿ, ಸಂಧಾನದ ಮೂಲಕ ಇಬ್ಬರಿಗೂ ಸ್ವೀಕಾರಾರ್ಹವಾದ ಪರಿಹಾರವನ್ನು ಕಂಡುಕೊಳ್ಳಬಹುದು. ಉಪವಿಭಾಗಾಧಿಕಾರಿಯು ಇಂಥ ದೂರುಗಳ ಇತ್ಯರ್ಥಕ್ಕೆ ಪ್ರತ್ಯೇಕ ಮಂಡಳಿಯನ್ನು ರಚಿಸಬೇಕು’ ಎಂದು ಮಸೂದೆ ಹೇಳುತ್ತದೆ.

ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳುವ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ರೈತರ ವಿರುದ್ಧ ಬಳಸುವ ಅಪಾಯವಿದೆ. ನ್ಯಾಯಾಲಯದ ಮೆಟ್ಟಿಲು ಹತ್ತುವ ಅವಕಾಶ ರೈತರಿಗೆ ಇಲ್ಲ ಎಂಬುದು ಮಸೂದೆಯನ್ನು ವಿರೋಧಿಸುವವರ ಆಕ್ಷೇಪ.

ಕಾಂಗ್ರೆಸ್‌ ಪ್ರತಿಭಟನೆ
ನವದೆಹಲಿ (ಪಿಟಿಐ): ರಾಜ್ಯಸಭೆಯಲ್ಲಿ ಅನುಮೋದನೆ ಪಡೆದ ಮಸೂದೆಗಳನ್ನು ರೈತ ವಿರೋಧಿ ಎಂದು ಕರೆದಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿಯು ರೈತರನ್ನು ತಪ್ಪುದಾರಿಗೆ ಎಳೆಯುತ್ತಿದೆ ಎಂದು ಆರೋಪಿಸಿದೆ.

ಚಂಡೀಗಡದಿಂದ ದೆಹಲಿಯವರೆಗೆ ರೈತರು ಟ್ರ್ಯಾಕ್ಟರ್ ಜಾಥಾ ಮೂಲಕ ಪ್ರತಿಭಟನೆ ಹಮ್ಮಿಕೊಂಡಿದ್ದರು. ‘ಕಿಸಾನ್ ಆಕ್ರೋಶ ಜಾಥಾ’ವನ್ನು ಪಂಜಾಬ್–ಹರಿಯಾಣ ಗಡಿಯಲ್ಲಿ ತಡೆಯಲಾಯಿತು. ಪಂಜಾಬ್ ಹಾಗೂ ಹರಿಯಾಣದಲ್ಲಿ ಭಾರತ್ ಕಿಸಾನ್ ಯೂನಿಯನ್ ಸೇರಿ ಹಲವು ರೈತ ಸಂಘಟನೆಗಳು ರಸ್ತೆತಡೆ, ರೈಲು ತಡೆ ನಡೆಸಿದವು.

ಕೃಷಿ ಮಸೂದೆ ಸಮರ್ಥನೆ: ಕೇಂದ್ರ ಸಚಿವರು ಮತ್ತು ಬಿಜೆಪಿ ನಾಯಕರು ಸಂಸತ್ತಿನ ಹೊರಗೆ ಕೃಷಿ ಮಸೂದೆಗಳ ಬಲವಾದ ಸಮರ್ಥನೆಗೆ ಇಳಿದಿದ್ದಾರೆ. ವಿರೋಧ ಪಕ್ಷಗಳು, ಬಿಜೆಪಿ–ಆರ್‌ಎಸ್‌ಎಸ್‌ನ ರೈತ ಮತ್ತು ಕಾರ್ಮಿಕ ಸಂಘಟನೆಗಳು ಎತ್ತಿರುವ ಪ್ರಶ್ನೆಗಳಿಗೆ ಉತ್ತರಿಸಲು ಯತ್ನಿಸಿದ್ದಾರೆ. ರಾಜ್ಯಸಭೆಯಲ್ಲಿ ಎರಡು ಕೃಷಿ ಮಸೂದೆಗಳು ಅನುಮೋದನೆ ಪಡೆದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೊ ಟ್ವೀಟ್ ಮಾಡಿದರು. ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂಸತ್ತಿನ ಹೊರಗೆ ಮಸೂದೆಗಳ ಪರವಾಗಿ ಮಾತನಾಡಿದ್ದಾರೆ. ಈ ಮಸೂದೆಗಳು ಕಾಯ್ದೆಯಾಗಿ ಜಾರಿಯಾದರೆ, ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ವ್ಯವಸ್ಥೆ ರದ್ದಾಗುತ್ತದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ. ಎಂಎಸ್‌ಪಿ ವ್ಯವಸ್ಥೆ ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ನಡ್ಡಾ ಮತ್ತು ರಾಜನಾಥ್‌ ಸಿಂಗ್ ಸಹ ಇದೇ ಮಾತು ಹೇಳಿದ್ದಾರೆ.

‘ಎಂಎಸ್‌ಪಿ ಪದ್ಧತಿ ಮುಂದುವರಿಯಲಿದೆ. ಸರ್ಕಾರವು ರೈತರಿಂದ ಕೃಷಿ ಉತ್ಪನ್ನಗಳನ್ನು ಖರೀದಿಸಲಿದೆ. ರೈತರು ಮತ್ತು ಅವರ ಮುಂದಿನ ತಲೆಮಾರಿನವರ ಜೀವನವನ್ನು ಸುಧಾರಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ನಾವು ತೆಗೆದುಕೊಳ್ಳುತ್ತೇವೆ’ ಎಂದು ಮೋದಿ ತಮ್ಮ ಟ್ವಿಟರ್ ವಿಡಿಯೊ ಮೂಲಕ ಹೇಳಿದ್ದಾರೆ.

ಯಾವುವು ಮಸೂದೆಗಳು?
1. ಕೃಷಿ ಉತ್ಪನ್ನ ಮಾರಾಟ ಮತ್ತು ವಾಣಿಜ್ಯ ( ಉತ್ತೇಜನ ಮತ್ತು ಸೌಲಭ್ಯ) ಮಸೂದೆ– 2020

2. ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತಂತೆ ರೈತರ ಜತೆ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ ಮಸೂದೆ–2020

3. ಅಗತ್ಯ ಸರಕುಗಳ (ತಿದ್ದುಪಡಿ) ಮಸೂದೆ–2020

ಈ ಮೂರೂ ಮಸೂದೆಗಳಿಗೆ ವಿರೋಧ ವ್ಯಕ್ತವಾಗಿದೆ. ಆದರೆ ಮೊದಲ ಮಸೂದೆಯ ಬಗ್ಗೆ ಹೆಚ್ಚು ತಕರಾರುಗಳಿವೆ. ಮೊದಲ ಮಸೂದೆಯಲ್ಲಿ ಉಲ್ಲೇಖಿಸಲಾಗಿರುವ ‘ವ್ಯಾಪಾರ ಪ್ರದೇಶ, ವರ್ತಕ, ವಿವಾದ ಇತ್ಯರ್ಥ ಹಾಗೂ ಮಾರುಕಟ್ಟೆ ಶುಲ್ಕ’ ವಿಚಾರಗಳು ವಿರೋಧಕ್ಕೆ ಪ್ರಮುಖ ಕಾರಣಗಳಾಗಿವೆ.

*
ಭಾರತದ ಕೃಷಿರಂಗದಲ್ಲೇ ಇದು ಪರ್ವಕಾಲ. ಕೃಷಿಕ್ಷೇತ್ರ ಸಂಪೂರ್ಣ ಪರಿವರ್ತನೆಯಾಗಲಿದೆ. ಮಧ್ಯವರ್ತಿಗಳ ಹಾವಳಿ ಕೊನೆಯಾಗಲಿದೆ.
–ನರೇಂದ್ರ ಮೋದಿ, ಪ್ರಧಾನಿ

*
ರೈತರು ಹೊಲದಲ್ಲಿ ಚಿನ್ನ ಬೆಳೆಯುತ್ತಾರೆ. ಸರ್ಕಾರವು ಅಂತಹ ರೈತರು ರಕ್ತದ ಕಣ್ಣೀರು ಸುರಿಸುವಂತೆ ಮಾಡಿದೆ. ಕನಿಷ್ಠ ಬೆಂಬಲ ಬೆಲೆಗೆ ಖಾತರಿ ಏಕಿಲ್ಲ?
ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

*
ಎಂಎಸ್‌ಪಿ ಪದ್ಧತಿ ಮುಂದು ವರಿಯಲಿದೆ ಎಂದುಸರ್ಕಾರ ಹೇಳುತ್ತಿದೆ. ಆದರೆ, ಈ ಮೂರೂ ಮಸೂದೆಗಳಲ್ಲಿ ಎಲ್ಲಿಯೂ ಎಂಎಸ್‌ ಪಿಯ ಉಲ್ಲೇಖವೇ ಇಲ್ಲ.
–ಸ್ವದೇಶಿ ಜಾಗರಣ ಮಂಚ್, ಆರ್‌ಎಸ್‌ಎಸ್‌ನ ಸಹಸಂಘಟನೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು