'ಕೇಂದ್ರ ಸರ್ಕಾರ ನಮ್ಮ ಬೇಡಿಕೆಗೆ ಒಪ್ಪದಿದ್ದರೆ ಸಭೆಯಿಂದ ಹೊರನಡೆಯುತ್ತೇವೆ'

ನವದೆಹಲಿ: ಪ್ರತಿಭಟನೆ ನಡೆಸುತ್ತಿರುವ ರೈತರ ಬೇಡಿಕೆಗಳ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರಕ್ಕೆ ಬಾರದಿದ್ದರೆ ಕೇಂದ್ರ ಸರ್ಕಾರದೊಂದಿಗಿನ ಐದನೇ ಸುತ್ತಿನ ಮಾತುಕತೆಯಿಂದಲೂ ಹೊರಗುಳಿಯುವುದಾಗಿ ರೈತ ಸಂಘಟನೆಗಳ ನಾಯಕರು ಶನಿವಾರ ತಿಳಿಸಿದ್ದಾರೆ.
'ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು, ಇಲ್ಲದಿದ್ದರೆ ನಾವು ಸಭೆಯಿಂದ ಹೊರನಡೆಯುತ್ತೇವೆ" ಎಂದು ಇಲ್ಲಿನ ವಿಜ್ಞಾನ ಭವನದಲ್ಲಿ ಕೇಂದ್ರ ಸರ್ಕಾರದೊಂದಿಗೆ ನಡೆಯುತ್ತಿರುವ ಸಭೆಯಲ್ಲಿ ರೈತ ನಾಯಕರು ತಿಳಿಸಿದ್ದಾರೆ.
ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸಭೆಯಲ್ಲಿ ರೈತ ಮುಖಂಡರಿಗೆ ಪ್ರತಿಭಟನಾ ಸ್ಥಳದಲ್ಲಿರುವ ವೃದ್ಧರು ಮತ್ತು ಮಕ್ಕಳನ್ನು ತಮ್ಮ ಮನೆಗಳಿಗೆ ಮರಳುವಂತೆ ಕೇಳಿಕೊಳ್ಳುವಂತೆ ಮನವಿ ಮಾಡಿದರು.
ಕೇಂದ್ರದೊಂದಿಗೆ ನಾಲ್ಕನೇ ಸಭೆಯು ಇಂದು ನಡೆಯುತ್ತಿದ್ದು, ಈ ಸಭೆಗೂ ಮುನ್ನ ನಡೆದಿರುವ ಮೂರು ಸಭೆಗಳಲ್ಲಿ ನೂತನವಾಗಿ ಜಾರಿಗೆ ತಂದಿರುವ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ಹಿಂಪಡೆಯುವಂತೆ ರೈತರು ಒತ್ತಾಯಿಸಿದ್ದಾರೆ.
ರೈತರು ದೀರ್ಘಾವಧಿಗೆ ಸಿದ್ಧರಾಗಿ ಬಂದಿದ್ದಾರೆ ಮತ್ತು ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ ತಮ್ಮ ಪ್ರತಿಭಟನೆಯನ್ನು ಮುಂದುವರಿಸಲು ಸಿದ್ಧರಾಗಿದ್ದಾರೆ ಎಂದು ರೈತ ಮುಖಂಡರೊಬ್ಬರು ತಿಳಿಸಿದ್ದಾರೆ.
'ಒಂದು ವರ್ಷ ಉಳಿಯಲು ಬೇಕಾಗುವಷ್ಟು ವಸ್ತುಗಳನ್ನು ನಮ್ಮೊಂದಿಗೆ ತಂದಿದ್ದೇವೆ. ನಾವು ಕಳೆದ ಹಲವಾರು ದಿನಗಳಿಂದ ರಸ್ತೆಯಲ್ಲಿದ್ದೇವೆ. ನಾವು ರಸ್ತೆಯಲ್ಲೇ ಇರಬೇಕೆಂದು ಸರ್ಕಾರ ಬಯಸಿದರೆ, ನಮಗೆ ಯಾವುದೇ ಸಮಸ್ಯೆ ಇಲ್ಲ. ನಾವು ಅಹಿಂಸೆಯ ಹಾದಿಯನ್ನು ಬದಲಿಸುವುದಿಲ್ಲ. ಪ್ರತಿಭಟನಾ ಸ್ಥಳದಲ್ಲಿ ನಾವು ಏನು ಮಾಡುತ್ತಿದ್ದೇವೆಂದು ಗುಪ್ತಚರ ಇಲಾಖೆಯು ನಿಮಗೆ ತಿಳಿಸುತ್ತದೆ' ಎಂದು ಸಭೆ ನಡೆಯುತ್ತಿದ್ದ ಸ್ಥಳದಲ್ಲಿದ್ದ ರೈತ ನಾಯಕರೊಬ್ಬರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಪ್ರತಿನಿಧಿಗಳೊಂದಿಗೆ ಇಂದಿನ ಸಭೆಯಲ್ಲಿ ಭಾಗವಹಿಸಿರುವ ಪಂಜಾಬ್ನ ಜಮ್ಹೂರಿ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಕುಲ್ವಂತ್ ಸಿಂಗ್ ಸಂಧು ಮಾತನಾಡಿ, 'ಕೆನಡಾ ಸಂಸದರು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು, ನಂತರ ಕೆನಡಾದ ಪ್ರಧಾನಿ ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಕೆನಡಾದ ಸಂಸತ್ತು ಈ ವಿಷಯದ ಬಗ್ಗೆ ಚರ್ಚಿಸಬಹುದಾದರೆ, ನಮ್ಮ ಸಂಸತ್ತು ಅದನ್ನು ಏಕೆ ಮಾಡಲು ಸಾಧ್ಯವಿಲ್ಲ?' ಎಂದು ಹೇಳಿದ್ದಾರೆ.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.