ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆ.2ರ ವೇಳೆಗೆ ದೆಹಲಿ ಗಡಿಯಲ್ಲಿ ದಾಖಲೆ ಸಂಖ್ಯೆಯ ರೈತರ ನಿರೀಕ್ಷೆ: ರೈತ ಮುಖಂಡ

Last Updated 30 ಜನವರಿ 2021, 11:45 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ದೆಹಲಿ ಗಡಿ ಪ್ರದೇಶಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಯು ಫೆಬ್ರವರಿ 2ರ ವೇಳೆಗೆ ದಾಖಲೆ ಸಂಖ್ಯೆಯ ರೈತರನ್ನು ನಿರೀಕ್ಷಿಸಬಹುದಾಗಿದೆ ಎಂದು ರೈತ ಮುಖಂಡ ಬಲ್ಬೀರ್ ಸಿಂಗ್ ರಾಜೇವಾಲ್ ಶನಿವಾರ ಹೇಳಿಕೆ ನೀಡಿದ್ದಾರೆ.

ಗಣರಾಜ್ಯೋತ್ಸದ ದಿನದಂದು ನಡೆದ ಟ್ರ್ಯಾಕ್ಟರ್ ಪೆರೇಡ್‌ನಲ್ಲಿ ಹಿಂಸಾಚಾರ ಸಂಭವಿಸಿದ ಹಿನ್ನೆಲೆಯಲ್ಲಿ ರೈತರ ಸಂಖ್ಯೆಯಲ್ಲಿ ಗಣನೀಯ ಕುಸಿತವುಂಟಾಗಿತ್ತು. ಕೆಲವು ರೈತ ಸಂಘಟನೆಗಳು ಪ್ರತಿಭಟನೆಯಿಂದ ಹಿಂದೆ ಸರಿದಿದ್ದವು. ಈ ಮಧ್ಯೆ ಬಿಕೆಯು ಮುಖಂಡ ರಾಕೇಶ್ ಟಿಕಾಯತ್ ರೈತರಿಗಾಗಿ ಕಣ್ಣೀರು ಸುರಿಸುವುದರೊಂದಿಗೆ ಹೋರಾಟ ಮಗದೊಮ್ಮೆ ಬಲವೃದ್ಧಿಸಿಕೊಂಡಿದೆ.

ನಾವು ಜನವರಿ 26ರ ಬಳಿಕವೂ ಶಾಂತಿಯುತ ಪ್ರತಿಭಟನೆಯನ್ನು ನಡೆಸುತ್ತಿದ್ದೇವೆ. ಇಂದು (ಶನಿವಾರ) ಕೂಡಾ ಹೋರಾಟ ಶಾಂತಿಯುವಾಗಿ ಸಾಗಿದೆ. ಆದರೆ ಗಣರಾಜ್ಯೋತ್ಸದ ದಿನದಂದು ನಡೆದ ಹಿಂಸಾಚಾರ ಖಂಡನೀಯ ಹಾಗೂ ದುರದೃಷ್ಟಕರ ಎಂದು ಭಾರತೀಯ ಕಿಸಾನ್ ಒಕ್ಕೂಟದ (ಬಿಕೆಯು) ಅಧ್ಯಕ್ಷ ಬಲ್ಬೀರ್ ಸಿಂಗ್ ರಾಜೇವಾಲ್ತಿಳಿಸಿದರು.

ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ ಹಾಗೂ ಉತ್ತರಾಖಂಡದಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರತಿಭಟನಾ ಸ್ಥಳವನ್ನು ತಲುಪುತ್ತಿದ್ದಾರೆ. ಬಹುಶಃ ಫೆಬ್ರವರಿ 2ರ ವೇಳೆಗೆ ಪ್ರತಿಭಟನಾ ಸ್ಥಳದಲ್ಲಿ ದಾಖಲೆ ಸಂಖ್ಯೆಯ ರೈತರು ಜಮಾಯಿಸಲಿದ್ದಾರೆ. ಆಂದೋಲನವು ಶಾಂತಿಯುತವಾಗಿ ಸಾಗಲಿದೆ ಎಂದು ತಿಳಿಸಿದರು.

ಹೋರಾಟವು ಶಾಂತಿಯುತವಾಗಿ ನಡೆಸುವುದು ನಮ್ಮ ಜವಾಬ್ದಾರಿಯಾಗಿದೆ. ರೈತರ ಆಂದೋಲನವನ್ನು ಹಾದಿ ತಪ್ಪಿಸಲು ಸರ್ಕಾರವು ಸುಳ್ಳು ಸುದ್ದಿಯನ್ನು ಹರಡುತ್ತಿದೆ. ಪ್ರತಿಭಟನಾ ಸ್ಥಳದಲ್ಲಿ ರೈತರನ್ನು ಕೆರಳಿಸುವ ಮೂಲಕ ಹಿಂಸಾಚಾರಕ್ಕೆ ಪ್ರಚೋದಿಸುತ್ತಿದ್ದಾರೆ. ಆದರೆ ರೈತರು ಎಚ್ಚರವಾಗಿದ್ದು, ಯಾವುದೇ ರೀತಿಯ ಹಿಂಸಾಚಾರಕ್ಕೆ ಮುಂದಾಗುವುದಿಲ್ಲ ಎಂದು ಹೇಳಿದರು.

ಏತನ್ಮಧ್ಯೆ ಗಾಜಿಪುರ ಗಡಿ ಪ್ರದೇಶಕ್ಕೆ ಹೆಚ್ಚಿನ ಸಂಖ್ಯೆಯ ರೈತರು ಹರಿದು ಬರುತ್ತಿದ್ದಾರೆ. ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದ ಮಹಾಪಂಚಾಯಿತಿ ಬಳಿಕ ರೈತರ ಹೋರಾಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ದೊರಕುತ್ತಿದೆ. ಹರಿಯಾಣ ಹಾಗೂ ರಾಜಸ್ಥಾನ ಜಿಲ್ಲೆಗಳಿಂದಲೂ ರೈತರು ಆಗಮಿಸುತ್ತಿದ್ದಾರೆ.

ಈ ನಡುವೆ ಮಹಾತ್ಮ ಗಾಂಧಿ ಪುಣ್ಯಸ್ಮರಣೆಯಂದು ರೈತ ಮುಖಂಡರು ಶನಿವಾರದಂದು ಒಂದು ದಿನದ ಸದ್ಭಾವನಾ ದಿವಸ ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT