ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಆತ್ಮಹತ್ಯೆ : ತಾಳೆಯಾಗದ ಕೇಂದ್ರ–ರಾಜ್ಯದ ಲೆಕ್ಕ

2019ರಿಂದ 2021ರ ಅವಧಿ: ರಾಜ್ಯದಲ್ಲಿ ರೈತರ ಆತ್ಮಹತ್ಯೆ
Last Updated 16 ಫೆಬ್ರುವರಿ 2023, 19:15 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರದ ಲೆಕ್ಕದ ಪ್ರಕಾರ, ಕರ್ನಾಟಕದಲ್ಲಿ 2019ರಿಂದ 2021ರ ಅವಧಿಯಲ್ಲಿ 3,573 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಕರ್ನಾಟಕ ಸರ್ಕಾರದ ಅಂಕಿಅಂಶಗಳ ಪ್ರಕಾರ, ಈ ಅವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 2,863!

ಕರ್ನಾಟಕದಲ್ಲಿನ ರೈತರ ಆತ್ಮಹತ್ಯೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ನೀಡಿದ ಉತ್ತರ, ಕರ್ನಾಟಕ ವಿಧಾನಸಭೆಯಲ್ಲಿ ಕಂದಾಯ ಸಚಿವರು ನೀಡಿದ ಉತ್ತರ ಒಂದೊಂದು ರೀತಿ ಇವೆ. ಅಂಕಿ ಅಂಶಗಳು ತಾಳೆ ಆಗುತ್ತಿಲ್ಲ.

ಲೋಕಸಭೆಯಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಫೆಬ್ರುವರಿ 7ರಂದು ಲಿಖಿತ ಉತ್ತರ ನೀಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್, ‘ದೇಶದಲ್ಲಿ 2019ರಲ್ಲಿ 5,957, 2020ರಲ್ಲಿ 5,579, 2021ರಲ್ಲಿ 5,318 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕರ್ನಾಟಕದಲ್ಲಿ ಮೂರು ವರ್ಷಗಳಲ್ಲಿ 3,573 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನ್ನದಾತರ ಆತ್ಮಹತ್ಯೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯುರೋ (ಎನ್‌ಸಿಆರ್‌ಬಿ) ಈ ಸಂಬಂಧ ಗೃಹ ಇಲಾಖೆಗೆ ವರದಿ ನೀಡಿದೆ. ಯಾವ ಕಾರಣಕ್ಕೆ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಪ್ರತ್ಯೇಕ ಕಾರಣಗಳನ್ನು ನೀಡಿಲ್ಲ’ ಎಂದು ಹೇಳಿದ್ದರು.

ಕರ್ನಾಟಕ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಬೆಳ್ಳಿ ಪ್ರಕಾಶ್‌ ಪ್ರಶ್ನೆಗೆ ಫೆಬ್ರುವರಿ 15ರಂದು ಲಿಖಿತ ಉತ್ತರ ನೀಡಿದ ಕಂದಾಯ ಸಚಿವ ಆರ್.ಅಶೋಕ, ‘ಕೃಷಿ ಸಾಲದಿಂದ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಸರ್ಕಾರದ ಗಮನಕ್ಕೆ ಬಂದಿದೆ. ನಾಲ್ಕು ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡ ರೈತರ ಸಂಖ್ಯೆ 3,173’ ಎಂದು ತಿಳಿಸಿದ್ದಾರೆ.

‘2019ರಲ್ಲಿ 1091 ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದು, 196 ಕುಟುಂಬಗಳ ಪರಿಹಾರದ ಅರ್ಜಿ ತಿರಸ್ಕರಿಸಲಾಗಿದೆ. 2020ರಲ್ಲಿ 855 ರೈತರು ಜೀವ ಕಳೆದುಕೊಂಡಿದ್ದು, 718 ಕುಟುಂಬಗಳಿಗೆ ಪರಿಹಾರ ವಿತರಿಸಲಾಗಿದೆ. 2021ರಲ್ಲಿ 917 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 134 ಕುಟುಂಬಗಳ ಪರಿಹಾರದ ಅರ್ಜಿಯನ್ನು ತಿರಸ್ಕರಿಸಲಾಗಿದೆ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT