ಬುಧವಾರ, ಅಕ್ಟೋಬರ್ 21, 2020
24 °C
ಗಾಂಧಿ, ಶಾಸ್ತ್ರಿ ಜಯಂತಿಯಂದು ಎಐಸಿಸಿ ಅಧ್ಯಕ್ಷೆ ವಿಶ್ವಾಸ

ಕೃಷಿ ಮಸೂದೆಗಳ ವಿರುದ್ಧದ ಹೋರಾಟಕ್ಕೆ ಜಯ: ಸೋನಿಯಾ ಗಾಂಧಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರಪಿತ ಮಹಾತ್ಮಗಾಂಧಿ ಅವರು ರೈತರು, ಕಾರ್ಮಿಕರು ಮತ್ತು ದುಡಿಯುವ ವರ್ಗದ ಬಗ್ಗೆ ಬಹುದೊಡ್ಡ ಸಹಾನುಭೂತಿಯುಳ್ಳ ವ್ಯಕ್ತಿಯಾಗಿದ್ದರು‘ ಎಂದು ಬಣ್ಣಿಸಿದ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ,‘ಅವರು ತೋರಿದ ಹಾದಿಯಲ್ಲೇ ಸಾಗುತ್ತಿರುವ ಕೃಷಿ ಮಸೂದೆಗಳ ವಿರುದ್ಧದ ಆಂದೋಲನವೂ ಯಶಸ್ವಿಯಾಗಲಿದೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಅವರ ಜನ್ಮದಿನದ ಅಂಗವಾಗಿ, ಉಭಯ ನಾಯಕರಿಗೆ ನಮಗಳನ್ನು ಸಲ್ಲಿಸಿ ವಿಡಿಯೊ ಮೂಲಕ ಸಂದೇಶ ನೀಡಿದ ಅವರು, ‘ಮಹಾತ್ಮ ಗಾಂಧೀಜಿ, ರೈತರು ಸೇರಿದಂತೆ ಎಲ್ಲ ದುಡಿಯುವ ವರ್ಗದ ಬಗ್ಗೆ ಸಹಾನುಭೂತಿ ಉಳ್ಳವರಾಗಿದ್ದರು. ಶಾಸ್ತ್ರಿಯವರು ‘ಜೈಜವಾನ್, ಜೈ ಕಿಸಾನ್‌‘ ಎಂಬ ಘೋಷಣೆ ನೀಡಿದ್ದಾರೆ‘ ಎಂದು ಇಬ್ಬರು ಮಹಾತ್ಮರ ರೈತ ಪ್ರೀತಿಯನ್ನು ನೆನಪಿಸಿಕೊಂಡರು.

‘ಗಾಂಧಿ ಜಯಂತಿಯ ದಿನದಂದು ನಮ್ಮ ಪಕ್ಷ ದೇಶದಾದ್ಯಂತ ಪ್ರತಿ ಜಿಲ್ಲೆಗಳಲ್ಲೂ ಕೃಷಿಕರು, ಕೃಷಿ ಕಾರ್ಮಿಕರಿಗೆ ಬೆಂಬಲ ಸೂಚಿಸಿ ಕೃಷಿ ಮಸೂದೆಗಳ ವಿರುದ್ಧ ಧರಣಿ ನಡೆಸುತ್ತಿದೆ‘ ಎಂದು ಹೇಳಿದರು. 

ಹಳ್ಳಿಗಳು, ಹೊಲಗಳು ಮತ್ತು ಕೊಟ್ಟಿಗೆಗಳಲ್ಲಿ ಭಾರತದ ಆತ್ಮ ನೆಲೆಸಿದೆ ಎಂದು ಮಹಾತ್ಮ ಗಾಂಧಿ ಹೇಳುತ್ತಿದ್ದನ್ನು ಉಲ್ಲೇಖಿಸಿದ ಅವರು, ದೇಶದ ಇದೇ ಕೃಷಿಕರು ಮತ್ತು ಕೃಷಿ ಕಾರ್ಮಿಕರು ರೈತ ವಿರೋಧಿ ಕೃಷಿ ಮಸೂದೆಗಳ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ ಎಂದರು.

‘ರೈತರು ತಮ್ಮ ಬೆವರಿನಿಂದ ದೇಶಕ್ಕೆ ಆಹಾರ ಧಾನ್ಯಗಳನ್ನು ಪೂರೈಸುತ್ತಿದ್ದರೂ, ಮೋದಿ ಸರ್ಕಾರ ಅಂಥ ಅನ್ನದಾತರ ಕಣ್ಣಲ್ಲಿ ರಕ್ತ ಸುರಿಸುವಂತೆ ಮಾಡುತ್ತಿದೆ‘ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ಪಕ್ಷ ಯಾವಾಗಲೂ ಜನಾಭಿಪ್ರಾಯ ಪಡೆದು, ಜನಪರವಾದ ಕಾನೂನು ಕಾಯ್ದೆಗಳನ್ನು ರೂಪಿಸಿದೆ. ಯಾವುದೇ ಕಾನೂನುಗಳನ್ನು ಜಾರಿಗೆ ತರುವ ಮುನ್ನ ಜನರ ಅಭಿಪ್ರಾಯ ಸಂಗ್ರಹಿಸುತ್ತಿತ್ತು. ಪ್ರಜಾಪ್ರಭುತ್ವದಲ್ಲಿನ ಅಂಶಗಳೂ ದೇಶವಾಸಿಗೆ ಪೂರಕವಾಗಿ ಕಾನೂನುಗಳನ್ನು ರೂಪಿಸಬೇಕು ಎಂದು ಹೇಳುತ್ತದೆ. ಆದರೆ, ಮೋದಿ ಸರ್ಕಾರ ಇಂಥ ವಿಚಾರಗಳನ್ನು ನಂಬುತ್ತದೆಯೇ? ಎಂದು ಪ್ರಶ್ನಿಸಿದರು.

‘ಕಾಂಗ್ರೆಸ್‌ ಪಕ್ಷ ಕೃಷಿ ಮಸೂದೆಗಳ ವಿರುದ್ಧ ನಿರಂತರವಾಗಿ ಹೋರಾಟ ನಡೆಸಲಿದೆ. ಇಂದು ನಮ್ಮ ಕಾರ್ಯಕರ್ತರು ದೇಶದಾದ್ಯಂತ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕೃಷಿ ಕಾರ್ಮಿಕರು, ಕೃಷಿಕರೊಂದಿಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಆಂದೋಲನ ಯಶಸ್ವಿಯಾಗುತ್ತದೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು