ಭಾನುವಾರ, ಜನವರಿ 17, 2021
22 °C

ಪೊಲೀಸರು ಸೂಚಿಸಿದ 'ಧರಣಿ ಸ್ಥಳ'ಕ್ಕೆ ಹೋಗಲು ರೈತರ ನಿರಾಕರಣೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಸಿಂಗು ಗಡಿಯಲ್ಲಿ ಜಮಾವಣೆಗೊಂಡಿರುವ ಸಾವಿರಾರು ರೈತರು ಶನಿವಾರ ಬೆಳಿಗ್ಗೆ ಭಾರಿ ಭದ್ರತೆಯ ನಡುವೆ ಅಲ್ಲಿಯೇ ಸಭೆ ನಡೆಸಿದ್ದಾರೆ. ರೈತರ ಪ್ರತಿಭಟನೆಗಾಗಿ ಉತ್ತರ ದೆಹಲಿಯಲ್ಲಿ ಪೊಲೀಸರು ನಿಗದಿ ಮಾಡಿರುವ ಸ್ಥಳಕ್ಕೆ ತೆರಳಲು ನಿರಾಕರಿಸಿರುವ ರೈತರು ಸಿಂಗು ಗಡಿಯಲ್ಲಿಯೇ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ.

ಸಿಂಗು ಗಡಿಯಲ್ಲಿ ನಡೆದ ಸಭೆಯ ನಂತರ, ಮಾತನಾಡಿದ ರೈತ ಮುಖಂಡರೊಬ್ಬರು ಇಲ್ಲಿಯೇ ಪ್ರತಿಭಟನೆ ಮುಂದುವರಿಸುವುದಾಗಿ ಘೋಷಿಸಿದರು.

'ನಾವು ಇಲ್ಲಿಂದ (ಸಿಂಗು ಬಾರ್ಡರ್) ಬೇರೆಡೆಗೆ ತೆರಳುವುದಿಲ್ಲ. ಇಲ್ಲಿಯೇ ನಮ್ಮ ಹೋರಾಟವನ್ನು ಮುಂದುವರಿಸುತ್ತೇವೆ. ಇಲ್ಲಿಂದ ಹಿಂದಕ್ಕೂ ಹೋಗುವುದಿಲ್ಲ. ಪ್ರತಿಭಟನೆಯಲ್ಲಿ ಭಾಗವಹಿಸಲು ಸಾವಿರಾರು ರೈತರು ಪಂಜಾಬ್ ಮತ್ತು ಹರಿಯಾಣದಿಂದ ಬಂದಿದ್ದಾರೆ' ಎಂದು ಅವರು ಹೇಳಿದರು.

ಇನ್ನು ಟಿಕ್ರಿ ಗಡಿಯಲ್ಲಿ ಸೇರಿರುವ ರೈತರು ಪೊಲೀಸರು ಗೊತ್ತುಪಡಿಸಿದ ಪ್ರತಿಭಟನಾ ಸ್ಥಳಕ್ಕೆ ತೆರಳಬೇಕೆ ಬೇಡವೇ ಎಂಬುದರ ಬಗ್ಗೆ ನಿರ್ಧರಿಸಿಲ್ಲ. ಈ ಕುರಿತು ಅವರು ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳುವ ಸಾಧ್ಯತೆಗಳಿವೆ.

ರಾಷ್ಟ್ರ ರಾಜಧಾನಿಯ ಸಂತ ನಿರಂಕರಿ ಮೈದಾನದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ಶುಕ್ರವಾರ ನೂರಾರು ರೈತರು ದೆಹಲಿ ಪ್ರವೇಶಿಸಲು ಪ್ರಯತ್ನಿಸಿದರು. ಆದರೆ, ಅಶ್ರುವಾಯು, ಜಲಫಿರಂಗಿ, ಭದ್ರತಾ ಪಡೆಗಳೊಂದಿಗಿನ ಘರ್ಷಣೆ ನಂತರ ರೈತರು ಸಿಂಗು ಗಡಿಯಲ್ಲೇ ಉಳಿದರು. ಈ ಮಧ್ಯೆ, ಪ್ರತಿಭಟನೆಗಾಗಿ ಪೊಲೀಸರು ದೆಹಲಿಯಲ್ಲಿ ಸ್ಥಳ ನಿಗದಿ ಮಾಡಿದರಾದರೂ, ರೈತರು ಅಲ್ಲಿಗೆ ಹೋಗಲಿಲ್ಲ.


ರಸ್ತೆ ಅಡುಗೆ ಮಾಡಿದ ರೈತರು 

ರೈತರು ತಾವಿರುವಲ್ಲಿಯೇ ಬೆಳಗ್ಗಿನ ಉಪಾಹಾರ ಸಿದ್ಧಪಡಿಸುತ್ತಿದ್ದ ದೃಶ್ಯ ಇಂದು ಮುಂಜಾನೆ ಕಂಡು ಬಂತು.

ಕೇಂದ್ರದ ಕೃಷಿ ಕಾನೂನುಗಳನ್ನು ವಿರೋಧಿಸಿ ಪಂಜಾಬ್‌, ಹರಿಯಾಣ ರೈತರು ದೆಹಲಿ ಚಲೊ ಜಾಥಾ ಹಮ್ಮಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು