ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಷ್ಟ ಪ್ರಸ್ತಾವವಿದ್ದರಷ್ಟೇ ಮಾತುಕತೆ: ಕೇಂದ್ರಕ್ಕೆ ರೈತ ಮುಖಂಡರ ನೇರ ನುಡಿ

Last Updated 23 ಡಿಸೆಂಬರ್ 2020, 21:13 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಸರ್ಕಾರವು ಇತ್ತೀಚೆಗೆ ಜಾರಿಗೆ ತಂದ ಕೃಷಿ ಕ್ಷೇತ್ರದ ಕಾಯ್ದೆಗಳ ವಿರುದ್ಧ ರೈತರು ತಮ್ಮ ನಿಲುವನ್ನು ಇನ್ನಷ್ಟು ಬಿಗಿಗೊಳಿಸಿದ್ದಾರೆ. ಕಾಯ್ದೆಗಳಿಗೆ ತಿದ್ದುಪಡಿ ತರುವ ಪ್ರಸ್ತಾವವನ್ನು ಈಗಾಗಲೇ ತಿರಸ್ಕರಿಸಲಾಗಿದೆ. ಅಂತಹ ಅರ್ಥಹೀನ ಪ್ರಸ್ತಾವಗಳನ್ನು ಮುಂದಿಡಬೇಡಿ, ಸ್ಪಷ್ಟ ಮತ್ತು ಲಿಖಿತ ಪ್ರಸ್ತಾವ ಮುಂದಿಟ್ಟರೆ ಮಾತ್ರ ಮಾತುಕತೆ ಸಾಧ್ಯ ಎಂದು ರೈತರ ಸಂಘಟನೆಗಳ ಮುಖಂಡರು ಸರ್ಕಾರಕ್ಕೆ ಬುಧವಾರ ಸ್ಪಷ್ಟವಾಗಿ ಹೇಳಿದ್ದಾರೆ.

ಸ್ಪಷ್ಟ ಪ್ರಸ್ತಾವ ಬಂದರೆ ಮುಕ್ತ ಮನಸ್ಸಿನಿಂದ ಮಾತುಕತೆಗೆ ಸಿದ್ಧ. ಮೂರು ಕಾಯ್ದೆಗಳನ್ನು ಸಂಪೂರ್ಣವಾಗಿ ರದ್ದು ಮಾಡಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನುಬದ್ಧ ಖಾತರಿ ದೊರೆಯಬೇಕು ಎಂಬುದಕ್ಕಿಂತ ಕಡಿಮೆಯ ಯಾವುದೇ ಪ್ರಸ್ತಾವವನ್ನೂ ಒಪ್ಪುವುದಿಲ್ಲ ಎಂದು ರೈತ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಸರ್ಕಾರ ಒಂದು ಹೆಜ್ಜೆ ಮುಂದಿಟ್ಟರೆ ರೈತರು ಎರಡು ಹೆಜ್ಜೆ ಮುಂದಿಡುತ್ತಾರೆ. ಆದರೆ, ಸರ್ಕಾರವು ‘ಪ್ರೇಮ ಪತ್ರ’ ಬರೆಯುವುದನ್ನು ನಿಲ್ಲಿಸಬೇಕು ಎಂದು ಸ್ವರಾಜ್‌ ಅಭಿಯಾನದ ನಾಯಕ ಯೋಗೇಂದ್ರ ಯಾದವ್‌ ಹೇಳಿದ್ದಾರೆ.

ಮಮತಾ ಬೆಂಬಲ: ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರ ಜೊತೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ದೂರವಾಣಿ ಮೂಲಕ ಸಂವಾದ ನಡೆಸಿದರು.ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಡೆರೆಕ್ ಒಬ್ರಿಯಾನ್ ನೇತೃತ್ವದ ಐವರು ಸಂಸದರ ನಿಯೋಗವು ರೈತರನ್ನು ಭೇಟಿ ಮಾಡಿ ಪಕ್ಷದ ಬೆಂಬಲವನ್ನು ಸೂಚಿಸಿತು.

ಕಾಯ್ದೆ ಪರವಾಗಿ ಪತ್ರ: ಕಾಯ್ದೆಗಳನ್ನು ಬೆಂಬಲಿಸಿ ಪಂಜಾಬ್ ಸೇರಿದಂತೆ 20 ರಾಜ್ಯಗಳ ರೈತರು ಬರೆದಿರುವ ಪತ್ರಗಳು ಕೃಷಿ ಸಚಿವರ ಕೈಸೇರಿವೆ. ಆರು ಪೆ‌ಟ್ಟಿಗೆಗಳಲ್ಲಿ 3.13 ಲಕ್ಷ ಪತ್ರಗಳನ್ನು ರೈತರು ಬರೆದು ಸಹಿ ಹಾಕಿದ್ದಾರೆ. ಈ ಪೈಕಿ ಪಂಜಾಬ್‌ನಿಂದ 12,895, ಹರಿಯಾಣದಿಂದ 1.27 ಲಕ್ಷ ಪತ್ರಗಳು ಬಂದಿವೆ.

ಯಜ್ಞ: ಹೊಸ ಕೃಷಿ ಕಾನೂನುಗಳ ವಿಚಾರದಲ್ಲಿ ಕೇಂದ್ರ ಸರ್ಕಾರದ ಮನಸ್ಸು ಪರಿವರ್ತನೆಯಾಗಲಿ ಎಂದು ಆಶಿಸಿ ಉತ್ತರ ಪ್ರದೇಶದ ಸಂಭಾಲ್‌ನಲ್ಲಿ ಕೆಲವು ರೈತರು ಬುಧವಾರ ಯಜ್ಞ ನಡೆಸಿದರು. ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನಾಚರಣೆ ನಿಮಿತ್ತ ಯಜ್ಞ ಆಯೋಜಿಸಲಾಗಿತ್ತು. ‘ಸರ್ಕಾರದ ಬುದ್ಧಿ ಶುದ್ಧಿಗಾಗಿ ಯಜ್ಞ’ ನಡೆಸಿದ್ದಾಗಿ ಆಯೋಜಕರು ಹೇಳಿದ್ದಾರೆ.

ಪ್ರಧಾನಿ ಸಂವಾದ: ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ (ಪಿಎಂ–ಕಿಸಾನ್) ಮುಂದಿನ ಕಂತನ್ನುಶುಕ್ರವಾರ ರೈತರಿಗೆ ಬಿಡುಗಡೆ ಮಾಡಲಿದ್ದಾರೆ. ಸುಮಾರು 9 ಕೋಟಿ ಫಲಾನುಭವಿಗಳಿಗೆ ₹18,000 ಕೋಟಿ ಮೊತ್ತವನ್ನು ಅಂದು ವರ್ಗಾವಣೆ ಮಾಡಲಿದ್ದಾರೆ. ವರ್ಚುವಲ್‌ ಸಂವಾದದಲ್ಲಿ ಆರು ರಾಜ್ಯಗಳ ರೈತರ ಜೊತೆ ಪ್ರಧಾನಿ ಸಂವಾದ ನಡೆಸಲಿದ್ದಾರೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

‘ಪ್ರತಿಭಟನೆ ಮೊದಲು, ಮದುವೆ ಆಮೇಲೆ’
ಯುಎಇಯಲ್ಲಿ ಉದ್ಯೋಗದಲ್ಲಿರುವ ಸತ್ನಾಮ್ ಸಿಂಗ್ ಎಂಬುವರು ಎರಡು ವರ್ಷಗಳ ಬಳಿಕ ಎರಡು ತಿಂಗಳ ರಜೆ ಮೇಲೆ ಭಾರತಕ್ಕೆ ಬಂದಿದ್ದಾರೆ. ಮದುವೆಯಾಗಿ ಪತ್ನಿ ಜತೆ ಯುಎಇ ವಿಮಾನ ಹತ್ತಬೇಕಿದ್ದ ಅವರು ತಮ್ಮ ಮನಸ್ಸು ಬದಲಿಸಿದ್ದಾರೆ.

ಅವರು ನ.29ರಂದು ಪಂಜಾಬ್‌ನ ಜಲಂಧರ್‌ಗೆ ಬಂದಾಗ, ತಮ್ಮ ಅಣ್ಣ ಹಾಗೂ ಊರಿನ ಜನರು ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆಗೆ ಹೋಗಿರುವುದು ತಿಳಿಯಿತು.

ಎರಡು ದಿನ ಊರಲ್ಲಿ ಕಳೆದ ಅವರು, ಬೈಕ್ ಹತ್ತಿ ಸೀದಾ ಸಿಂಘು ಗಡಿಗೆ ಸ್ನೇಹಿತರ ಜೊತೆ ಬಂದುಬಿಟ್ಟರು. ‘ಪ್ರತಿಭಟನೆ ಮೊದಲು. ಮದುವೆ, ಉದ್ಯೋಗ ಆಮೇಲೆ’ ಎಂದು ವಿದೇಶದಲ್ಲಿ ಪ್ಲಂಬರ್ ಆಗಿರುವ ಸತ್ನಾಮ್ ಹೇಳುತ್ತಾರೆ.

‘ನಾನು ಯುಎಇಗೆ ಹೋಗುವ ಮುನ್ನ ರೈತನಾಗಿದ್ದೆ. ನನ್ನ ಜಮೀನನ್ನು ಮೊದಲು ಉಳಿಸಿಕೊಳ್ಳಬೇಕಿದೆ. ರೈತರ ಹೋರಾಟದಲ್ಲಿ ಜಯ ಸಿಗುವವರೆಗೂ ಇಲ್ಲಿ ಇರುತ್ತೇನೆ’ ಎಂದು ಹೇಳಿದ್ದಾರೆ.

ಪ್ರತಿಭಟನೆಯಿಂದ ತೊಂದರೆ ಸಲ್ಲದು
ರೈತರು ತಮ್ಮ ಪ್ರತಿಭಟನೆಯ ಹಕ್ಕನ್ನು ಸಮಸ್ಯೆ ಪರಿಹರಿಸಲು ಬಳಸಬೇಕೇ ವಿನಾ, ಸಾಮಾನ್ಯ ಜನಜೀವನಕ್ಕೆ ತೊಂದರೆ ಉಂಟುಮಾಡಲು ಬಳಸಬಾರದು ಎಂದು ಕೈಗಾರಿಕೆ ಮತ್ತು ವಾಣಿಜ್ಯೋದ್ಯಮ ಸಂಘದ (ಫಿಕ್ಕಿ) ಅಧ್ಯಕ್ಷ ಉದಯ್ ಶಂಕರ್ ಹೇಳಿದ್ದಾರೆ.

‘ಜನರ ಪ್ರತಿಭಟನೆಯ ಹಕ್ಕನ್ನು ನಾವು ಗೌರವಿಸಬೇಕಾದರೆ, ಪ್ರತಿಭಟನೆಯು ಜನರ ಸಾಮಾನ್ಯ ಜೀವನಕ್ಕೆ ಅಡ್ಡಿ ಉಂಟುಮಾಡಬಾರದು. ಈ ಮೂಲಕ ಸಾಮಾನ್ಯ ಜನಜೀವನ ಮತ್ತು ವ್ಯವಹಾರವನ್ನು ನಾವು ಗೌರವಿಸಬೇಕು’ ಎಂದಿದ್ದಾರೆ.

ಬಿಕ್ಕಟ್ಟು ಪರಿಹಾರಕ್ಕೆ ಬಹುಮುಖ್ಯವಾಗಿ, ರಚನಾತ್ಮಕ ಚೌಕಟ್ಟಿನಲ್ಲಿ ಸಂವಾದ ನಡೆಸುವ ಅವಶ್ಯಕತೆಯಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ಕೃಷಿ ಕ್ಷೇತ್ರವು ಕನಿಷ್ಠ ಸುಧಾರಿತ ಕ್ಷೇತ್ರಗಳಲ್ಲಿ ಒಂದಾಗಿದೆ. ನಾವು ಕೃಷಿ ಉತ್ಪಾದನೆ, ಇಳುವರಿಯನ್ನು ಹೆಚ್ಚಿಸಬೇಕಾಗಿದೆ. ರೈತರ ಆದಾಯವನ್ನು ಹೆಚ್ಚಿಸಬೇಕಾಗಿದೆ. ಕೃಷಿ ಕ್ಷೇತ್ರಕ್ಕೆ ಬಂಡವಾಳವನ್ನು ಹರಿಸಬೇಕಿದೆ’ ಎಂದಿದ್ದಾರೆ.

***

ಕೃಷಿ ಕ್ಷೇತ್ರವನ್ನು ದೊಡ್ಡ ಪ್ರಮಾಣದಲ್ಲಿ ಸುಧಾರಿಸುವ ಪ್ರಯತ್ನಗಳು ಕಳೆದ ಆರು ವರ್ಷಗಳಲ್ಲಿ ನಡೆದಿವೆ. ರೈತರು ದಿನಾಂಕ ನಿಗದಿಪಡಿಸಿ ಮಾತುಕತೆಗೆ ಬರಬೇಕು.
-ನರೇಂದ್ರ ಸಿಂಗ್ ತೋಮರ್,ಕೇಂದ್ರ ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT